ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆಗೆ ಸಂಚು; ಆರು ಮಂದಿ ಬಂಧನ

ಹಳೇ ವೈಷಮ್ಯ; ಅಮೇಜಾನ್‌ನಿಂದ ಚಾಕು ಆರ್ಡರ್‌
Published 21 ಜೂನ್ 2024, 14:32 IST
Last Updated 21 ಜೂನ್ 2024, 14:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೆ ಸಂಚು ರೂಪಿಸಿದ್ದ ತಂಡವೊಂದನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಎರಡು ತಲ್ವಾರ್‌, ಎರಡು ಚಾಕು, ಎರಡು ಬೈಕ್‌ ಹಾಗೂ ಆಟೊ ವಶಪಡಿಸಿಕೊಂಡಿದ್ದಾರೆ.

ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಹಳೇಹುಬ್ಬಳ್ಳಿ ನಿವಾಸಿಗಳಾದ ಮಂಜುನಾಥ ಪಾಂಚಾನ, ಪವನ ಗಬ್ಬೂರ, ವಿನಾಯಕ ದುಂಡಿ, ನಾಗರಾಜ ಮೀರಜಕರ, ರಾಜಪ್ಪ ಹನಮನಹಳ್ಳಿ ಬಂಧಿತರು. ಮತ್ತೊಬ್ಬ ಆರೋಪಿ ಗಣೇಶ ಬಿಲಾನಾ ತಲೆಮರೆಸಿಕೊಂಡಿದ್ದಾನೆ.

ಹಳೇಹುಬ್ಬಳ್ಳಿಯ ಸಿಕ್ಕಲಗಾರ ಓಣಿಯ ನಿವಾಸಿ ದೀಪಕ ಧಾರವಾಡ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಜೂನ್‌ 19ರಂದು ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ತಿಮ್ಮಸಾಗರ ಓಣಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌, ‘ಜೂನ್‌ 19ರಂದು ರಾತ್ರಿ ಸಿದ್ಧಾರೂಢ ಮಠದ ಬಳಿ ತಂಡವೊಂದು ಸಂಶಯಾಸ್ಪದವಾಗಿ ಓಡಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರ್‌ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿತ್ತು. ಅವರನ್ನು ವಿಚಾರಣೆ ನಡೆಸಿದಾಗ ಕೊಲೆಗೆ ಸಂಚು ರೂಪಿಸಿರುವುದಾಗಿ ತಿಳಿಸಿದ್ದು, ತಂಡದಲ್ಲಿ ಏಳು ಮಂದಿ ಇರುವುದಾಗಿ ಬಾಯ್ಬಿಟ್ಟಿದ್ದರು. ಆರೋಪಿ ಗಣೇಶ ತಲೆಮರೆಸಿಕೊಂಡು, ಉಳಿದವರನ್ನು ಬಂಧಿಸಲಾಗಿದೆ’ ಎಂದರು.

‘ದೀಪಕ ಧಾರವಾಡ ಜೊತೆ ಆರೋಪಿ ಗಣೇಶ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದು, ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ದೀಪಕ ಇದ್ದರೆ ನಮಗೆ ತೊಂದರೆ, ಅವನನ್ನು ಮುಗಿಸಲೇಬೇಕು ಎಂದು ಯೋಜನೆ ರೂಪಿಸಿ, ಏಳು ಮಂದಿಯ ತಂಡವೊಂದನ್ನು ರಚಿಸುತ್ತಾನೆ. ಅಮೇಜಾನ್‌ನಿಂದ ಎರಡು ಚಾಕುವನ್ನು ತರಸಿಕೊಂಡಿರುತ್ತಾರೆ. ಬಂಧಿತರೆಲ್ಲ ಗಾಂಜಾ ಹಾಗೂ ಇತರ ಪ್ರಕರಣದ ಆರೋಪಿಗಳಾಗಿದ್ದು, ಸಂಭವನೀಯ ದೊಡ್ಡ ಅಪರಾಧವನ್ನು ತಡೆದಂತಾಗಿದೆ’ ಎಂದು ಹೇಳಿದರು.

‘ದೀಪಕ ಧಾರವಾಡ ಸಹ ಅಪರಾಧ ಪ್ರಕರಣದ ಹಿನ್ನೆಲೆಯುಳ್ಳವನಾಗಿದ್ದು, ಕೊಲೆ ಸಂಚಿಗೆ ನಿಜವಾದ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮತ್ತಷ್ಟು ಸಾಕ್ಷ್ಯಗಳ ಸಂಗ್ರಹದಲ್ಲಿ ಪೊಲೀಸರು ಮುಂದಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT