ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪ್ರಕರಣ | ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಲಿದೆ: ಸಚಿವ ಪ್ರಲ್ಹಾದ ಜೋಶಿ

Published 30 ನವೆಂಬರ್ 2023, 16:25 IST
Last Updated 30 ನವೆಂಬರ್ 2023, 16:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆದಾಯಕ್ಕಿಂತ ಮೀರಿ ಆಸ್ತಿ ಹೊಂದಿದ ಆರೋಪಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದ ಹಿಂದಿನ ಸರ್ಕಾರದ ಅನುಮತಿಯನ್ನು ಈಗಿನ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ, ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿದ್ದ ರಿಟ್‌ ಅರ್ಜಿ ಸಂಬಂಧದ ಮೇಲ್ಮನವಿ ಅವರು ಹಿಂಪಡೆದಿದ್ದಾರೆ. ಆದರೂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಕ್ರಮ ಡಿ.ಕೆ. ಶಿವಕುಮಾರ್‌ ಅವರಿಗೆ ಮುನ್ನಡೆಯೋ, ಹಿನ್ನೆಡೆಯೋ ಅವರವರ ವಿಚಾರಕ್ಕೆ ಬಿಟ್ಟಿದ್ದು. ಮೇಲ್ಮನವಿಯನ್ನು ವಿಭಾಗೀಯ ಪೀಠದಲ್ಲಿ ಹಿಂಪಡೆದಿದ್ದಾರೆ. ಆದರೆ, ಏಕಸದಸ್ಯ ಪೀಠ ವಿಚಾರಣೆ ಮುಂದುವರಿಸಲು ಹೇಳಿತ್ತು. ಮೇಲ್ಮನವಿ ಹಿಂಪಡೆಯಲಾಗಿದೆ ಎಂದರೆ, ಕೋರ್ಟ್‌ ಒಪ್ಪಿದೆ ಎಂದರ್ಥವಲ್ಲ’ ಎಂದರು.

‘ಮಧ್ಯಂತರ ಬೆಳೆವಿಮೆ ಪರಿಹಾರದ ಬಗ್ಗೆ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೆ. ಪರಿಹಾರ ದರ ನಿಗದಿ ಬಗ್ಗೆ ಸಮಸ್ಯೆಯಿದ್ದರೆ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ನಿಷ್ಕಾಳಜಿಯಿಂದ ರೈತರಿಗೆ ಮಧ್ಯಂತರ ಪರಿಹಾರ ಸರಿಯಾಗಿ ದೊರಕುತ್ತಿಲ್ಲ. ಪರಿಹಾರ ಮೊತ್ತದ ದರ ನಿಗದಿ ತಪ್ಪಾಗಿದ್ದು, ರಾಜ್ಯ ಸರ್ಕಾರ ತಕ್ಷಣ ಮರುಪರಿಶೀಲನೆಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಾಕಷ್ಟು ಕಾಮಗಾರಿ ನಡೆದಿದ್ದರೂ, ಗುತ್ತಿಗೆದಾರರಿಗೆ ಹಣ ಪಾವತಿಸಲು ರಾಜ್ಯ ಸರ್ಕಾರ ಮೀನಮೇಷ ಮಾಡುತ್ತಿದೆ. ಕೆಲವು ಗುತ್ತಿಗೆದಾರರು ಹಣ ಪಾವತಿಸಲು ವಿನಂತಿಸಿದರೆ, ಮೇಲಿನಿಂದ ಬಾಕಿಯಿಡಲು ಸೂಚನೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಾಮಗಾರಿಯಲ್ಲಿ ಸಮಸ್ಯೆಯಾಗಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ಆರು ತಿಂಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ನೆಲಕಚ್ಚಿದೆ’ ಎಂದು ಜೋಶಿ ಹೇಳಿದರು.

‘ಆಡಳಿತ ಪಕ್ಷಕ್ಕೆ ಜನರ ಕಲ್ಯಾಣಕ್ಕಿಂತ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು, ಯಾವಾಗ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಬೇಕು ಎನ್ನುವುದೇ ಮುಖ್ಯವಾಗಿದೆ. ರಾಜ್ಯಕ್ಕೆ ಶಶಿ ತರೂರ್‌ ಬಂದಾಗಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಪ್ರಶ್ನೆ ಕೇಳಿದ್ದರು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದರ ದ್ಯೋತಕ ಇದಾಗಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT