ಮಂಗಳವಾರ, ಮಾರ್ಚ್ 21, 2023
20 °C
ಬಾಗಿಲು ತೆರೆದ ಮಾಲ್: ಕೋವಿಡ್ ನಿಯಮ ಲೆಕ್ಕಿಸದ ಜನ

ಹುಬ್ಬಳ್ಳಿ: ಮಠ, ದೇಗುಲಗಳಲ್ಲಿ ಭಕ್ತರ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿ ದೇವಸ್ಥಾನಗಳು, ಮಠ, ಮಾಲ್‌ಗಳು ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳಿಗೆ ಪ್ರವೇಶ ಮುಕ್ತಗೊಳಿಸಿರುವುದರಿಂದ ಸೋಮವಾರ ನಗರದಲ್ಲಿ ಹೆಚ್ಚಿನ ಜನ ಹಾಗೂ ವಾಹನ ದಟ್ಟಣೆ ಕಂಡುಬಂತು. ವ್ಯಾಪಾರ– ವಹಿವಾಟು ಕೂಡ ಗರಿಗೆದರಿರುವುದರಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ಯಥಾ ಪ್ರಕಾರ ಜನಸಂದಣಿ ಇತ್ತು. 

ಎರಡೂವರೆ ತಿಂಗಳ ಬಳಿಕ ಭಕ್ತರ ಪ್ರವೇಶಕ್ಕೆ ಮುಕ್ತವಾದ ಸಿದ್ದಾರೂಢ ಮಠ, ಮೂರುಸಾವಿರ ಮಠ, ಸಾಯಿಬಾಬಾ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ಹರಿವು ಹೆಚ್ಚಾಗಿತ್ತು. ಎಂದಿನಂತೆ ಪೂಜಾ ಕಾರ್ಯಗಳು ನಡೆದವು.

ಸ್ವಚ್ಛತೆ, ಸ್ಯಾನಿಟೈಸ್: ‘ಭಕ್ತರ ಪ್ರವೇಶಕ್ಕೆ ಸರ್ಕಾರ ಅವಕಾಶ ನೀಡಿದ್ದರಿಂದ ಒಂದು ದಿನ ಮುಂಚೆಯೇ ಮಠದ ಆವರಣವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿಸಲಾಗಿದೆ. ಭಕ್ತರು ಗುಂಪುಗೂಡದಂತೆ ಕೆಲವೆಡೆ ಬ್ಯಾರಿಕೇಡ್ ಕೂಡ ಹಾಕಲಾಗಿದೆ. ಕೋವಿಡ್ ನಿಯಮ ಪಾಲನೆಗೆ ಒತ್ತು ನೀಡಲಾಗಿದೆ’ ಎಂದು ಮಠದ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ಎಸ್‌.ಐ. ಕೋಳಕೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ದಿನ ಮಠಕ್ಕೆ ಬರುವವರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿನ ಭೋಜನಾಲಯದಲ್ಲಿ ಎರಡು ದಿನದ ನಂತರ ಪ್ರಸಾದ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಒಮ್ಮೆಲೆ ಹೆಚ್ಚಿನ ಮಂದಿಗೆ ಪ್ರಸಾದ ನೀಡುವ ಬದಲು, ಸ್ವಲ್ಪ ಸ್ವಲ್ಪ ಮಂದಿಗೆ ನೀಡುವ ಮೂಲಕ ಕೋವಿಡ್ ನಿಯಮ ಪಾಲಿಸಲಾಗುವುದು’ ಎಂದು ಹೇಳಿದರು.

ಭಣಗುಡುತ್ತಿದ್ದ ಮಾಲ್: ಖರೀದಿ ತಾಣವಾದ ಶಾಪಿಂಗ್ ಮಾಲ್‌ಗಳಲ್ಲಿ ಮೊದಲ ದಿನ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು. ಬೆರಳೆಣಿಕೆಯ ಗ್ರಾಹಕರಷ್ಟೇ ಕಂಡುಬಂದರು. ಮಾಲ್‌ಗಳಲ್ಲಿದ್ದ ಕೆಲ ಮಳಿಗೆಗಳು ಬಂದ್ ಆಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್‌ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಕ್ಕೆ ಬಿಡಲಾಗುತ್ತಿತ್ತು.

‘ಮೊದಲ ದಿನವಾದ್ದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಕೆಲ ಮಳಿಗೆಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರಿಂದ ವ್ಯಾಪಾರ ಇರಲಿಲ್ಲ. ಎರಡು ದಿನದಲ್ಲಿ ಎಲ್ಲವೂ ಸರಿ ಹೋಗಲಿದೆ. ಸಿನಿಮಾ ಪ್ರದರ್ಶನ ಆರಂಭವಾದರೆ ಮಾಲ್‌ಗೆ ಬರುವವರ ಸಂಖ್ಯೆಯೂ ಹೆಚ್ಚಾಗಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಾಸಿಸ್ ಮಾಲ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ಅನ್‌ಲಾಕ್ ಇದ್ದರೂ ಹಲವೆಡೆ ಜನ ಕೋವಿಡ್ ನಿಯಮಗಳನ್ನು ಲೆಕ್ಕಿಸದೆ ಇರುವುದು ಕಂಡುಬಂತು. ಮಠ, ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಸೂಕ್ತ ಅಂತರ ಕಾಯ್ದುಕೊಳ್ಳುವಿಕೆ ಮಾಯವಾಗಿತ್ತು. ಕೆಲವರು ಮಾಸ್ಕ್‌ ಧರಿಸದೆ ಓಡಾಡುತ್ತಿದ್ದರು. ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನ ಮುನ್ನೆಚ್ಚರಿಕೆ ಇಲ್ಲದೆ ಓಡಾಡುತ್ತಿದ್ದರೂ ಕೇಳುವವರೇ ಇರಲಿಲ್ಲ.

ಹೆಚ್ಚಿದ ಸಂಚಾರ ದಟ್ಟಣೆ: ಲಾಕ್‌ಡೌನ್ ಸಡಿಲಗೊಂಡು ಬಹುತೇಕ ವ್ಯಾಪಾರ–ವಹಿವಾಟು ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿರುವುದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸೋಮವಾರ ಸಂಚಾರ ದಟ್ಟಣೆ ಕಂಡುಬಂತು.

ಚನ್ನಮ್ಮನ ವೃತ್ತ, ಕೋರ್ಟ್ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಹೊಸೂರು ವೃತ್ತ, ಹಳೇ ಪಿ.ಬಿ. ರಸ್ತೆ, ಕಾರವಾರ ರಸ್ತೆ, ಈಜುಕೊಳ ರಸ್ತೆ, ದೇಶಪಾಂಡೆ ನಗರ, ದೇಸಾಯಿ ವೃತ್ತ, ಬೆಂಗಳೂರು ರಸ್ತೆ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಕಂಡುಬಂತು. ರಸ್ತೆ, ಒಳ ಚರಂಡಿ, ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳು ನಡೆಯುತ್ತಿರುವ ಒಳ ರಸ್ತೆಗಳಲ್ಲಿಯೂ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗಿತು. ಸಂಚಾರ ಪೊಲೀಸರು ದಟ್ಟಣೆ ನಿಯಂತ್ರಿಸಲು ಪರದಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು