ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿ: ಎಚ್‌ಸಿಎ ‘ಬಿ’ ತಂಡಕ್ಕೆ ಗೆಲುವು

Last Updated 24 ಜನವರಿ 2022, 14:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತಮ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ’ಬಿ‘ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 65 ರನ್‌ಗಳ ಗೆಲುವು ಸಾಧಿಸಿತು.

ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಚ್‌ಸಿಎ 48 ಓವರ್‌ಗಳಲ್ಲಿ 226 ರನ್‌ ಕಲೆಹಾಕಿತ್ತು. ಮನೀಷ ಎಂ.ಎಸ್‌. (68) ಮತ್ತು ಮಣಿಕಂಠ ಬುಕಿಟಗಾರ (71) ಅವರ ಅರ್ಧಶತಕ ಇದಕ್ಕೆ ಕಾರಣವಾಯಿತು.

ಗುರಿ ಬೆನ್ನು ಹತ್ತಿದ ಎದುರಾಳಿ ಗದುಗಿನ ಸ್ಪೋರ್ಟ್ಸ್‌ ಅಕಾಡೆಮಿ ತಂಡ 36.4 ಓವರ್‌ಗಳಲ್ಲಿ 161 ರನ್‌ ಗಳಿಸಿ ಆಲೌಟ್‌ ಆಯಿತು. ಮಣಿಕಂಠ ಮೂರು ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲ್ಲಿನ ಆನಂದ ಕ್ರಿಕೆಟ್‌ ಕೋಚಿಂಗ್ ಅಕಾಡೆಮಿ 205 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ ಓಂಕಾರ ದೇಶಪಾಂಡೆ (81), ಕೇತಾಜಿ ಕೊಲ್ಹಾಪುರೆ (61) ಮತ್ತು ಜೀಶನ ಅಲಿ ಸೈಯದ್‌ (ಔಟಾಗದೆ 123) ಉತ್ತಮ ಆಟದ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 364 ರನ್‌ ಕಲೆಹಾಕಿತು.

ಸವಾಲಿನ ಮೊತ್ತದ ಗುರಿಯ ಎದುರು ವಿಫಲವಾದ ಎದುರಾಳಿ ಧಾರವಾಡದ ಸಿಸಿಕೆ ’ಬಿ‘ ತಂಡ ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ 159 ರನ್‌ ಕಲೆಹಾಕಿ ತನ್ನ ಹೋರಾಟ ಮುಗಿಸಿತು.

ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿಯ ಟಾಲೆಂಟ್‌ ಅಕಾಡೆಮಿ ಎದುರು ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ ತಂಡ 94 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ನಾಲ್ಕು ಅಂಕಗಳನ್ನು ಪಡೆದುಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಟ್ಕಳದ ತಂಡ ಅಬ್ದುಲ್‌ ಬಿ. (61), ಮೊಹಮ್ಮದ್ ಆಸೀಮ್‌ ಕೆ. (ಔಟಾಗದೆ 99) ಉತ್ತಮ ಆಟದಿಂದ 50 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 265 ರನ್ ಗಳಿಸಿತು. ಹುಬ್ಬಳ್ಳಿಯ ತಂಡ ಕೇವಲ 71 ರನ್‌ಗೆ ಆಲೌಟ್‌ ಆಯಿತು. ವಿಜೇತ ತಂಡದ ಮೊಹಮ್ಮದ್ ಇಮ್ರಾನ್ ಏಳು ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT