ಭಾನುವಾರ, ಸೆಪ್ಟೆಂಬರ್ 27, 2020
21 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಅವಳಿ ನಗರದಲ್ಲಿಲ್ಲ ಕೊಟ್ಪಾ ಕಾಯ್ದೆ!

ನಾಗರಾಜ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಪರಿಗಣಿಸಿ, ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ 2003ರಲ್ಲಿ ಕೊಟ್ಪಾ(The Cigarettes and other Tobacco Products Act)–ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ತಂದಿತು. ಆದರೆ, ಈ ಕಾಯ್ದೆ ಹುಬ್ಬಳ್ಳಿ–ಧಾರವಾಡ ಅವಳಿನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗಿಲ್ಲ ಎನ್ನುವುದಂತೂ ಸತ್ಯ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ. ಅಧಿಕಾರಿಗಳು ತಂಡ ರಚನೆ ಮಾಡಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ–ಕಾಲೇಜುಗಳ ಸುತ್ತಮುತ್ತ, ಸರ್ಕಾರಿ ಕಚೇರಿ, ಆಸ್ಪತ್ರೆ ಸುತ್ತಮುತ್ತ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಕೆಲವೆಡೆ ದಾಳಿ ನಡೆಸಿ ಎಚ್ಚರಿಕೆ ನೀಡಿ ದಂಡವನ್ನೂ ವಸೂಲಿ ಮಾಡಿದ್ದಾರೆ. ದಿನ ಬೆಳಗಾದರೆ ಮತ್ತದೇ ಕೊಟ್ಪಾ ಕಾಯ್ದೆ ಉಲ್ಲಂಘನೆ!

ಬಸ್‌ ನಿಲ್ದಾಣಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ಶಾಲಾ–ಕಾಲೇಜುಗಳ ಸನಿಹದಲ್ಲಿ ಬೇಕಾ ಬಿಟ್ಟಿಯಾಗಿ ತಂಬಾಕು ಉತ್ಪನ್ನಗಳು ಮಾರಾಟವಾಗುತ್ತಿವೆ. ಜನ ಸಂದಣಿಯಲ್ಲಿಯೇ ಸಿಗರೇಟ್‌ ಸೇದುವವರೂ ಹುಬ್ಬಳ್ಳಿಯಲ್ಲಿ ಕಡಿಮೆಯೇನಿಲ್ಲ. ಸಾಕಷ್ಟು ಜನರು ಬಸ್‌ನಲ್ಲಿಯೇ ಅಡಿಕೆ ಚೀಟಿಗೆ ತಂಬಾಕು ಮಿಶ್ರಣ ಮಾಡಿ ಜಗಿಯುತ್ತ ಹೋಗುತ್ತಾರೆ. ಪ್ರಯಾಣಿಸುವಾಗಲೇ ಕಿಟಿಕಿಯಿಂದ ಪಿಚಕ್‌ ಎಂದು ಉಗಿಯುತ್ತಾರೆ. 

ನಗರ ಪ್ರದೇಶದ ಒಳಗೇ ಸರ್ಕಾರಿ, ಖಾಸಗಿ ಶಾಲೆಗಳು ಸಾಕಷ್ಟು ಇವೆ. ಅವುಗಳ ಪಕ್ಕದಲ್ಲಿಯೇ ಗುಟ್ಕಾ, ತಂಬಾಕು ಉತ್ಪನ್ನ ಮಾರಾಟ ಮಾಡುವ ಪಾನ್‌ ಶಾಪ್‌ಗಳೂ ಇವೆ. ಕಾನೂನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಕ್ಕಳು ಸಹ ತಂಬಾಕು ಉತ್ಪನ್ನ ಖರೀದಿಸುತ್ತಾರೆ. ವ್ಯಾಪಾರಸ್ಥರು ಸಹ ಅವುಗಳನ್ನು ನೀಡುತ್ತಾರೆ.

ಅಡಿಕೆ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು. ಅದರ ಜತೆಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಬಹುತೇಕ ಕಂಪನಿಗಳು ತಾವು ಉತ್ಪಾದಿಸುವ ಅಡಿಕೆ ಉತ್ಪನ್ನದ ಚೀಟಿನ ಜತೆಗೆ ತಂಬಾಕು ಪುಡಿ ಇರುವ ಚೀಟಿಯನ್ನೇ ನೀಡುತ್ತಿವೆ.

ತೆರೆಮರೆಯಲ್ಲಿ ಕಸರತ್ತು ನಡೆಸುವ ಕಂಪನಿಗಳಿಗೆ ಬೇಕಾಗಿರುವುದು ಕೇವಲ ಲಾಭವೇ ಹೊರತು, ಜನರ ಆರೋಗ್ಯವಲ್ಲ! ಜನರಿಗೂ ಬೇಕಾಗಿದ್ದು ಆರೋಗ್ಯವಲ್ಲ; ಮತ್ತೇರಿಸುವ ತಂಬಾಕಿನ ರುಚಿಯಷ್ಟೇ!

‘ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ದಾಳಿ ನಡೆಸಿ, ದಂಡ ಹಾಕುವ ಬದಲು, ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕು. ದಾಳಿ ವೇಳೆ ದಂಡ ತೆತ್ತ ಅಂಗಡಿಯವರೇ ಮಾರನೇ ದಿನ ಅದೇ ಸ್ಥಳದಲ್ಲಿ ಮತ್ತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅವರನ್ನು ಪ್ರಶ್ನಿಸಲು ಹೋದರೆ, ಜಗಳಕ್ಕೆ ಬರುತ್ತಾರೆ. ಇಲ್ಲವೇ ಜನಪ್ರತಿನಿಧಿಗಳ ಹೆಸರು ಹೇಳಿ ಬೆದರಿಸುತ್ತಾರೆ. ಹಾಡಹಗಲೇ ಅಪ್ರಾಪ್ತರು ಬೀಡಿ, ಸಿಗರೇಟ್‌, ತಂಬಾಕು ಉತ್ಪನ್ನಗಳನ್ನು ನಿರಾತಂಕವಾಗಿ ಬಳಸುತ್ತಾರೆ’ ಎಂದು ಸಿಬಿಟಿಯ ನಿಜಗುಣಸ್ವಾಮಿ ಹೇಳುತ್ತಾರೆ. ತಂಬಾಕು ಉತ್ಪನ್ನ ಕುರಿತಿರುವ ಕಾನೂನು ಉಲ್ಲಂಘನೆಯಾದರೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು ಎಂದಿದ್ದರೂ ಅಂಥ ಶಿಕ್ಷೆಗೊಳಪಟ್ಟಿರುವ ಯಾವುದೇ ಉದಾಹರಣೆಗಳು ಅವಳಿನಗರದಲ್ಲಿ ಸಿಗದು. ತಂಬಾಕು ಮಾರಾಟ ಮಾಡುತ್ತಿರುವ ಮಳಿಗೆ ಮೇಲೆ ದಾಳಿ ಮಾಡುವ ಅಧಿಕಾರಿಗಳು ₹200 ದಂಡ ವಿಧಿಸುತ್ತಾರೆ. ಅಲ್ಲಿರುವ ತಂಬಾಕು ಉತ್ಪನ್ನವನ್ನು ಅಲ್ಲೇ ಬಿಟ್ಟುಹೋಗುತ್ತಾರೆ. ಹೀಗಾಗಿ, ತಂಬಾಕು ಉತ್ಪನ್ನಗಳ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ.

ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯಲ್ಲಿ ಒಟ್ಟು 33 ವಿಭಾಗಗಳಿದ್ದು, ಅವುಗಳಲ್ಲಿ ನಾಲ್ಕು ಪ್ರಮುಖವಾಗಿವೆ.

ಸೆಕ್ಷನ್ 4: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ: ಈ ಅಧಿನಿಯಮದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಇತ್ಯಾದಿ. ಹಾಗೊಂದು ವೇಳೆ ಕಾಯ್ದೆ ಉಲ್ಲಂಘಿಸಿದರೆ ₹200 ವರೆಗೆ ದಂಡ ವಿಧಿಸಬಹುದು. ಅಲ್ಲದೆ, ಅಧಿಕಾರಿಗಳು ಸ್ಥಳದಲ್ಲಿಯೇ ದಂಡ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಬಹುದು. ಸಾರ್ವಜನಿಕ ಸ್ಥಳದಲ್ಲಿ ಅಂಗಡಿ ಇರುವವರು ‘ಯಾರಿಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶವಿಲ್ಲ’ ಎನ್ನುವ ನಾಮಫಲಕ ಕಡ್ಡಾಯ ಅಳವಡಿಸಬೇಕು. ಧೂಮಪಾನ ಮಾಡುವುದು ಕಂಡು ಬಂದರೆ ಪೊಲೀಸ್‌ ಠಾಣೆಗೆ ತಿಳಿಸಬೇಕು. ಬೆಂಕಿ ಪೊಟ್ಟಣ, ಲೈಟರ್ ಹಾಗೂ ಧೂಮಪಾನಕ್ಕೆ ಉತ್ತೇಜಿಸುವ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡಬಾರದು. 

ಸೆಕ್ಷನ್ 5: ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ: ಇದರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆಯನ್ನು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ
ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಷೋಕೇಸ್‌ಗಳ ಮೂಲಕ ಪ್ರದರ್ಶನ ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಜಾಹೀರಾತು ಫಲಕಗಳನ್ನು, ಭಿತ್ತಿ ಪತ್ರಗಳನ್ನು ಅಂಗಡಿಯಲ್ಲಿ ಪ್ರದರ್ಶನ ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಗೋಡೆ ಬರಹ, ಹೋರ್ಡಿಂಗ್ಸ್‌ಗಳ ಮೂಲಕ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಹಾಗೂ ದೃಶ್ಯ, ಮುದ್ರಣ ಮಾಧ್ಯಮದ ಮೂಲಕವೂ ತಂಬಾಕು ಉತ್ಪನ್ನಗಳ ಜಾಹೀರಾತು ನೀಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಎರಡು ವರ್ಷದ ಶಿಕ್ಷೆ ಅಥವಾ ₹1,000 ದಂಡ ಅಥವಾ ಎರಡಕ್ಕೂ ಗುರಿಯಾಗಬಹುದು. ಎರಡನೇ ಬಾರಿ ತಪ್ಪಿತಸ್ಥನಾದರೆ, ₹5,000 ದಂಡ ಮತ್ತು ಶಿಕ್ಷೆಯ ಅವಧಿ 5 ವರ್ಷಗಳದ್ದಾಗಲಿದೆ. ಶಿಕ್ಷೆಯ ಪ್ರಮಾಣ ಕೋರ್ಟ್ ನಿರ್ಧರಿಸುತ್ತದೆ.

ಸೆಕ್ಷನ್ 6: ಅಪ್ರಾಪ್ತರಿಗೆ ತಂಬಾಕು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ: 18 ವರ್ಷದೊಳಗಿನವರು ತಂಬಾಕು ಸೇವನೆ ಮಾಡಬಾರದು ಎನ್ನುವ ಉದ್ದೇಶದಿಂದ ಈ ನಿಯಮ ರೂಪಿಸಲಾಗಿದೆ. ಇದರ ಪ್ರಕಾರ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಅವರು ಅದನ್ನು ಖರೀದಿಸುವುದು ಅಪರಾಧವಾಗಿದೆ. ಶಿಕ್ಷಣ ಸಂಸ್ಥೆಗಳ 100 ಮೀಟರ್‌ ವ್ಯಾಪ್ತಿ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆ ಮುಖ್ಯಸ್ಥರು ತಮ್ಮ ಶಾಲಾ ವಲಯವನ್ನು ಸಂಪೂರ್ಣವಾಗಿ ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ವ್ಯಾಪ್ತಿ ಒಳಗೆ ಬಾಯಿ ಕ್ಯಾನ್ಸರ್ ಬಂದಿರುವ ವ್ಯಕ್ತಿಯ ಚಿತ್ರದೊಂದಿಗೆ ನಾಮಫಲಕ ಅಳವಡಿಸಬೇಕು. ಈ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ₹2,000 ದವರೆಗೆ ದಂಡ ವಿಧಿಸಲಾಗುತ್ತದೆ.

ಸೆಕ್ಷನ್ 7: ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ 85ರಷ್ಟು ಆರೋಗ್ಯದ ಎಚ್ಚರಿಕೆ ಚಿತ್ರ: ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನ ಇರುವ ಪ್ಯಾಕೆಟ್‌ಗಳ ಮೇಲೆ ಕಡ್ಡಾಯವಾಗಿ ದೊಡ್ಡದಾದ ಚಿತ್ರ ಅಚ್ಚು ಹಾಕಿರಬೇಕು. ಈ ಕಾನೂನು ಉಲ್ಲಂಘನೆಯಾದರೆ ಉತ್ಪಾದಕರಿಗೆ ಮೊದಲ ಬಾರಿ ಎರಡು ವರ್ಷ ಜೈಲು ಶಿಕ್ಷೆ ಅಥವಾ ₹5 ಸಾವಿರ ದಂಡ. ಎರಡನೆ ಬಾರಿ ಉಲ್ಲಂಘನೆಯಾದರೆ 5 ವರ್ಷ ಜೈಲು ಅಥವಾ ₹10 ಸಾವಿರ ದಂಡ ವಿಧಿಸಲಾಗುತ್ತದೆ ಹಾಗೂ ಚಿಲ್ಲರೆ ವ್ಯಾಪಾರ ಮಾಡುವವರಿಗೆ 2 ವರ್ಷದಿಂದ 5 ವರ್ಷದವರೆಗೆ ಜೈಲು ಹಾಗೂ ₹1ಸಾವಿರದಿಂದ ₹3ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ. 

2018ರಲ್ಲಿ 26 ದಾಳಿ, ₹71 ಸಾವಿರ ದಂಡ ವಸೂಲಿ
ಆರೋಗ್ಯ ಇಲಾಖೆ 2018ರಲ್ಲಿ ಧಾರವಾಡ ಜಿಲ್ಲೆಯಾದ್ಯಂತ 26 ದಾಳಿಗಳನ್ನು ಕೈಗೊಂಡು, ಕೊಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರಿಂದ ₹71,900 ದಂಡ ಸಂಗ್ರಹಿಸಿದೆ. ಪ್ರಸ್ತುತ ವರ್ಷ ಈವರೆಗೆ 17 ದಾಳಿ ನಡೆಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವ 256 ಮಂದಿ ಮೇಲೆ ದೂರು ದಾಖಲಿಸಿಕೊಂಡು, ₹32,390 ದಂಡ ವಸೂಲಿ ಮಾಡಿದೆ.

ಕೊಟ್ಪಾ ಕಾಯ್ದೆಯ ಸೆಕ್ಷನ್ 6ಬಿ ಅಡಿ 18 ವರ್ಷದೂಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ಅವರು ತೆಗೆದುಕೊಳ್ಳುವುದು ಸಹ ಅಪರಾಧವಾಗಿದೆ. ಇದರ ಅಡಿ 155 ಪ್ರಕರಣಗಳನ್ನು ದಾಖಲಿಸಿ, ₹17,550 ದಂಡ ಸಂಗ್ರಹಿಸಲಾಗಿದೆ. ಕಾಲೇಜು ಸುತ್ತಮುತ್ತಲಿನ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದ 11 ಮಂದಿ ಮೇಲೆ ದೂರು ದಾಖಲಿಸಿ, ₹1,400 ದಂಡ ಕಟ್ಟಿಸಿಕೊಳ್ಳಲಾಗಿದೆ. ದಂಡ ಕಟ್ಟಿದ ಮೇಲೆ ವ್ಯಾಪಾರಿಗಳು ಮತ್ತೆ ತಂಬಾಕು ಉತ್ಪನ್ನಗಳ ಮಾರಾಟವನ್ನು ಮುಂದುವರಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.