ಶನಿವಾರ, ಡಿಸೆಂಬರ್ 4, 2021
24 °C
ಹುಬ್ಬಳ್ಳಿ–ಧಾರವಾಡ ರಸ್ತೆ ಬಂದ್‌

ಮತಾಂತರಕ್ಕೆ ಪ್ರಚೋದನೆ ಆರೋಪ: ಸೋಮು ಅವರಾಧಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸುತಗಟ್ಟಿಯ ಸೋಮು ಅವರಾಧಿಯನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹುಬ್ಬಳ್ಳಿ–ಧಾರವಾಡ ರಸ್ತೆ ಹಾಗೂ ಬಿಆರ್‌ಟಿಎಸ್‌ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ.

ಆರೋಪಿಯನ್ನು ಬಂಧಿಸುವಂತೆ ಕಾರ್ಯಕರ್ತರು ಸಂಜೆಯಿಂದಲೂ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ಮಾಡುತ್ತಿದ್ದರು. ಸಂಜೆ ಆರು ಗಂಟೆಯ ಒಳಗೆ ಬಂಧನವಾಗದಿದ್ದರೆ ರಸ್ತೆ ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅದರಂತೆ ರಸ್ತೆ ಬಂದ್‌ ಮಾಡಿದರು.

ಕಾರ್ಯಕರ್ತರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ನವನಗರದ ಅಂಗಡಿಗಳನ್ನು ಬಂದ್‌ ಮಾಡಿಸಿದರು. ನವನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಕಾರ್ಯಕರ್ತರು ಮತಾಂತರ ವಿರೋಧ ಶಕ್ತಿಯ ಪ್ರದರ್ಶನಕ್ಕೆ ಜೊತೆಗೂಡಬೇಕು ಎಂದು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.

ಹುಬ್ಬಳ್ಳಿ–ಧಾರವಾಡ ರಸ್ತೆಯಲ್ಲಿ ವಾಹನಗಳನ್ನು ತಡೆದು ಬಂದ್‌ ಮಾಡುತ್ತಿದ್ದ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೂಕಾಟ, ತಳ್ಳಾಟವೂ ಜರುಗಿತು.

ಸೋಮು ಅವರಾಧಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ನನ್ನನ್ನು ಪ್ರಚೋದಿಸಿದ್ದಾರೆ. ಜಾತಿನಿಂದನೆ ಮಾಡಿದ್ದಾರೆ ಎಂದು ವಿಶ್ವನಾಥ ಬೂದೂರು ಎಂಬುವರು ಪೊಲೀಸ್‌ ಠಾಣೆಯಲ್ಲಿ ‌ದೂರು ನೀಡಿದ್ದಾರೆ. ಸೋಮು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ರಸ್ತೆಯುದ್ದಕ್ಕೂ ವಾಹನಗಳ ಸಾಲು: ಸಂಘಟನೆಯ ಕಾರ್ಯಕರ್ತರು ರಸ್ತೆ ಮೇಲೆ ಪ್ರತಿಭಟನೆ ಮಾಡುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದಷ್ಟೂ ದೂರ ವಾಹನಗಳ ಸಾಲು ಕಾಣುತ್ತಿದೆ. ಚಿಗರಿ ಬಸ್‌ಗಳಿಗಷ್ಟೇ ಸೀಮಿತವಾದ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿಯೂ ಬೇರೆ ವಾಹನಗಳು ನಿಂತುಕೊಂಡಿವೆ. ಪ್ರತಿಭಟನೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.


ಹುಬ್ಬಳ್ಳಿ–ಧಾರವಾಡ ರಸ್ತೆ ಮಾಡಿರುವುದರಿಂದ ಸಾಲುಗಟ್ಟಿ ನಿಂತಿರುವ ವಾಹನಗಳು. (ಚಿತ್ರ:ಗೋವಿಂದರಾಜ ಜವಳಿ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು