ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ಮೇಳ: ಮುಗದ ಸಿರಿ, ಸುಗಂಧ ಭತ್ತಕ್ಕೆ ಬೇಡಿಕೆ

ಮುಗದ ಕೃಷಿ ಸಂಶೋಧನಾ ಕೇಂದ್ರದಿಂದ ವಿವಿಧ ತಳಿಯ ಭತ್ತದ ಮಾದರಿ ಪ್ರದರ್ಶನ
Published 12 ಸೆಪ್ಟೆಂಬರ್ 2023, 4:44 IST
Last Updated 12 ಸೆಪ್ಟೆಂಬರ್ 2023, 4:44 IST
ಅಕ್ಷರ ಗಾತ್ರ

ಧಾರವಾಡ: ಮುಗದ ಕೃಷಿ ಸಂಶೋಧನಾ ಕೇಂದ್ರದಿಂದ ಹಲವು ವಿಶಿಷ್ಟ ತಳಿಯ ಭತ್ತದ ಮಾದರಿಗಳನ್ನು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ರೈತರನ್ನು ಸೆಳೆಯಲು ಯಶಸ್ವಿಯಾಗಿವೆ.

ಕೆಂಪು ಅಕ್ಕಿ, ರಾಜಮುಡಿ, ಕಪ್ಪು ಅಕ್ಕಿ (ಲಾವಣ್ಯ), ಎಂ.ಜಿ.ಡಿ. 101, ಮುಗದ ಸಿರಿ, ಎಂಜಿಡಿ 03, ಅಭಿಲಾಷ ಹಾಗೂ ಮುಗದ ಸುಗಂಧ ತಳಿಗಳ ಬಗ್ಗೆ ರೈತರು ಕುತೂಹಲದಿಂದ ಮಾಹಿತಿ ಪಡೆದರು.

ಮುಗದ ಸಿರಿ ತಳಿಯು ಸೋನಾ ಮಸೂರಿಯಂತೆ ಸಣ್ಣ ಕಾಳುಗಳನ್ನು ಹೊಂದಿದ್ದು, ಅಡುಗೆಗೆ ಉತ್ತಮವಾಗಿದೆ. ಬೆಂಕಿ ರೋಗಕ್ಕೆ ಮಧ್ಯಮ ನಿರೋಧಕತೆ ಹೊಂದಿದೆ. ಮುಗದ ಸುಗಂಧ ತಳಿಯು ಬಾಸುಮತಿ ಅಕ್ಕಿಯಂತೆ ಸುಗಂಧಭರಿತವಾಗಿದ್ದು, ಬರ ಹಾಗೂ ಬೆಂಕಿ ರೋಗ ತಡೆದುಕೊಳ್ಳುತ್ತದೆ. ಉದ್ದನೆಯ ಸಣ್ಣ ಕಾಳುಗಳನ್ನು ಹೊಂದಿದ್ದು, ಹೆಚ್ಚಿನ ಇಳುವರಿ ನೀಡುತ್ತದೆ.

ಉದ್ದನೆಯ ತೆಳ್ಳನೆಯ ಕಾಳು ಹೊಂದಿರುವ ಎಂ.ಜಿ.ಡಿ. 03 ತಳಿಯು ಚುರಮುರಿ ಹಾಗೂ ಅವಲಕ್ಕಿಗೆ ಸೂಕ್ತವಾಗಿದೆ. ಅಭಿಲಾಷ ಸಹ ಹೆಚ್ಚು ಇಳುವರಿ ಕೊಡುವ ದೀರ್ಘಾವಧಿಯ ತಳಿಯಾಗಿದೆ. ಬರ, ಬೆಂಕಿ ರೋಗ ಹಾಗೂ ಎಲೆ ಮಡಚುವಿಕೆಯ ಕೀಟಗಳಿಗೆ ನಿರೋಧಕತೆ ಹೊಂದಿರುವ ಎಂಜಿಡಿ 101 ತಳಿಯಲ್ಲಿ ಪೈರು ಬೀಳುವುದಿಲ್ಲ. ಸಣ್ಣ ದಪ್ಪನೆಯ ಕಾಳುಗಳನ್ನು ಹೊಂದಿದೆ. ದೊಡಿಗಾ ತಳಿಗಳಿಗಿಂತ ಶೇ 20ರಷ್ಟು ಹೆಚ್ಚಿನ ಇಳುವರಿ ನೀಡುತ್ತದೆ.

ಬರಲಿದೆ ಅರೋಬಿಕ್ ಭತ್ತ: ಹವಾಮಾನ ವೈಪರೀತ್ಯದಿಂದಾಗಿ ಮಳೆ ಪ್ರಮಾಣದಲ್ಲಿ ಪ್ರತಿ ವರ್ಷ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಇಂಥ ವೈಪರೀತ್ಯಗಳಲ್ಲೂ ರೈತರಿಗೆ ಉತ್ತಮ ಇಳುವರಿ ನೀಡುವ ಭತ್ತದ ತಳಿಯ ಸಂಶೋಧನೆಗೆ ಇಲ್ಲಿಯ ಮುಗದ ಕೃಷಿ ವಿಜ್ಞಾನ ಕೇಂದ್ರ ಆದ್ಯತೆ ನೀಡಿದೆ.

‘ಬರ ಇದ್ದಾಗಲೂ ಕಡಿಮೆ ನೀರಿನಲ್ಲಿ ಬೆಳೆದು ಹೆಚ್ಚಿನ ಇಳುವರಿ ನೀಡಬಲ್ಲಂಥ ಅರೋಬಿಕ್ ಭತ್ತದ ಸಂಶೋಧನಾ ಕಾರ್ಯ ನಡೆಯುತ್ತಿದೆ. ಪ್ರಾಯೋಗಿಕ ಪರೀಕ್ಷೆಯ ನಂತರ ರೈತರನ್ನು ಕೃಷಿ ಕ್ಷೇತ್ರಕ್ಕೆ ಕರೆಸಿ ಪ್ರಾತ್ಯಕ್ಷಿಕೆ ನೀಡಲಾಗುವುದು’ ಎಂದು ಕೇಂದ್ರದ ಮುಖ್ಯಸ್ಥ ಜೆ.ಆರ್. ದಿವಾಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಮುಗದ ಸಿರಿ ಹಾಗೂ ಮುಗದ ಸುಗಂಧ ತಳಿಗಳ ಬಗ್ಗೆ ರೈತರು ಆಸಕ್ತಿ ತೋರಿದ್ದಾರೆ. ಇಂಟಾನ್ ತಳಿಗೂ ಬೇಡಿಕೆಯಿದೆ. ಕಪ್ಪು ಭತ್ತ ಲಾವಣ್ಯ ತಳಿಯ ಬಗ್ಗೆಯೂ ಕೃಷಿ ಮೇಳದಲ್ಲಿ ಹಲವು ರೈತರು ಮಾಹಿತಿ ಪಡೆದಿದ್ದಾರೆ’ ಎಂದು ಅವರು ತಿಳಿಸಿದರು.

ಕೃಷಿ ಮೇಳದಲ್ಲಿ ಅಳ್ನಾವರ ಕಿತ್ತೂರು ದಾವಣಗೆರೆ ಮಲೇಬೆನ್ನೂರು ಹಾಗೂ ಮಹಾರಾಷ್ಟ್ರದ ಗಡಿ ಭಾಗದ ರೈತರು ಭತ್ತದ ಬಗ್ಗೆ ಹೆಚ್ಚು ಮಾಹಿತಿ ಪಡೆದಿದ್ದಾರೆ
– ಜೆ.ಆರ್. ದಿವಾಣ, ಮುಖ್ಯಸ್ಥರು ಕೃಷಿ ಸಂಶೋಧನಾ ಕೇಂದ್ರ ಮುಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT