ಶನಿವಾರ, ಜೂನ್ 19, 2021
24 °C
ನಿತ್ಯ 4 ಸಾವಿರ ಮಂದಿಯ ಸಂಗ್ರಹ

ಕೋವಿಡ್‌-19: ಗುರಿ ಮೀರಿ ಗಂಟಲು ದ್ರವದ ಮಾದರಿ ಪರೀಕ್ಷೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆ ಉಲ್ಬಣಗೊಂಡ ಬೆನ್ನಲ್ಲೇ, ಜನರಲ್ಲಿ ಸೋಂಕಿನ ಆತಂಕವೂ ಹೆಚ್ಚಾಗಿದೆ. ಹಾಗಾಗಿ, ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಾದ್ಯಂತ ನಾಲ್ಕು ಸಾವಿರ ಮಂದಿಗೆ ನಿತ್ಯ ತಪಾಸಣೆ ಮಾಡಲಾಗುತ್ತಿದೆ. ಏಪ್ರಿಲ್‌ ತಿಂಗಳಲ್ಲೇ 1.20 ಲಕ್ಷ ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ.

ಕೆಮ್ಮು, ಜ್ವರ, ನೆಗಡಿ, ಗಂಟಲು ಮತ್ತು ತಲೆ ನೋವು, ಮೈ ನೋವು, ನಾಲಿಗೆ ರುಚಿ ಕಳೆದುಕೊಳ್ಳುವಂತಹ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳನ್ನು ಹೊಂದಿರುವವರ ಜತೆಗೆ, ಆಸ್ಪತ್ರೆಗಳಿಗೆ ದಾಖಲಾಗುವವರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ಬೇರೆ ಊರು ಮತ್ತು ರಾಜ್ಯಗಳಿಂದ ಬಂದವರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಗುರಿ ಮೀರಿ ಪರೀಕ್ಷೆ
‘ಸರ್ಕಾರದಿಂದ ಜಿಲ್ಲೆಯಾದ್ಯಂತ ನಿತ್ಯ 3,700 ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿ ನೀಡಲಾಗಿದೆ. ಕೋವಿಡ್ ಮೊದಲ ಅಲೆಯ ಅಬ್ಬರ ತಗ್ಗಿದಾಗ, ಪರೀಕ್ಷೆಯ ಸಂಖ್ಯೆ ಈ ಗುರಿ ಆಸುಪಾಸಿನಲ್ಲಿ ಇರುತ್ತಿತ್ತು. ಇದೀಗ ಎರಡನೇ ಅಲೆ ಉಲ್ಬಣಗೊಂಡು ಹೆಚ್ಚಿನ ಜೀವಹಾನಿ ಆಗುತ್ತಿರುವುದರಿಂದ, ಗುರಿ ಮೀರಿ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದಿನಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳು, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ 60 ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ (ಎಸ್‌ಡಿಎಂ) ಒಳಗೊಂಡಂತೆ ಅವಳಿನಗರದ 6 ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ’ ಎಂದರು.

ಖಾಸಗಿಯವರಿಗೂ ಅವಕಾಶ

‘ಜನರಿಂದ ಸಂಗ್ರಹಿಸುವ ಗಂಟಲು ಮತ್ತು ಮೂಗಿನ ದ್ರವವನ್ನು ಕಿಮ್ಸ್‌ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿರುವ (ಡಿಮ್ಹಾನ್ಸ್‌) ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸೋಂಕು ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲಾಗುವುದು. ಜತೆಗೆ ಸತ್ತೂರಿನಲ್ಲಿರುವ ಎಸ್‌ಡಿಎಂ ಆಸ್ಪತ್ರೆ ಸೇರಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾನ್ಯತೆ ಪಡೆದ ಅವಳಿ–ನಗರದ ಕೆಲ ಲ್ಯಾಬ್‌ಗಳಲ್ಲೂ ಪರೀಕ್ಷೆ ನಡೆಯುತ್ತಿದೆ. ಇವೆಲ್ಲದರ ಮಾಹಿತಿಯು ಜಿಲ್ಲಾಡಳಿತಕ್ಕೆ ಸಿಗುತ್ತದೆ’ ಎಂದು  ಹೇಳಿದರು.

ಪರೀಕ್ಷೆ ಹೆಚ್ಚಳದಿಂದ ವರದಿ ವಿಳಂಬ

‘ಕೋವಿಡ್ ಪರೀಕ್ಷೆಗಾಗಿ ಸ್ವ್ಯಾಬ್ ಸಂಗ್ರಹಿಸಿದ 24ರಿಂದ 48 ತಾಸುಗಳಲ್ಲಿ ವರದಿಯನ್ನು ನೀಡಬೇಕು. ಪರೀಕ್ಷೆಗೆ ಒಳಗಾದವರ ವಿವರ ಸೇರಿದಂತೆ ಹಲವು ವಿವರಗಳನ್ನು ಕ್ರೋಢೀಕರಿಸಿ ಮಾಹಿತಿ ವಿಭಾಗಕ್ಕೆ ಅಪ್‌ಡೇಟ್ ಮಾಡಬೇಕು. ಪಾಸಿಟಿವ್ ಫಲಿತಾಂಶದ ವರದಿಯನ್ನು 24 ತಾಸಿನೊಳಗೆ ನೀಡಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ, ನೆಗೆಟಿವ್ ಫಲಿತಾಂಶದ ವರದಿ ಜನರ ಕೈ ಸೇರಲು ವಿಳಂಬವಾಗುತ್ತಿದೆ’ ಎಂದು ಡಿಎಚ್‌ಒ ಡಾ.ಯಶವಂತ ಮದಿನಕರ ಹೇಳಿದರು. 

‘ವಿಳಂಬದ ಬಗ್ಗೆ ಹಲವರಿಂದ ದೂರುಗಳು ಬರುತ್ತಿವೆ. ಸೋಂಕು ದೃಢಪಟ್ಟವರನ್ನು ಮೊದಲಿಗೆ ಚಿಕಿತ್ಸೆಗೆ ಒಳಪಡಿಸುವುದು ನಮ್ಮ ಉದ್ದೇಶ. ಅಲ್ಲದೆ, ನೆಗೆಟಿವ್ ವರದಿಯನ್ನು ಸಹ ಕಾಲಮಿತಿಯೊಳಗೆ ನೀಡಲು ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ವಿಳಂಬಕ್ಕೆ ಪೂರ್ಣ ವಿರಾಮ ಬೀಳಲಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು