ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬೆಲೆ ಏರಿಕೆಗೂ ಕುಗ್ಗದ ಉತ್ಸಾಹ

ದುರ್ಗಾ ಪೂರ್ಣಕುಂಭ ಮೆರವಣಿಗೆ, ಆತಂಕದ ನಡುವೆಯೂ ದಸರಾ ಸಡಗರ
Last Updated 24 ಅಕ್ಟೋಬರ್ 2020, 16:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ದುರ್ಗದ ಬೈಲ್‌, ಜನತಾ ಬಜಾರ್‌, ಈದ್ಗಾ ಮೈದಾನ, ಹಳೇ ಹುಬ್ಬಳ್ಳಿ ಮತ್ತು ಕೇಶ್ವಾಪುರದಲ್ಲಿ ಶನಿವಾರ ಸಂಜೆ ದಸರಾ ಹಬ್ಬಕ್ಕಾಗಿ ಪೂಜಾ ಸಾಮಗ್ರಿಗಳು, ಹೂ, ಹಣ್ಣುಗಳ ಖರೀದಿ ಭರಾಟೆ ಜೋರಾಗಿತ್ತು.

ಕೊರೊನಾ ಸೋಂಕಿನ ಆತಂಕ ಇರುವ ಕಾರಣ ಈ ಬಾರಿಯ ನವರಾತ್ರಿಯಲ್ಲಿ ಯಾವ ದೇವಸ್ಥಾನಗಳಲ್ಲಿಯೂ ಪ್ರತಿವರ್ಷದಂತೆ ಜನ ಸೇರಿರಲಿಲ್ಲ. ಪ್ರಸಾದದ ವ್ಯವಸ್ಥೆಯೂ ಇರಲಿಲ್ಲ. ಆದರೆ, ಪ್ರತಿ ವರ್ಷದ ನವರಾತ್ರಿಯಲ್ಲಿ ನಡೆಸುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಹೂ ಹಾಗೂ ಹಣ್ಣಿನ ಬೆಲೆಗಳು ಗಗನಕ್ಕೆ ಏರಿದರೂ ಗ್ರಾಹಕರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.

ನವರಾತ್ರಿ ಆರಂಭಕ್ಕೆ ಒಂದು ದಿನ ಮೊದಲು ಒಂದು ಮಾರಿಗೆ ₹10ರಿಂದ ₹15 ಬೆಲೆಯಿದ್ದ ಮಲ್ಲಿಗೆ, ಕನಕಾಂಬರ, ಸೇವಂತಿ ಹೂಗಳ ಬೆಲೆ ಸಾಕಷ್ಟು ಏರಿಕೆಯಾಗಿತ್ತು. ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಒಂದು ಮಾರಿಗೆ ₹80ರಿಂದ ₹100ಕ್ಕೆ ಮಾರಾಟವಾದರೆ, ಕನಕಾಂಬರದ ಬೆಲೆ ₹100 ದಾಟಿತ್ತು. ಹೂವಿನ ಮಾರುಕಟ್ಟೆಯ ಪ್ರದೇಶದಲ್ಲಿ ಸಾಮಾನ್ಯ ದಿನಗಳಲ್ಲಿ ಒಂದು ಕೆ.ಜಿ. ಗುಲಾಬಿ ಹೂವಿನ ಬೆಲೆ ₹100ರಿಂದ ₹120 ಇರುತ್ತಿತ್ತು. ಕಳೆದ ಎರಡು ದಿನಗಳಿಂದ ₹200ಕ್ಕೆ ಏರಿಕೆಯಾಗಿತ್ತು. ಬಾಳೆಹಣ್ಣು, ಸೇಬು, ಕುಂಬಳಕಾಯಿ, ಕಬ್ಬಿನ ಗೊನೆ, ಬಾರೆಹಣ್ಣು ಮತ್ತು ಸೀತಾಫಲ ಹಣ್ಣುಗಳ ಬೆಲೆಯೂ ಹೆಚ್ಚಾಗಿತ್ತು.

ಅಂತರ ಕಾಯ್ದುಕೊಂಡು ಹಬ್ಬ ಆಚರಿಸಬೇಕು ಎಂದು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದರೂ, ಜನ ಅದನ್ನು ಪಾಲಿಸಿರಲಿಲ್ಲ. ಎಲ್ಲಿಯೂ ಅಂತರ ಕಂಡುಬರಲಿಲ್ಲ. ಸಂಜೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ರಂಗೇರುತ್ತಲೇ ಇತ್ತು.

‘ಕೋವಿಡ್ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಏಳೆಂಟು ತಿಂಗಳಿಂದ ವ್ಯಾಪಾರನೇ ಸರಿಯಾಗಿ ನಡೆದಿಲ್ಲ. ದಸರಾ, ದೀಪಾವಳಿ ಹಬ್ಬ ನಮ್ಮ ಕೈ ಹಿಡಿತಾದ. ಸಾಧ್ಯವಾದಷ್ಟು ಸುರಕ್ಷತೆ ಕಾಯ್ದುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಬೆಲೆ ಹೆಚ್ಚಾದರೂ ಖರೀದಿ ಮಾಡುವುದು ಜನರಿಗೂ ಅನಿವಾರ್ಯವಾಗಿದೆ’ ಎಂದು ಜನತಾ ಬಜಾರ್‌ನಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿದ್ದ ಬಸವ್ವ ಹೂಗಾರ ಹೇಳಿದರು.

ಮೆರವಣಿಗೆ: ದುರ್ಗಾಷ್ಟಮಿ ದಿನವಾದ ಶನಿವಾರ ನೇಕಾರ ನಗರ, ಸಹದೇವ ನಗರ, ಚನ್ನಪೇಟ ಮತ್ತು ದಾಜೀಬಾನ ಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ ಹುಬ್ಬಳ್ಳಿ ನಗರ ಘಟಕದ ವತಿಯಿಂದ ದುರ್ಗಾಕುಂಭ ಮೆರವಣಿಗೆ ನಡೆಯಿತು.

ದುರ್ಗಾದೌಡ್‌ನಲ್ಲಿ ಜಾಗರಣ ವೇದಿಕೆ ಪ್ರಮುಖರಾದ ಕೃಷ್ಣಮೂರ್ತಿ, ಆರ್.ಜೆ. ಮಟ್ಟಿ, ಗಣೇಶ ಜಿತೂರಿ, ಕೃಷ್ಣ ಗಂಡಗಾಳೇಕರ, ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠ ಜಡಿ, ಸೀಮಾ ಲದವಾ, ರಾಜೇಶ್ವರಿ ಜಡಿ, ವಿಶ್ವನಾಥ್ ಬುದ್ದೂರ್, ನಾಗರಾಜ ಕಲಾಲ, ಅವಿನಾಶ ಹರಿವಾಣ, ಅಮೃತ ಬದ್ದಿ ಪಾಲ್ಗೊಂಡಿದ್ದರು.

ದಾಜೀಬಾನ್‌ ಪೇಟೆಯಲ್ಲಿರುವ ತುಳಜಾ ಭವಾನಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ದಂಡು ಕಂಡುಬಂತು. ಬನಶಂಕರಿ ದೇವಾಲಯ, ಮಯೂರಿ ಎಸ್ಟೇಟ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಜನ ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT