ಶುಕ್ರವಾರ, ಅಕ್ಟೋಬರ್ 23, 2020
21 °C
ಕೋವಿಡ್‌ ಪರಿಣಾಮ: ಸಾಮಾಜಿಕ ತಾಣ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಿದ್ಧತೆ

ವೆಬಿನಾರ್‌, ಧ್ವನಿ ಸಂದೇಶದ ಮೊರೆ

ಪ್ರಮೋದ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ 19 ಸಂಕಷ್ಟದ ಸಮಯದಲ್ಲಿ ಘೋಷಣೆಯಾಗಿರುವ ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅಭ್ಯರ್ಥಿಗಳು ವೆಬಿನಾರ್‌ ಮತ್ತು ಧ್ವನಿ ಸಂದೇಶದ ಮೊರೆ ಹೋಗಿದ್ದಾರೆ.

ಚುನಾವಣೆಗಳು ನಡೆದರೆ ಈಚೆಗಿನ ವರ್ಷಗಳಲ್ಲಿ ವಾಟ್ಸ್ ಆ್ಯಪ್, ಫೇಸ್‌ಬುಕ್‌ ಮೂಲಕ ಪ್ರಚಾರ ಮಾಡುವುದು ವಾಡಿಕೆ. ಈಗ ಕೋವಿಡ್‌ ಭೀತಿಯಿಂದ ಹೆಚ್ಚು ಜನರನ್ನು ಸೇರಿಸಿ ಪ್ರಚಾರ ಸಭೆ ಹಾಗೂ ಸಮಾರಂಭಗಳನ್ನು ಆಯೋಜಿಸುವಂತಿಲ್ಲ. ಆದ್ದರಿಂದ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಹೆಚ್ಚು ಜನರನ್ನು ತಲುಪಲು ವೆಬಿನಾರ್‌ಗಳನ್ನು ನಡೆಸಲು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರ ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದ್ದು, 72 ಸಾವಿರ ಮತದಾರರು ಇದ್ದಾರೆ. ಕಾಂಗ್ರೆಸ್‌ ಒಂದು ವರ್ಷ ಮೊದಲೇ ಡಾ. ಆರ್‌.ಎಂ. ಕುಬೇರಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಅವರು ನಾಲ್ಕೂ ಜಿಲ್ಲೆಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಕ್ಷೇತ್ರದ ಎಲ್ಲ ಮತದಾರರಿಗೆ ಪತ್ರಗಳನ್ನು ಬರೆದಿದ್ದಾರೆ. ಈಗ ಉಳಿದ ದಿನಗಳ ಪ್ರಚಾರ ಕಾರ್ಯಕ್ಕೆ ಆನ್‌ಲೈನ್‌ ಮಾಧ್ಯಮ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

‘ಚುನಾವಣೆ ಘೋಷಣೆಯಾಗುವ ಮೊದಲೇ ಬಹುತೇಕ ಎಲ್ಲ ಮತದಾರರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರಿದ್ದೇನೆ. ಈಗ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ಮಾಡುತ್ತೇನೆ, ಧ್ವನಿ ಸಂದೇಶಗಳ ಮುದ್ರಿಕೆ ಕಾರ್ಯ ನಡೆಯುತ್ತಿದೆ. 250 ಸದಸ್ಯರ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ಆ ಗ್ರೂಪ್‌ಗಳ ಮೂಲಕ ಮತಯಾಚಿಸುತ್ತಿದ್ದೇನೆ’ ಎಂದು ಕುಬೇರಪ್ಪ ತಿಳಿಸಿದರು.

ಮತ್ತೊಂದು ಅವಧಿಗೆ ಸ್ಪರ್ಧಿಸಿರುವ ಬಿಜೆಪಿಯ ಎಸ್‌.ವಿ. ಸಂಕನೂರ ಪ್ರತಿಕ್ರಿಯಿಸಿ, ‘ಆರು ವರ್ಷಗಳಿಂದ ಮತದಾರರ ಜೊತೆ ಸಂಪರ್ಕದಲ್ಲಿದ್ದೇನೆ. ನಾಮಪತ್ರ ಸಲ್ಲಿಕೆ ಬಳಿಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹೀಗೆ ಎಲ್ಲ ಮತದಾರರಿಗೂ ಹಂತಹಂತವಾಗಿ ವೆಬಿನಾರ್‌ಗಳನ್ನು ನಡೆಸುತ್ತೇನೆ. ಮೊದಲ ಮೂರು ವರ್ಷಗಳ ಅವಧಿಯ ಸಾಧನೆಯ ‘ಸದನದಲ್ಲಿ ಸಂಕನೂರ’ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಈಗ ‘ಸ್ಪಂದನೆ ಮತ್ತು ಸಾಧನೆ’ ಪುಸ್ತಕ ಬಿಡುಗಡೆಯಾಗಲಿದೆ. ಇದನ್ನು ಎಲ್ಲ ಮತದಾರರಿಗೆ ತಲುಪಿಸಲಾಗುವುದು’ ಎಂದರು.

7ರಂದು ಕುಬೇರಪ್ಪ, 8ರಂದು ಸಂಕನೂರು ನಾಮಪತ್ರ ಸಲ್ಲಿಕೆ

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಬೇರಪ್ಪ ಬುಧವಾರ (ಅ. 7) ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಬೆಳಿಗ್ಗೆ 11ರಿಂದ 12 ಗಂಟೆ ಒಳಗೆ ಬಿಜೆಪಿ ಅಭ್ಯರ್ಥಿ ಸಂಕನೂರು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು