ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಒಡೆಯಲು ಕಾಂಗ್ರೆಸ್ ಯತ್ನ: ಪ್ರಲ್ಹಾದ ಜೋಶಿ

Published 10 ಮೇ 2024, 7:32 IST
Last Updated 10 ಮೇ 2024, 7:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರದಿದ್ದರೆ ದೇಶವನ್ನು ಒಡೆಯಲು ಹಿಂದೆ ಮುಂದೆ ನೋಡಲ್ಲ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶವನ್ನು ಜಾತಿ, ಸಾಮಾಜಿಕ ಹಾಗೂ ಆರ್ಥಿಕ‌ ಹಿನ್ನೆಲೆಯಲ್ಲಿ ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ದೇಶದ ಸಮಗ್ರತೆಯ ಆಶಯ ಕಾಂಗ್ರೆಸ್ ಪಕ್ಷಕ್ಕಿಲ್ಲ' ಎಂದರು.

'ಚರ್ಮದ ಬಣ್ಣದ ಆಧಾರದಲ್ಲಿ ದೇಶವನ್ನು ಒಡೆಯುವ ಹುನ್ನಾರ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯ ಹಿಂದೆ ಇದೆ. ದೇಶ ಒಂದಾಗಿರಲಿಲ್ಲ ಎಂಬುದು ಅವರ ಮಾತಿನ ಅರ್ಥ. ಸಂಸದ ಡಿ.ಕೆ. ಸುರೇಶ್ ಕೂಡ ದೇಶ ವಿಭಜನೆಯ ಮಾತನ್ನಾಡಿದ್ದರು. ದ್ರಾವಿಡರು ಬೇರೆ ಎಂದೇ ಡಿಎಂಕೆ ಹೇಳುತ್ತಿದೆ' ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲಿ: 'ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿವೆ. ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಿ, ಎಸ್ ಐಟಿ ತನಿಖೆ ಎದುರಿಸಬೇಕು' ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.

'ಪೆನ್ ಡ್ರೈವ್ ಜನರ ಕೈಸೇರಿದಾಗ ರಾಜ್ಯ ಸರ್ಕಾರವೇಕೆ ಕಣ್ಣು ತೆರೆಯಲಿಲ್ಲ? ಎಫ್ ಐ ಆರ್ ಏಕೆ ದಾಖಲಿಸಲಿಲ್ಲ? ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನು ಏಕೆ ತಡೆಯಲಿಲ್ಲ? ಈ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿಲ್ಲ' ಎಂದು ಹರಿಹಾಯ್ದರು.

'ರೇವಣ್ಣ ಪ್ರಕರಣದಲ್ಲಿ ಸರ್ಕಾರದ ವರ್ತನೆ ಸಂಶಯಕ್ಕೆ ಎಡೆಮಾಡಿಕೊಡುವಂತಿದೆ. ಅಪಹರಣದ ಬಗ್ಗೆ ಸರಿಯಾದ ದಾಖಲೆ ಇಲ್ಲ. ಎಸ್ ಐಟಿ ತನಿಖೆ ಪಾರದರ್ಶಕವಾಗಿಲ್ಲ. ಸರ್ಕಾರದ ಅಣತಿಯಂತೆ ನಡೆಯಲು ಎಸ್ ಐಟಿ ತೀರ್ಮಾನಿಸಿದಂತಿದೆ' ಎಂದರು.

'ಮಹಿಳೆಯರಿಗೆ ಅನ್ಯಾಯವಾಗಿದ್ದರೂ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ.‌ ಇದು ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ' ಎಂದು ಹೇಳಿದರು.

'ರಾಜಕೀಯವಾಗಿ ಕೆಲವರನ್ನು ಮುಗಿಸಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ತಪ್ಪು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಸುಮಾರು 8 ವರ್ಷಗಳ ಹಿಂದೆ ಘಟನೆ ನಡೆದಿದ್ದರೂ, ಕಳೆದ ಒಂದು ವರ್ಷದಿಂದ ಸರ್ಕಾರ ಏನು ಮಾಡುತ್ತಿತ್ತು? ಕೆಲವು ತಿಂಗಳ ಹಿಂದೆಯೇ ಸರ್ಕಾರಕ್ಕೆ ಗೊತ್ತಿತ್ತು. ಚುನಾವಣೆ ಸಮಯದಲ್ಲಿ ಕೆಲವರನ್ನು ರಾಜಕೀಯವಾಗಿ ಹಣಿಯುವ ಕಾರಣದಿಂದ ಸುಮ್ಮನಿತ್ತು' ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT