ಬುಧವಾರ, ಜೂನ್ 3, 2020
27 °C
ಇಂದು ಅಕ್ಷಯ ತೃತೀಯ

ಲಾಕ್‌ಡೌನ್ | ಅಕ್ಷಯ ತೃತೀಯದ ಚಿನ್ನ ಖರೀದಿಗೂ ಕೊರೊನಾ ಬಿಸಿ

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭಾನುವಾರದ ಅಕ್ಷಯ ತೃತೀಯ ಹಾಗೂ ಮದುವೆ ಸೀಸನ್‌ ಬಂಗಾರದ ಖರೀದಿ ಸಂಭ್ರಮಕ್ಕೆ ಕೊರೊನಾ ಕರಿನೆರಳು ಆವರಿಸಿಕೊಂಡಿದೆ. ಆನ್‌ಲೈನ್‌ನಲ್ಲಿ ಖರೀದಿಸಲು ಕೆಲವು ಅಂಗಡಿಗಳವರು ಅವಕಾಶ ನೀಡಿದ್ದಾರಾದರೂ ಚಿನ್ನ ಈಗ ಸಿಗುವುದಿಲ್ಲ.

ಏಪ್ರಿಲ್‌– ಮೇ ತಿಂಗಳಗಳಲ್ಲಿ ಮದುವೆ ಮುಹೂರ್ತಗಳು ಜಾಸ್ತಿ. ಮದುವೆಗೆ ತಾಳಿ, ಚೈನ್‌, ಉಂಗುರ, ನೆಕ್ಲೆಸ್‌, ಕಿವಿಯೋಲೆ ಸೇರಿದಂತೆ ಹತ್ತು ಹಲವು ಬಂಗಾರದ ಆಭರಣಗಳನ್ನು ಜನರು ಖರೀದಿಸುತ್ತಿದ್ದರು. ಒಂದು ತಿಂಗಳಿಂದ ಲಾಕ್‌ಡೌನ್‌ ಇರುವುದರಿಂದ ಅಂಗಡಿಗಳು ತೆರೆದಿಲ್ಲ.

ಚಿನ್ನಾಭರಣದ ಅಂಗಡಿಗಳು ತೆರೆದಿಲ್ಲವಾದರೂ ಅಕ್ಷಯ ತೃತೀಯದ ಲಾಭ ಪಡೆಯಲು ಮಲಬಾರ್‌ ಗೋಲ್ಡ್‌ ಸೇರಿದಂತೆ ಕೆಲವು ಮಳಿಗೆಗಳವರು ಆನ್‌ಲೈನ್‌ನಲ್ಲಿ ಮುಂಗಡ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಹಲವಾರು ರಿಯಾಯ್ತಿಗಳನ್ನೂ ಘೋಷಿಸಿದ್ದಾರೆ. ಆ ಆಭರಣಗಳೂ ಲಾಕ್‌ಡೌನ್‌ ಮುಗಿದ ಮೇಲೆಯೇ ಗ್ರಾಹಕರ ಕೈ ಸೇರುತ್ತವೆ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಖರೀದಿ ಮಾಡುತ್ತಾರೆ. ಆದರೆ, ಈ ಬಾರಿ ಖರೀದಿಗೆ ಅವಕಾಶವಿಲ್ಲದಂತಾಗಿದೆ. ಬೃಹತ್‌ ಮಳಿಗೆಯವರು ಆನ್‌ಲೈನ್‌ ಮೂಲಕ ಅವಕಾಶ ನೀಡಿರುವರಾದರೂ ಚಿನ್ನ ಮಾತ್ರ ಈಗ ಸಿಗುವುದಿಲ್ಲ.

ಅಕ್ಷಯ ತೃತೀಯದಂದು ಆನ್‌ಲೈನ್‌ ಮೂಲಕ ಚಿನ್ನ ಖರೀದಿ ಮಾಡುವವರಿಗೆ ತಯಾರಿಕೆಯ ವೆಚ್ಚದಲ್ಲಿ ರಿಯಾಯ್ತಿ ನೀಡಲಾಗುತ್ತಿದೆ. ಇವತ್ತಿನ ಬೆಲೆಗೆ ಚಿನ್ನವನ್ನು ಮುಂಗಡವಾಗಿ ಕಾಯ್ದಿರಿಸಿದ್ದರೂ, ಚಿನ್ನ ಪಡೆಯುವ ದಿನ ಬೆಲೆ ಕಡಿಮೆ ಇದ್ದರೆ ಆ ಬೆಲೆಗೇ ಚಿನ್ನ ನೀಡಲಾಗುತ್ತದೆ. ಹೆಚ್ಚಿದ್ದರೆ, ಮುಂಗಡ ನೀಡಿದ ದಿನದ ಬೆಲೆಗೆ ನೀಡಲಾಗುತ್ತದೆ ಎಂದು ಮಲಬಾರ್ ಗೋಲ್ಡ್‌ನ ಶಶಾಂಕ ಏಕಬೋಟೆ ತಿಳಿಸಿದರು.

‘ಯುಗಾದಿಯಿಂದಲೇ ಚಿನ್ನ ಖರೀದಿ ಆರಂಭವಾಗುತ್ತಿತ್ತು. ಮದುವೆಗಳಿಗೆ ಹಾಗೂ ಅಕ್ಷಯ ತೃತೀಯ ದಿನದಂದು ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಬೆಂಗಳೂರು ನಂತರ ಹುಬ್ಬಳ್ಳಿಯದ್ದೇ ದೊಡ್ಡ ವಹಿವಾಟು ₹ 6 ಕೋಟಿ ಮೌಲ್ಯದ ಚಿನ್ನ ಒಂದೇ ದಿನ ಮಾರಾಟವಾಗುತ್ತಿತ್ತು’ ಎಂದು ಜುವೆಲ್ಲರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಪರಶುರಾಮ ಚಿಲ್ಲಾಳ.

ಅಸೋಸಿಯೇಷನ್‌ಗೆ 180 ಮಳಿಗೆಗಳವರು ಸದಸ್ಯರಾಗಿದ್ದಾರೆ. ಇವರಲ್ಲದೆ 120 ಮಳಿಗೆಗಳಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಮಾಡಿದ್ದೇವೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ನಿರ್ದೇಶನ ಪಾಲಿಸುತ್ತದ್ದೇವೆ’ ಎಂದು ಅವರು ತಿಳಿಸಿದರು.

ಬಂಗಾರದ ಆಭರಣಗಳನ್ನು ಮಾಡುತ್ತಿದ್ದ ಅಕ್ಕಸಾಲಿಗರೂ ತಿಂಗಳಿಂದ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ದುಡಿಯುವ ಸಮಯದಲ್ಲಿ ಕೆಲಸವಿಲ್ಲದಂತಾಗಿರುವುದರಿಂದ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

**

ಚಿನ್ನದ ಅಂಗಡಿಗಳು ಬಂದ್‌ ಆಗಿರುವುದರಿಂದ ಮಾಲೀಕರಿಗೆ, ನೌಕರರಿಗೆ, ಆಭರಣ ತಯಾರಕರಿಗೆ, ಗ್ರಾಹಕರಿಗೆ ತೊಂದರೆಯಾಗಿದೆ
-ಪರಶುರಾಮ ಚಿಲ್ಲಾಳ, ಅಧ್ಯಕ್ಷ, ಜುವೆಲ್ಲರ್ಸ್‌ ಅಸೋಸಿಯೇಷನ್‌, ಹುಬ್ಬಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು