ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಟರ್‌ ಬಡ್ಡಿ ಆರೋಪ; ಆತ್ಮಹತ್ಯೆ

Published : 31 ಆಗಸ್ಟ್ 2024, 16:14 IST
Last Updated : 31 ಆಗಸ್ಟ್ 2024, 16:14 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯ ಚೇತನಾ ಕಾಲೊನಿ ನಿವಾಸಿ ಸುಜಿತ್‌ ಸುಳ್ಳದ ಅವರು ಸಾಲಗಾರರ ಕಿರುಕುಳ ತಾಳದೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಾಲಾ–ಕಾಲೇಜುಗಳಿಗೆ ಕಂಪ್ಯೂಟರ್‌ ಬಿಡಿಭಾಗಗಳನ್ನು ಪೂರೈಸುವ ಉದ್ಯಮದಲ್ಲಿ ಸುಜಿತ್‌ ತೊಡಗಿಕೊಂಡಿದ್ದ. ಅದಕ್ಕಾಗಿ ಪರಿಚಯದವರಲ್ಲಿ ಹಾಗೂ ಕೆಲವರಿಂದ ₹1.50 ಕೋಟಿಯಷ್ಟು ಸಾಲ ಮಾಡಿದ್ದ ಎನ್ನಲಾಗುತ್ತಿದೆ. ಸಾಲ ನೀಡಿದವರು ಮೀಟರ್‌ ಬಡ್ಡಿ ಸಮೇತ ಅಸಲು ನೀಡುವಂತೆ ಕಿರುಕುಳ ನೀಡುತ್ತಿದ್ದರು. ಅದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಕುರಿತು ಮರಣ ಪತ್ರ ಬರೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಸುಜಿತ್‌ ಸಂಬಂಧಿ ಮಹೇಶ ಗೋರಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್, ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ಮರಣ ಪತ್ರ ಪರಿಶೀಲಿಸಿ, ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗೆ ಸೂಚಿಸಿದ್ದಾರೆ.

ಕೃತಿಚೌರ್ಯ, ಪ್ರಕರಣ ದಾಖಲು: ವಿವಿಧ ಕಂಪನಿಗಳ ಹೆಸರಲ್ಲಿ ನಕಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಕೊಪ್ಪಿಕರ್‌ ರಸ್ತೆಯ ಸಂಗಮ ಡಿಪೋ ಬುಕ್‌ ಮಾಲೀಕರ ವಿರುದ್ಧ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕಂಪನಿ ಪ್ರತಿನಿಧಿ, ಆರ್ಯನ್‌ ರಾಘವ ಶಹರ ಠಾಣೆಯಲ್ಲಿ ಕೃತಿಚೌರ್ಯ ಪ್ರಕರಣ ದಾಖಲಿಸಿದ್ದಾರೆ.

ಆರ್ಯ ರಾಘವ ಅವರು ಕೆಲ ದಿನಗಳ ಹಿಂದೆ ಪುಸ್ತಕದ ಅಂಗಡಿಗೆ ತೆರಳಿ ಕೆಲವು ಪುಸ್ತಕಗಳನ್ನು ಖರೀದಿಸಿದ್ದರು. ಎಸ್‌. ಚಂದ ಆ್ಯಂಡ್‌ ಕಂಪನಿ ಲಿ., ಸ್ಪ್ರೆಕ್ಟಮ್‌ ಬುಕ್ಸ್‌ ಪ್ರೈ.ಲಿ., ಮ್ಯಾಕ್‌ಗ್ರೋ ಹಿಲ್‌ ಎಜ್ಯುಕೇಷನ್‌ ಪ್ರೈ.ಲಿ. ಮತ್ತು ಜಾಯ್‌ಪೀ ಬ್ರದರ್ಸ್‌ ಮೆಡಿಕಲ್‌ ಪಬ್ಲಿಷರ್‌ ಲಿ. ಕಂಪನಿ ಮಾಲೀಕತ್ವಕ್ಕೆ ಒಳಪಟ್ಟ ನಕಲಿ ಪುಸ್ತಕಗಳನ್ನು, ಅಸಲಿ ಪುಸ್ತಕಗಳೆಂದು ಮಾರಾಟ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಎಂ.ಎಂ. ತಹಶೀಲ್ದಾರ್‌, ‘ಕಂಪನಿ ಪ್ರತಿನಿಧಿ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಅಂಗಡಿಯನ್ನು ವಶಕ್ಕೆ ಪಡೆದು ಬೀಗ ಹಾಕಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT