ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ಆಹಾರಕ್ಕೆ ಹೆಚ್ಚಿದ ಬೇಡಿಕೆ

ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು, ಕಾರ್ಮಿಕರ ಹೊಟ್ಟೆ ತುಂಬಿಸುತ್ತಿರುವ ಕ್ಯಾಂಟೀನ್
Last Updated 30 ಮೇ 2021, 7:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಅವಳಿ ನಗರದ ಇಂದಿರಾ ಕ್ಯಾಂಟೀನ್‌ಗಳ ಆಹಾರಕ್ಕೆ ಭಾರಿ ಬೇಡಿಕೆ ಬಂದಿದೆ. ಕೂಲಿ ಹಾಗೂ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ಹಾಗೂ ನಿರ್ಗತಿಕರು ಹಸಿವು ನೀಗಿಸಿಕೊಳ್ಳಲು ಕ್ಯಾಂಟೀನ್‌ಗಳನ್ನು ಅವಲಂಬಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆ ಆವರಣ, ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣ, ಉಣಕಲ್, ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್, ಬೆಂಗೇರಿ, ಸೋನಿಯಾ ಗಾಂಧಿ ನಗರ, ಎಸ್‌.ಎಂ. ಕೃಷ್ಣಾನಗರ, ಧಾರವಾಡದಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧದಲ್ಲಿರುವ ಒಟ್ಟು 9 ಕ್ಯಾಂಟೀನ್‌ಗಳಿಗೆ ದಿನದ ಮೂರು ಹೊತ್ತು ಪೂರೈಕೆಯಾಗುವ ಆಹಾರ ಸಂಪೂರ್ಣವಾಗಿ ಖಾಲಿಯಾಗುತ್ತಿದೆ.

ಲಾಕ್‌ಡೌನ್ ಘೋಷಣೆಯಾದ ಕೆಲವೇ ದಿನಗಳಲ್ಲಿ ಸರ್ಕಾರ ಕ್ಯಾಂಟೀನ್‌ ಗಳಲ್ಲಿ ಉಚಿತವಾಗಿ ಆಹಾರವನ್ನು ಪಾರ್ಸೆಲ್ ನೀಡುವಂತೆ ಆದೇಶಿಸಿತ್ತು. ಇದಕ್ಕೂ ಮುಂಚೆ ಕ್ಯಾಂಟೀನ್‌ಗಳಲ್ಲಿ ಬೆಳಗ್ಗಿನ ಉಪಾಹಾರಕ್ಕೆ ₹5, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹10 ದರ ನಿಗದಿಪಡಿಸಲಾಗಿತ್ತು.

ಕಾರ್ಮಿಕರೇ ಹೆಚ್ಚು

‘ವಾರದ ಸಂಬಳಕ್ಕೆ ಅಂಗಡಿಯೊಂದರಲ್ಲಿ ಕೆಲಸ ಮಾಡುವೆ.ಲಾಕ್‌ಡೌನ್ ಆದಾಗಿ ನಿಂದ ಕೆಲಸ ನಿಂತಿದೆ. ನಮ್ಮದು ಅಂಗವಿಕಲ ಕುಟುಂಬ. ಇಬ್ಬರು ಮಕ್ಕಳಿದ್ದಾರೆ. ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣವೂ ಖಾಲಿಯಾಯಿತು. ಈಗ ನಿತ್ಯ ಕ್ಯಾಂಟೀನ್‌ಗೆ ಬಂದು ಮನೆಗೆ ಉಪಾಹಾರ ಮತ್ತು ಊಟದ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಗೋಕುಲ ರಸ್ತೆಯ ಕ್ಯಾಂಟೀನ್‌ಗೆಪತ್ನಿ ಸಮೇತ ತ್ರಿಚಕ್ರ ವಾಹನದಲ್ಲಿ ಬಂದಿದ್ದ ವಿಠ್ಠಲ್ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಒದ್ದಾಡುತ್ತಿರುವ ನಮ್ಮ ನೆರವಿಗೆ ಹಿಂದಿನಂತೆ ಈ ಸಲ ಯಾರೂ ಬಂದಿಲ್ಲ. ಸಂಕಷ್ಟದಲ್ಲಿರುವವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಆಹಾರ ಸಿಗುತ್ತಿರುವುದೇ ಅದೃಷ್ಟ’ ಎಂದಾಗ ಅವರ ಕಣ್ಣುಗಳು ತೇವವಾದವು.

ಹಣವಿದ್ದರೂ ಊಟವಿಲ್ಲ

‘ನಮ್ಮ ಬಳಿ ಹಣವಿದೆ. ಆದರೆ, ಊಟ ಖರೀದಿಸಲು ಯಾವ ಹೋಟೆಲ್‌ಗಳೂ ತೆರೆದಿಲ್ಲ’ ಎಂದು ಮಾತಿಗಿಳಿದರು ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಬಿಹಾರದ ಕಾರ್ಮಿಕ ಪ್ರದೀಪ್ ಮತ್ತು ರಾಮಸೇವಕ್.

‘ನಾವು ಕೆಲಸ ಮಾಡುವ ಫ್ಯಾಕ್ಟರಿಯಿಂದ ಸ್ವಲ್ಪ ದೂರದಲ್ಲಿರುವ ರಸ್ತೆ ಬದಿ ಕೆಲವರು ಹೋಟೆಲ್ ಇಟ್ಟು ಕೊಂಡಿದ್ದರು. ಲಾಕ್‌ಡೌನ್ ಶುರುವಾದಾಗಿನಿಂದ ಬಂದ್ ಮಾಡಿದ್ದಾರೆ. ಆಹಾರಕ್ಕೆ ಆ ಹೋಟೆಲ್‌ಗಳನ್ನೇ ನಾವು ಆಶ್ರಯಿಸಿದ್ದೆವು. ಈಗ ಬೇರೆ ಕಡೆ ಹೋಗಲು ಈ ಊರು ಅಷ್ಟಾಗಿ ಗೊತ್ತಿಲ್ಲ. ಹೋದರೂ, ಪೊಲೀಸರ ಕಾಟ. ಹಾಗಾಗಿ, ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ನಿತ್ಯ ಬಂದು ಆಹಾರ ಪಾರ್ಸೆಲ್ ತೆಗೆದುಕೊಂಡು ಹೋಗುತ್ತೇವೆ. ನಮ್ಮಂತೆ ಹಲವರು ಇಲ್ಲಿಗೆ ಬರುತ್ತಾರೆ’ ಎಂದರು.

‘ಕೆಲ ಹೊತ್ತಿನಲ್ಲೇ ಖಾಲಿ’

‘ಬಡವರು ಹಾಗೂ ಕಾರ್ಮಿಕರು ಬೀದಿ ಬದಿ ಹೋಟೆಲ್‌ಗಳು ಹಾಗೂ ದರ್ಶಿನಿಗಳನ್ನೇ ಅವಲಂಬಿಸಿದ್ದರು. ಈಗ ಅವು ಮುಚ್ಚಿವೆ. ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಸಲ್ ಕೊಟ್ಟರೂ, ಅಲ್ಲಿನ ಊಟ ಇವರಿಗೆ ದುಬಾರಿ. ಹಾಗಾಗಿ, ಬಹುತೇಕರು ಕ್ಯಾಂಟೀನ್‌ಗಳನ್ನು ಅವಲಂಬಿಸಿದ್ದಾರೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು. ‘ಪ್ರತಿ ಕ್ಯಾಂಟೀನ್‌ಗೆ ನಿತ್ಯ 500 ಮಂದಿಗೆ ಆಗುವಷ್ಟು ಆಹಾರ ಕಳಿಸುತ್ತೇವೆ. ಅಲ್ಯೂಮಿನಿಯಂ ಪೌಚ್‌ನಲ್ಲಿ ಆಹಾರವನ್ನು ಪಾರ್ಸೆಲ್ ನೀಡಲಾಗುತ್ತಿದೆ. ಹಿಂದೆ ಕೆಲ ಕ್ಯಾಂಟೀನ್‌ಗಳಲ್ಲಿ ಆಹಾರ ಉಳಿಯುತ್ತಿತ್ತು. ಈಗ ಅಂತಹ ಕಡೆಯಲ್ಲೆಲ್ಲಾ ಹೆಚ್ಚಿನ ಬೇಡಿಕೆ ಬಂದಿದೆ. ಆಹಾರ ಕಳಿಸಿದ ಕೆಲವೇ ಹೊತ್ತಿನಲ್ಲೇ ಖಾಲಿಯಾಗುತ್ತಿದೆ’ ಎಂದು ಆಹಾರ ಪೂರೈಕೆ ಮಾಡುವಗುತ್ತಿಗೆದಾರ ಮೋಹನ ಮೋರೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT