ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆಗೊಳಗಾದ ಗರ್ಭಿಣಿ ಮಾನ್ಯಾ ದೊಡ್ಡಮನಿ (19) ಅವರ ಅಂತ್ಯಸಂಸ್ಕಾರವು ಸ್ವಗ್ರಾಮವಾದ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಸೋಮವಾರ ಮಧ್ಯಾಹ್ನ ಪೊಲೀಸ್ ಭದ್ರತೆಯಲ್ಲಿ ನೆರವೇರಿತು.

ಇದಕ್ಕೂ ಮುನ್ನ ಕುಟುಂಬಸ್ಥರು, ಆಂಬುಲೆನ್ಸ್ನಲ್ಲಿ ಮಾನ್ಯಾ ಅವರ ಮೃತದೇಹವನ್ನಿಟ್ಟು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಧಾರ್ಮಿಕ ವಿಧಿ– ವಿಧಾನ ನೆರವೇರಿಸಿದ ಬಳಿಕ, ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಕೈಯಲ್ಲಿ ಹಿಡಿದು ಮೆರವಣಿಗೆ ನಡೆಸಿದ ವಿವಿಧ ಸಂಘಟನೆಯ ಪದಾಧಿಕಾರಿಗಳು, ಜೈ ಭೀಮ್ ಎಂದು ಘೋಷಣೆ ಕೂಗಿದರು. ನ್ಯಾಯಕ್ಕಾಗಿ ಆಗ್ರಹಿಸಿದರು.

ಅಂತ್ಯಸಂಸ್ಕಾರದಲ್ಲಿ ವಿವೇಕಾನಂದ ಕುಟುಂಬಸ್ಥರು ಮತ್ತು ಗ್ರಾಮದ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟರೆ ತವರು ಮನೆಯ ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಉಳಿದಂತೆ ಗ್ರಾಮದ ಬಹುತೇಕರು ತಟಸ್ಥವಾಗಿ ಉಳಿದಿದ್ದರು.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸೋಮವಾರ ಪೊಲೀಸ್ ಭದ್ರತೆ ಮಾಡಲಾಗಿತ್ತು. ತುರ್ತು ಕಾರ್ಯದ ಹೊರತು, ಯಾರೊಬ್ಬರಿಗೂ ಗ್ರಾಮ ಪ್ರವೇಶಿಸದಂತೆ ನಿಷೇಧಿಸಲಾಗಿತ್ತು. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಭದ್ರತೆಯ ನೇತೃತ್ವ ವಹಿಸಿದ್ದರು.

ಶವ ಮೆರವಣಿಗೆ: ಕೆಎಂಸಿ-ಆರ್ಐ ಆಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಯಿತು. ಈ ವೇಳೆ ರಾಜ್ಯ ದಲಿತ ವಿಮೋಚನಾ ಸಮಿತಿ ಕಾರ್ಯಕರ್ತರು, ‘ಮಾನ್ಯಾ ಸಾವಿಗೆ ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಅಲ್ಲಿಂದ ಆಂಬುಲೆನ್ಸ್ನಲ್ಲಿ ಶವ ಇಟ್ಟು ಹೊಸೂರು ವೃತ್ತ, ದೇಶಪಾಂಡೆನಗರ, ಪಿಂಟೊರಸ್ತೆ ಮುಖಾಂತರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೈಕ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಒಂದು ನಿಮಿಷ ಮೌನಾಚರಿಸಿ ಮಾನ್ಯಾ ಆತ್ಮಕ್ಕೆ ಶಾಂತಿ ಕೋರಿದರು.

ಕಠಿಣ ಶಿಕ್ಷೆಗೆ ಆಗ್ರಹ: ‘ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ರಾಜ್ಯ ದಲಿತ ವಿಮೋಚನ ಸಮಿತಿ ರಾಜ್ಯಾಧ್ಯಕ್ಷ ಸುರೇಶ ಖಾನಾಪುರ ಆಗ್ರಹಿಸಿದರು.

ಕೆಎಂಸಿ– ಆರ್ಐ ಆಸ್ಪತ್ರೆಯ ಶವಾಗಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಧಾರವಾಡ ಜಿಲ್ಲೆಯಲ್ಲಿ ನಡೆದ ಮೊದಲ ಮರ್ಯಾದೆಗೇಡು ಹತ್ಯೆ ಪ್ರಕರಣ ಇದಾಗಿದೆ. ತುಂಬು ಗರ್ಭಿಣಿಯಾಗಿದ್ದ ಮಗಳನ್ನು ಅಪ್ಪನೇ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದರೆ ಇದರಷ್ಟು ಅಮಾನುಷ ಕೃತ್ಯ ಮತ್ತೊಂದಿಲ್ಲ’ ಎಂದು ಆಕ್ರೋಶ ವ್ಯಕ್ಯಪಡಿಸಿದರು.

‘ಮಾನ್ಯಾಳ ಪಾಲಕರಿಗೆ ಪೊಲೀಸರು ಮೂರು ಬಾರಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಅದನ್ನೂ ಲೆಕ್ಕಿಸದೆ, ತಮ್ಮ ಮಗಳನ್ನೇ ಕೊಲೆ ಮಾಡುವ ಮೂಲಕ ಇನ್ನೂ ಅಸ್ಪೃಶ್ಯತೆ ಜೀವಂತ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಇಂಥ ಪ್ರಕರಣ ನಡೆದರೆ ಪೊಲೀಸರ ಯಾವ ಕಟ್ಟಳೆಗಳನ್ನೂ ಪಾಲಿಸದೆ, ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.

ದೂರಿನಲ್ಲಿ ಏನಿದೆ? ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಮಾನ್ಯಾ ಪಾಟೀಲ ಹಾಗೂ ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಮಾನ್ಯಾ ಕುಟುಂಬದವರು ಕೋಪಗೊಂಡಿದ್ದರು. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಇನಾಂ ವೀರಾಪುರ ಗ್ರಾಮದ ಹೊರವಲಯದ ಗಿರಿಯಾಲ ರಸ್ತೆಯಲ್ಲಿ ವಿವೇಕಾನಂದ ಅವರ ತಂದೆ ಮರಿಯಪ್ಪ ಮಾವ ಸುನೀಲ ಅವರು ಬೈಕ್ ಮೇಲೆ ತೆರಳುತ್ತಿದ್ದಾಗ ಮಾನ್ಯಾ ತಂದೆ ಹಾಗೂ ಕುಟುಂಬಸ್ಥರು ಟ್ರ್ಯಾಕ್ಟರ್ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ್ದರು. ವಿಷಯ ತಿಳಿದು ವಿವೇಕಾನಂದ ಅವರು ಸ್ಥಳಕ್ಕೆ ಹೋದಾಗ ಅವರ ಮೇಲೆ ಪ್ರಕಾಶಗೌಡ ಪಾಟೀಲ ಮತ್ತು ಆಕಾಶಗೌಡ ಪಾಟೀಲ ರಾಡ್ ಹಾಗೂ ಸ್ಪ್ರಿಂಕ್ಲರ್ ಪೈಪ್ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲ ಗುಂಪುಗೂಡಿ ವಿವೇಕಾನಂದ ಅವರ ಮನೆಗೆ ಹೋಗಿ ಅವಾಚ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ. ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಿಸಿಟಿವಿ ಕ್ಯಾಮೆರಾ ಕಿತ್ತುಹಾಕಿ ವಿವೇಕಾನಂದ ಅವರ ತಾಯಿ ರೇಣುಕಾ ಹಾಗೂ ಪತ್ನಿ ಮಾನ್ಯಾ ಅವರ ಮೇಲೆ ಕೊಡಲಿ ರಾಡ್ ಸ್ಪ್ರಿಂಕ್ಲರ್ನಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಲು ಮುಂದಾದ ಯಲ್ಲಪ್ಪ ದೊಡ್ಡಮನಿ ಸಂಗೀತಾ ದೊಡ್ಡಮನಿ ಉವಮ್ಮಾ ದೊಡ್ಡಮನಿ ಅನನ್ಯಾ ದೊಡ್ಡಮನಿ ಅವರಿಗೆ ಜೀವ ಬೆದರಿಕೆ ಹಾಕಿ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 9.15 ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

14 ಮಂದಿ ವಿರುದ್ಧ ಪ್ರಕರಣ ದಾಖಲು

ಕೊಲೆಗೆ ಸಂಬಂಧಿಸಿ 14 ಮಂದಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಕಾಶಗೌಡ ವೀರನಗೌಡ ಮತ್ತು ಅರುಣಗೌಡ ಅವರನ್ನು ಬಂಧಿಸಿರುವ ಪೊಲೀಸರು ಉಳಿದವರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ. ಗುರುಸಿದ್ದಗೌಡ ಆಕಾಶ ಗೌಡ ಮುದಕಪ್ಪ ಫಕ್ಕೀರಗೌಡ ಪ್ರೀತಂಗೌಡ ಕುಮಾರಗೌಡ ರೇಖಾ ಪ್ರೇಮಾ ಈರವ್ವ ಈರಣಗೌಡ ಪದ್ಮಾ ಬಸನಗೌಡ ಮಂಜವ್ವ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಗಲಭೆ ಕಾನೂನು ಬಾಹಿರವಾಗಿ ಗುಂಪುಗೂಡುವುದು ಮಾರಕಾಸ್ತ್ರದಿಂದ ಹಲ್ಲೆ ಕೊಲೆ ಕೊಲೆ ಯತ್ನ ಉದ್ದೇಶಪೂರ್ವಕ ದುಷ್ಕೃತ್ಯ ಅಕ್ರಮ ಪ್ರವೇಶ ಶಾಂತಿ ಕದಡುವ ಯತ್ನ ಜೀವ ಬೆದರಿಕೆ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸೀಮಂತಕ್ಕೆ ಬಂದವಳು ಹೆಣವಾದಳು..

. ಗರ್ಭಿಣಿ ಮಾನ್ಯಾ ಕೊಲೆ ಹಾಗೂ ಆಕೆಯ ಪತಿ ಕುಟುಂಬದ ಮೇಲೆ ನಡೆದ ದೌರ್ಜನ್ಯ ಘಟನೆಯಿಂದ ಇನಾಂ ವೀರಾಪೂರ ಗ್ರಾಮ ಅಕ್ಷರಶಃ ನಲುಗಿ ಹೋಗಿದೆ. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಗ್ರಾಮದ ರಸ್ತೆಯಲ್ಲಿ ಕಾಣುವ ರಕ್ತದ ಕಲೆಗಳೇ ಈ ಅಟ್ಟಹಾಸ ಕ್ರೌರ್ಯಕ್ಕೆ ಸಾಕ್ಷಿಯಾಗಿವೆ. ಮಾನ್ಯಾ– ವಿವೇಕಾನಂದರ ಕುಟುಂಬಗಳ ನಡುವೆ ಸಂಘರ್ಷ ನಡೆದಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿತ್ತು. ಸಂಘರ್ಷ ಕೊನೆಗಾಣಿಸಲು ಧಾರವಾಡ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಬಾಂಡ್ ಬರೆಯಿಸಿಕೊಂಡು ಪೊಲೀಸರು ತಾಕೀತು ಮಾಡಿದ್ದರು. ‘ಮಾನ್ಯಾ 6 ತಿಂಗಳ ಗರ್ಭಿಣಿಯಾಗಿದ್ದರಿಂದ ತಾಯಿ ಕಾರ್ಡ್ ಕೆಲವು ದಾಖಲೆ ತಿದ್ದುಪಡಿ ಹಾಗೂ ಸೀಮಂತ ಕಾರ್ಯಕ್ಕಾಗಿ ಡಿ.8ರಂದು ಇನಾಂವೀರಾಪೂರ ಗ್ರಾಮಕ್ಕೆ ಬಂದಿದ್ದರು. ಕುಟುಂಬದ ಮರ್ಯಾದೆ ಹಾಳು ಮಾಡಿ ಈಗ ಊರಿಗೆ ಮರಳಿ ಬಂದಿದ್ದಕ್ಕೆ ಕೋಪಗೊಂಡ ಮಾನ್ಯಾ ತಂದೆ ಹಾಗೂ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.