ಸೋಮವಾರ, ಮಾರ್ಚ್ 30, 2020
19 °C

ಹುಬ್ಬಳ್ಳಿ| ಅಂತರ ಕಾಯ್ದುಕೊಳ್ಳಲು ಅಂಗಡಿ ಮುಂದೆ ವೃತ್ತ ರಚಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಗರದ ಅಂಗಡಿಗಳ ಮುಂದೆ ಗ್ರಾಹಕರು ಮುಗಿ ಬೀಳಬಾರದು ಎಂದು ಪೊಲೀಸರು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

ದಿ‌ನಸಿ, ತರಕಾರಿ, ಹಾಲು, ಔಷಧಿ ಅಂಗಡಿಗಳ ಎದುರು ಮೂರು ಅಡಿ ಅಂತರ ಒಂದೊಂದು ವೃತ್ತ ಹಾಕಿ, ಅದರಲ್ಲಿಯೇ ನಿಂತು ಸರತಿ ಸಾಲಿನಲ್ಲಿ ಸಾಮಾನು ಖರೀದಿಸಲು ಸೂಚಿಸಿದ್ದಾರೆ. ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಿ, ಸಮಾಧಾನದಿಂದ ಸಾಮಾನು ಖರೀದಿಯಲ್ಲಿ ತೊಡಗಿದ್ದಾರೆ.

ಮನೆಯಿಂದ ಯಾರೂ ಹೊರಗೆ ಬರಬಾರದು ಎನ್ನುವ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿದ್ದರೂ, ಚನ್ನಮ್ಮ ವೃತ್ತದ ಬಳಿ ಕೆಲವು ಆಟೊಗಳು, ಬೈಕ್‌ಗಳು ಸಂಚರಿಸುತ್ತಿದ್ದವು. ಅವುಗಳನ್ನು ತಡೆದ ಪೊಲೀಸರು, ಚಾಲಕರಿಗೆ ಮತ್ತು ಸವಾರರಿಗೆ ಲಾಠಿ ರುಚಿ ತೋರಿಸಿ ಮನೆಗೆ ತೆರಳುವಂತೆ ಸೂಚಿಸಿದರು.

ಈ ನಡುವೆಯೇ ಸಚಿವ ಜಗದೀಶ ಶೆಟ್ಟರ್ ಅವರು, ಜಿಲ್ಲಾಧಿಕಾರಿ ದೀಪಾ ಚೋಳನ್, ತಹಶೀಲ್ದಾರ್ ಶಶೀಧರ ಮಾಡ್ಯಾಳ ಜೊತೆ ಹಳೇ ಬಸ್ ನಿಲ್ದಾಣ, ಚನ್ನಮ್ಮ ವೃತ್ತದ ಕಡೆ ತೆರಳಿ ಬಂದ್ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಪ್ರಮುಖ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ' ಎಂದರು.

'ದೇಶದ ಹಿತದೃಷ್ಟಿಯಿಂದ ಪ್ರಧಾನಿಯವರು 21ದಿನ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಸಂಪೂರ್ಣ ಬೆಂಬಲ ನೀಡಬೇಕು. ಇಲ್ಲದಿದ್ದರೆ, 21 ವರ್ಷ ಹಿಂದೆ ಹೋಗಬೇಕಾಗುತ್ತದೆ' ಎಂದು ಎಚ್ಚರಿಸಿದರು.

'ಜಿಲ್ಲೆಯಲ್ಲಿ ಒಬ್ಬರಿಗೆ ಕೋವಿಡ್-19 ದೃಢಪಟ್ಟಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಗುಣಮುಖರಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನ ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯಲ್ಲಿಯೇ ಇದ್ದರೆ ಆದಷ್ಟು ಬೇಗ ನೆಮ್ಮದಿಯ ಬದುಕು ನೋಡಬಹುದು' ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು