ಭಾನುವಾರ, ಅಕ್ಟೋಬರ್ 2, 2022
19 °C
ಮಹಾನಗರ ಪಾಲಿಕೆಯಿಂದ ಶಿವಳ್ಳಿಯಲ್ಲಿ ನಿರ್ಮಾಣವಾಗಲಿದೆ ಸಂಸ್ಕರಣಾ ಘಟಕ

ಕಟ್ಟಡ ತ್ಯಾಜ್ಯಕ್ಕೆ ಸಿಗಲಿದೆ ‘ಮುಕ್ತಿ’

ಸತೀಶ ಬಿ. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ಮತ್ತು ಅದರಿಂದಾಗುವ ತೊಂದರೆಗಳನ್ನು ತಡೆಯಲು ಮುಂದಾಗಿರುವ ಮಹಾನಗರ ಪಾಲಿಕೆಯು, ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲು ಮುಂದಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 100 ಟನ್‌ಗಿಂತಲೂ ಹೆಚ್ಚು ಕಟ್ಟಡ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕಟ್ಟಡಗಳನ್ನು ನಿರ್ಮಿಸುವಾಗ ಮತ್ತು ಹಳೆಯ ಕಟ್ಟಡಗಳನ್ನು ನೆಲಸಮ ಮಾಡುವಾಗ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಬದಿ, ಖಾಲಿ ನಿವೇಶನಗಳು, ಜಲಮೂಲಗಳು ಹಾಗೂ ಕೆರೆಯಂಚುಗಳಲ್ಲಿ ಸುರಿಯಲಾಗುತ್ತಿದೆ.

ಇದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ದಂಡ ವಿಧಿಸಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಶಿವಳ್ಳಿಯಲ್ಲಿ ಪಾಲಿಕೆಗೆ ಸೇರಿದ 67 ಎಕರೆ ಜಾಗ ಇದೆ. ಅದರಲ್ಲಿ ಐದು ಎಕರೆಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಲಿದೆ. ಅಲ್ಲಿ ಈಗಾಗಲೇ ರಸ್ತೆ, ಶೌಚಾಲಯ, ಶೆಡ್‌ ಸೇರಿದಂತೆ ಮೂಲಸೌಕರ್ಯಗಳು ಸಿದ್ಧಗೊಂಡಿವೆ.

₹3.5 ಕೋಟಿ ಅನುದಾನ: ‘ಘಟಕ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ₹3.5 ಕೋಟಿ ಅನುದಾನ ಬಿಡುಗಡೆ ಆಗಿದೆ. ಅಲ್ಲದೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ಸಹ ಘಟಕ ನಿರ್ಮಾಣಕ್ಕೆ ಅನುದಾನ ಸಿಗಲಿದೆ. 2016–17ರಲ್ಲಿಯೇ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಅದು ಸಾಧ್ಯವಾಗಿರಲಿಲ್ಲ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

‘2016–17ರ ಯೋಜನೆಯಂತೆ ಪ್ರತಿ ದಿನಕ್ಕೆ 50 ಟನ್‌ ಕಟ್ಟಡ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯದ ಘಟಕ ನಿರ್ಮಾಣ ಮಾಡುವ ಗುರಿ ಇತ್ತು. ಈಗ ನಗರದ ಬೆಳವಣಿಗೆ ಆಧರಿಸಿ ಮತ್ತು ಮುಂದಿನ 10 ವರ್ಷಗಳಲ್ಲಿ ಆಗ
ಬಹುದಾದ ಬೆಳವಣಿಗೆ
ಯನ್ನು ಗಮನದಲ್ಲಿಟ್ಟು
ಕೊಂಡು ದಿನಕ್ಕೆ 200 ಟನ್‌ ಮತ್ತು ಅದಕ್ಕಿಂತ ಹೆಚ್ಚು ಸಂಸ್ಕರಣೆ ಮಾಡುವ ಘಟಕ ಸ್ಥಾಪಿಸುವ ಯೋಜನೆ ಇದೆ’ ಎಂದು ಹೇಳಿದರು.

‘ನಗರದಲ್ಲಿ ಪ್ರತಿ ದಿನಕ್ಕೆ ಎಷ್ಟು ಟನ್ ಕಟ್ಟಡ ತ್ಯಾಜ್ಯ ಉತ್ಪಾದನೆ ಆಗು
ತ್ತಿದೆ ಎಂಬುದರ ಬಗ್ಗೆ ಖಾಸಗಿ ಏಜೆನ್ಸಿ
ಯಿಂದ ನಿಖರವಾಗಿ ಸಮೀಕ್ಷೆ ನಡೆಸಲಾಗು
ವುದು. ಅವರು ನೀಡುವ ವರದಿ ಆಧರಿಸಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಘಟಕ ನಿರ್ಮಿ
ಸುವ ಹಾಗೂನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದರು.

ಬಳಕೆದಾರರಿಗೆ ಶುಲ್ಕ: ‘ಪಾಲಿಕೆ ವ್ಯಾಪ್ತಿಯಲ್ಲಿ ಯಾರೇ ಕಟ್ಟಡ ನಿರ್ಮಿಸಿದರೂ, ನೆಲಸಮ ಮಾಡಿದರೂ ಆ ಸಂದರ್ಭದಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಕೆ.ಜಿ ಲೆಕ್ಕದಲ್ಲಿ ಬಳಕೆದಾರರ ಶುಲ್ಕವನ್ನು ನಿಗದಿಪಡಿಸಲಾಗುವುದು. ಶುಲ್ಕ ಪಾವತಿಸಿದ ನಂತರ ಏಜೆನ್ಸಿಯವರು ತ್ಯಾಜ್ಯವನ್ನು ತಮ್ಮ ವಾಹನಗಳ ಮೂಲಕ ಘಟಕಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅದಕ್ಕಾಗಿ, ಕೆಲವೆಡೆ ಸಂಗ್ರಹ ಸ್ಥಳಗಳನ್ನು ಗುರುತಿಸಲಾಗುವುದು’ ಎಂದು ತಿಳಿಸಿದರು.

‘ತ್ಯಾಜ್ಯ ಮರುಬಳಕೆ ಆದಾಯಕ್ಕೆ ದಾರಿ’

ಹಳೇ ಕಟ್ಟಡಗಳನ್ನು ಕೆಡವಿದ ಬಳಿಕ ಇಟ್ಟಿಗೆ, ಸಿಮೆಂಟ್‌, ಕಬ್ಬಿಣ, ಎಲೆಕ್ಟ್ರಿಕ್ ವೈರ್ ಸೇರಿದಂತೆ ಇನ್ನಿತರ ತ್ಯಾಜ್ಯಗಳು ಸಿಗುತ್ತವೆ. ಅವುಗಳಿಂದ ಎಂ ಸ್ಯಾಂಡ್‌, ವಿವಿಧ ಅಳತೆಯ ಇಟ್ಟಿಗೆ, ಪೇವರ್ಸ್‌ ಸೇರಿದಂತೆ ಇತರ ಎಂಟು ವಸ್ತುಗಳನ್ನು ತಯಾರಿಸಲಾಗುವುದು. ವೆಟ್ ತಂತ್ರಜ್ಞಾನ ಬಳಸಿ ಮರಳನ್ನು ಸಂಸ್ಕರಣೆ ಮಾಡಲಾಗುತ್ತದೆ.

‘ತ್ಯಾಜ್ಯದಿಂದ ತಯಾರಿಸಲಾದ ವಸ್ತುಗಳನ್ನು ಮಾರಾಟ ಮಾಡುವುದರಿಂದ ಪಾಲಿಕೆಗೂ ಆದಾಯ ಬರುತ್ತದೆ. ಚೆನ್ನೈ, ಹೈದರಾಬಾದ್‌, ಗಾಜಿಯಾಬಾದ್‌ಗಳಲ್ಲಿ, ನಾಗಪುರ, ಇಂದೋರ್‌ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಘಟಕಗಳು ಇವೆ. ರಾಜ್ಯದಲ್ಲಿ ಮೊದಲ ಬಾರಿಗೆ ಪಾಲಿಕೆ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಈ ಘಟಕ ನಿರ್ಮಾಣ ಆಗಲಿದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು