ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಬೆಂಬಲಿಸಲಿಚ್ಛಿಸುವ ಮತದಾರರ ಹೆಸರು ನಾಪತ್ತೆ

ದೀಪಕ ಚೊಂಚೋರೆ ಆರೋಪ
Last Updated 6 ಡಿಸೆಂಬರ್ 2022, 4:17 IST
ಅಕ್ಷರ ಗಾತ್ರ

ಧಾರವಾಡ: ‘ಸೋಲುವ ‌ಭೀತಿಯಿಂದ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಬೆಂಬಲಿಸಲು ಇಚ್ಛಿಸಿರುವ ಮತದಾರರ ಹೆಸರುಗಳನ್ನು ತೆಗೆದುಹಾಕುವ ಕೆಲಸವನ್ನು ಬಿಜೆಪಿ ಪಕ್ಷ ಮತ್ತು ಶಾಸಕರು ಮಾಡುತ್ತಿದ್ದಾರೆ’ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಗಂಭೀರವಾಗಿ ಆರೋಪಿಸಿದರು.

‘ವಾರ್ಡ್‌ ಸಂಖ್ಯೆ 30, 34, 35 ಹಾಗೂ 24, 25 ಹೀಗೆ ವಿವಿಧ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಸಾವಿರಾರು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಎ.ಎಂ. ಎಂಬ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಮತದಾರರ ಪಟ್ಟಿ ಪರಿಶೀಲನೆ ನೆಪದಲ್ಲಿಶಾಸಕ ಅರವಿಂದ ಬೆಲ್ಲದ ಅವರ ಬೆಂಬಲಿಗರು ಮನೆಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅದನ್ನು ಆಧರಿಸಿ ಮತದಾರರ ಹೆಸರು ಕೈಬಿಡುವ ಕೆಲಸ ಮಾಡುತ್ತಿದ್ದಾರೆ’ ಎಂದುಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

‘ಬಿಜೆಪಿ ಬಿಟ್ಟು ಕಾಂಗ್ರೆಸ್ ಮತ್ತು ಇತರೆ ಪಕ್ಷ ಪಾಲಿಕೆ ಸದಸ್ಯರಿರುವ ವಾರ್ಡ್‌ಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದಕ್ಕೆ ತಾಂತ್ರಿಕ ಕಾರಣ ನೆಪ ನೀಡಲಾಗುತ್ತಿದ್ದು, ಆದರೆ ಇದರ ಹಿಂದೆ ವ್ಯವಸ್ಥಿತ ಪಿತೂರಿಯೇ ನಡೆದಿದೆ. ಬಿಎಲ್‌ಒಗಳ ಬದಲು ಬಿಜೆಪಿಯವರೇ ಮತದಾರರ ಪಟ್ಟಿ ಸಿದ್ಧಪಡಿಸಿ ಚುನಾವಣಾ ವಿಭಾಗಕ್ಕೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದರು.

‘ಡಿ. 8 ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆಯ ದಿನ. ಬಹಳಷ್ಟು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಅನಕ್ಷರಸ್ಥರಿಗೆ ಈ ವಿಷಯ ತಿಳಿದಿಲ್ಲ. ಹೀಗಾಗಿ ಹೆಸರು ಸೇರಿಸಲು ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ. ಆದ್ದರಿಂದ ಇನ್ನೂ 15 ದಿನಗಳ ಕಾಲ ಹೆಸರು ಸೇರಿಸುವ ಕಾಲವನ್ನು ವಿಸ್ತರಿಸಬೇಕು’ ಎಂದರು.

ಜಲಮಂಡಳಿ ನೌಕರರ ಕುರಿತು ಮಾತನಾಡಿದ ಚಿಂಚೋರೆ, ‘ಅವಳಿ ನಗರಕ್ಕೆ ನೀರು ಪೂರೈಸುವ ಹೊಣೆ ಹೊತ್ತಿರುವ ಎಲ್‌ ಅಂಡ್ ಟಿ ಕಂಪನಿ ಸರಿಯಾಗಿ ನೀರು ಪೂರೈಸುತ್ತಿಲ್ಲ. ಒಂದೆಡೆ ಜನರು ಪರಿತಪಿಸುತ್ತಿದ್ದಾರೆ. ಮತ್ತೊಂದಡೆ ಕಾರ್ಮಿಕರಿಗೆ ಏಳು ತಿಂಗಳಿಂದ ವೇತನ ಪಾವತಿಸಿಲ್ಲ. 270ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವಂತೆ ನ್ಯಾಯಾಲಯ ಆದೇಶಿಸಿದರೂ ಅದನ್ನು ಪಾಲಿಕೆ ಪಾಲಿಸುತ್ತಿಲ್ಲ’ ಎಂದರು.

ಡಾ.ಸಿ.ಪಿ. ಶಿರಗುಪ್ಪಿ, ರವಿ ಮಾಳಗೇರ, ಮೃತ್ಯುಂಜ್ಯಯ ಕೊಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT