ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬಕ್ಕೆ ಕುಂಟು ನೆಪ; ನಾಗರಿಕರಿಗೆ ಸಂಕಟ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 24 ಜನವರಿ 2020, 19:30 IST
ಅಕ್ಷರ ಗಾತ್ರ

ಅವಳಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ, ಅವುಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡ ಉದಾಹರಣೆಗಳಿಲ್ಲ. ಹಾಗಾಗಿ, ಅವುಗಳ ಸಂಪೂರ್ಣ ಲಾಭ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಬದಲಾಗಿ ಸಂಕಟಗಳು ಹೆಚ್ಚಾಗುತ್ತಿವೆ.

ರಸ್ತೆ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಯದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದೂಳಿನ ಪ್ರಮಾಣ ಹೆಚ್ಚಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ಮೇಲೆ ಆರ್ಥಿಕ ಹೊರೆಯೂ ಬೀಳುತ್ತಿದೆ.

2014ರಲ್ಲಿ ಆರಂಭವಾದ ಬಿಆರ್‌ಟಿಎಸ್‌ ಕಾಮಗಾರಿ ಇನ್ನೂ ಮುಗಿದಿಲ್ಲ. ಪ್ರಾಯೋಗಿಕ ಸಂಚಾರ ಆರಂಭಿಸಿ ಒಂದು ವರ್ಷ ಕಳೆದಿದೆ. ಫೆ.2ಕ್ಕೆ ಉದ್ಘಾಟನೆಯೂ ಆಗುತ್ತಿದೆ. ನವಲೂರು ಬಳಿ ಮೇಲ್ಸೇತುವೆ, ಎಪಿಎಂಸಿ ಬಳಿ ಬಿಆರ್‌ಟಿಎಸ್ ಪ್ರತ್ಯೇಕ ಪಥ ನಿರ್ಮಾಣ, ಬೂಮ್‌ ಬ್ಯಾರಿಕೇಡ್‌ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ.

ಜನನಿಬಿಡ ಪ್ರದೇಶಗಳು, ಪ್ರಮುಖ ಸಂಪರ್ಕ ಕಲ್ಪಿಸುವ ಉಣಕಲ್‌ನಿಂದ ಇಂಡಿಪಂಪ್‌ವರೆಗಿನ ಹಾಗೂ ಉಣಕಲ್‌ನಿಂದ ಕಮರಿಪೇಟೆವರೆಗಿನ ಕಾಂಕ್ರೀಟ್‌ ರಸ್ತೆ ಕಾಮಗಾರಿಗಳು ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ.

ಕಮರಿಪೇಟೆಯಿಂದ ಉಣಕಲ್‌ವರೆಗಿನ 4.1 ಕಿ.ಮೀ ಉದ್ದದ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ₹ 30 ಕೋಟಿ ವೆಚ್ಚದಲ್ಲಿ, ಹಾಗೆಯೇ ಇಂಡಿಪಂಪ್‌ನಿಂದ ಉಣಕಲ್‌ವರೆಗಿನ 5.5 ಕಿ.ಮೀ. ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ₹ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಪೂರ್ವ ಸಿದ್ಧತೆಯ ಕೊರತೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ರಸ್ತೆ ಬದಿಯ ಮರಗಳನ್ನು ಕಡಿದಿಲ್ಲ. ರಸ್ತೆಗಳ ವಿಸ್ತರಣೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡಿಲ್ಲ. ಹಾಗಾಗಿ, ಕಾಮಗಾರಿ ಮುಂದೆ ಸಾಗುತ್ತಲೇ ಇಲ್ಲ.

ಕಾಮಗಾರಿ ಮಾಡಲು ಒತ್ತುವರಿ ತೆರವುಗೊಳಿಸಿಕೊಡುವಂತೆ ಒಂದು ಇಲಾಖೆಯವರನ್ನು ಕೇಳಿದರೆ, ಮತ್ತೊಂದು ಇಲಾಖೆಯ ಕಡೆಗೆ ಕೈ ತೋರಿಸುತ್ತಾರೆ. ಆ ಇಲಾಖೆಗೆ ಹೋದರೆ, ಇನ್ನೊಂದು ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಒತ್ತುವರಿ ತೆರವುಗೊಳಿಸಿಕೊಟ್ಟರೆ ಮಾತ್ರ ಕಾಮಗಾರಿ ಮಾಡುತ್ತೇವೆ. ಇಲ್ಲದಿದ್ದರೆ, ಇಲ್ಲ ಎನ್ನುವ ನಿಲುವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳದ್ದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಸಭೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಸಭೆಯಲ್ಲಿ ತೆರವು ಮಾಡಿಸುವುದಾಗಿ ಹೇಳಿದ ಅಧಿಕಾರಿಗಳು, ನಂತರ ಮರೆತು ಬಿಡುತ್ತಾರೆ. ಮುಂದಿನ ಸಭೆಯಲ್ಲಿ ಸಚಿವರು ಅದೇ ಸೂಚನೆ ನೀಡಿದರೆ, ಅಧಿಕಾರಿಗಳು ಅದೇ ರಾಗ ಹಾಡುತ್ತಾರೆ. ಸಚಿವರ ಸೂಚನೆ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದ್ದರಿಂದ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

ಲಿಂಗರಾಜ ನಗರದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸದ್ದರಿಂದ ಹಾಗೆಯೇ ಕಾಮಗಾರಿ ಮಾಡಲಾಗಿದೆ. ವಾಣಿ ವಿಲಾಸ ವೃತ್ತದ ಬಳಿಯ ಕೆಎಸ್‌ಆರ್‌ಟಿಸಿ ಕಾಂಪೌಂಡ್‌ ಕೆಡವಿಲ್ಲ. ಅಲ್ಲಿರುವ ಗಿಡಗಳನ್ನು ಕಡಿಯಲು ಟೆಂಡರ್‌ ಕರೆಯಲಾಗಿರುವುದರಿಂದ ಇನ್ನೂ ವಿಳಂಬವಾಗಲಿದೆ.

‘ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರಿಂದ ಮುಖ್ಯ ರಸ್ತೆ ಎತ್ತರವಾಗಿದೆ. ಆದರೆ, ಸಂಪರ್ಕ ರಸ್ತೆ ಆ ಎತ್ತರಕ್ಕೆ ಇಲ್ಲ. ಸಂಪರ್ಕ ರಸ್ತೆ ಜೋಡಣೆ ಸರಿಯಾಗಿ ಮಾಡದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಆಗಾಗ, ವಾಹನ ಸವಾರರು ಬೀಳುತ್ತಲೇ ಇದ್ದಾರೆ’ ಎನ್ನುತ್ತಾರೆ ಲಿಂಗರಾಜನಗರ ನಿವಾಸಿ ಶರಣಪ್ಪ ಮಠದ.

‘ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಆಗಿಲ್ಲ. ತಗ್ಗು–ದಿನ್ನೆಗಳು ಹಾಗೆಯೇ ಉಳಿದಿವೆ. ಕಾಮಗಾರಿಗಾಗಿ ತಿಂಗಳುಗಟ್ಟಲೇ ರಸ್ತೆ ಅಗೆದು ಹಾಗೆಯೇ ಬಿಡುವುದ
ರಿಂದ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಜತೆಗೆ ಆ ರಸ್ತೆಗಳಲ್ಲಿ ದೂಳಿನ ಪ್ರಮಾಣವೂ ಹೆಚ್ಚಾಗಿದೆ’ ಎನ್ನುತ್ತಾರೆ ಶಿರೂರ ಪಾರ್ಕ್‌ ನಿವಾಸಿ ಅಬ್ದುಲ್‌.

ವಾಣಿ ವಿಲಾಸ ರಸ್ತೆ ಬಳಿಯ ಮನೆಗಳ ಸ್ಥಳಾಂತರಕ್ಕೆ ಈಗಷ್ಟೇ ಯೋಜಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನಾ ವರದಿ ಸಿದ್ಧ ಪಡಿಸಲಾಗುತ್ತದೆ. ಅಲ್ಲಿಯವರೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದು ಕನಸಿನ ಮಾತು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದು ಹುಬ್ಬಳ್ಳಿಯ ಒಂದೆರಡು ಕಾಮಗಾರಿಗಳ ಮಾತಲ್ಲ. ಬಹುತೇಕ ಕಾಮಗಾರಿಗಳ ಕತೆ ಇದೆ ಆಗಿದೆ. ವಿಳಂಬಕ್ಕೆ ಕೊನೆ ಹಾಡುವ ಕೆಲಸ ಆಗಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹ.

ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಾಲ್ಕು ಪಥ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ಕೊಡದ್ದರಿಂದ ಕೆಲವು ಕಡೆ ಕಾಮಗಾರಿ ನಿಂತಿದೆ. ಜಾಗ ನೀಡಿದರೆ, ಕಾಮಗಾರಿ ಪೂರ್ಣಗೊಳಿಸುತ್ತೇವೆ</p>
-ಆರ್‌.ಕೆ. ಮಠದ, ಸಹಾಯಕ ಎಂಜಿನಿಯರ್‌

ಕಾಮಗಾರಿ ಆರಂಭವಾಗಿ ವರ್ಷವೇ ಕಳೆದಿದೆ. ಆದರೂ ಪೂರ್ಣಗೊಂಡಿಲ್ಲ. ತಿಂಗಳುಗಟ್ಟಲೇ ರಸ್ತೆ ಬಂದ್‌ ಮಾಡಲಾಗುತ್ತದೆ. ಇದರಿಂದ ವ್ಯಾಪಾರ ಕುಂಠಿತವಾಗಿದೆ
-ಸುರೇಶ ಎಚ್‌.ಕೆ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT