ಭಾನುವಾರ, ಫೆಬ್ರವರಿ 23, 2020
19 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ | ನಮ್‌ ಕೆರಿ ಕಥಿ–9

ಕೃಷಿಗೆ ಆಸರೆ, ಒತ್ತುವರಿಗೂ ಆಸಕ್ತಿ; ನವಲೂರು ಪೇರಲಗೆ ಕೆರೆಗಳ ನೀರೇ ಆಧಾರ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನವಲೂರಿಗೆ ಹೋಗಿದ್ದೆ ಅಥವಾ ನವಲೂರು ಕಡೆಯಿಂದ ಬಂದೆ ಎಂದ ಕೂಡಲೇ ಪೇರಲ ಹಣ್ಣು ತಿಂದ್ರಾ... ತಂದ್ರಾ... ಎಂದು ಕೇಳುವುದಿದೆ. ರುಚಿಗೆ ಅಷ್ಟೊಂದು ಪ್ರಸಿದ್ಧಿ ನವಲೂರ ಪೇರಲ. ಅಷ್ಟು ರುಚಿಗಟ್ಟಾದ ಪೇರಲಗೆ ಈ ಭಾಗದಲ್ಲಿರುವ ಜಲಮೂಲಗಳೇ ಕಾರಣ. ಮಳೆಗಾಲದ ಹೊರತಾಗಿಯೂ ನೀರ ಸಂಗ್ರಹದಿಂದ ಕೃಷಿಗೆ ಅದರಲ್ಲೂ ತೋಟಗಾರಿಕೆ ಬೆಳೆಗಳಿಗೆ ಈ ಕೆರೆ–ಕುಂಟೆಗಳೇ ಆಧಾರ. ಆದರೆ, ಅವುಗಳಿಗೆ ಆಸರೆ ಇಲ್ಲದೆ ಮುಂದಿನ ದಿನಗಳಲ್ಲಿ ಅವನತಿ ಹೊಂದುವ ಎಲ್ಲ ಲಕ್ಷಣಗಳೂ ಇವೆ.

ನವಲೂರಿನಲ್ಲಿ ತೋಟಗಾರಿಕೆಗೆ ಕೆರೆ ನೀರೇ ಆಸರೆಯಾಗಿದ್ದರೂ ಅವುಗಳನ್ನು ಒತ್ತುವರಿ ಮಾಡಿಕೊಳ್ಳು
ವಲ್ಲಿ ಯಾರೂ ಹಿಂದುಳಿದಿಲ್ಲ. ಶಾಲೆ, ಮನೆ, ದೇವಸ್ಥಾನ ಎಂದೆಲ್ಲ ಸಾಕಷ್ಟು ಒತ್ತುವರಿಯೂ ಆಗಿದೆ. ನವಲೂರಿನಲ್ಲಿರುವ 19 ಕೆರೆ–ಕುಂಟೆಗಳಲ್ಲಿ 15ಕ್ಕೂ ಹೆಚ್ಚು ಎಕರೆ ಒತ್ತುವರಿಯಾಗಿದೆ. ಕೆರೆಗಳಿಂದ ಸಾಕಷ್ಟು ಉಪಯೋಗ
ವಾಗುತ್ತಿದ್ದರೂ ಅವುಗಳನ್ನು ಒತ್ತುವರಿ ಮಾಡಿಕೊಳ್ಳುವ ಪ್ರಕ್ರಿಯೆಯೂ ಸಾಗುತ್ತಲೇ ಇದೆ. ಇದನ್ನು ಈಗಲೇ ನಿಲ್ಲಿಸುವ ಕ್ರಮವಾಗದಿದ್ದರೆ, ಕೆರೆಗಳ ಬೀಡು ಎಂಬ ಪಟ್ಟವನ್ನು ನವಲೂರು ಕಳೆದುಕೊಳ್ಳುವ ಸಾಧ್ಯತೆ ಇದೆ.

ನವಲೂರಿನ ಬಸಪ್ಪನ ಕೆರೆಗೆ ಬಳಿ ಇರುವ ಅರಣ್ಯದ ಗುಡ್ಡಕ್ಕೆ ಜನರನ್ನು ಹೋಗಲು ಬಿಡುವುದಿಲ್ಲ. ಅರಣ್ಯ ಇಲಾಖೆ ಸಾಕಷ್ಟು ಪ್ರಕರಣ ದಾಖಲಿಸಿದೆ ಎಂದು ದೂರುವ ಸ್ಥಳೀಯರು, ಊರ ಒಳಗಿರುವ ಕೆರೆಯೇ ಒತ್ತುವರಿಯಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವುದು ದುರಂತ. ಈ ಬಗ್ಗೆ ಅವರನ್ನು ಕೇಳಿದರೆ ಅದೊಂದು ಚೂರು ಆಗಿದೆ ಎಂದು ಸಬೂಬು ಹೇಳಿ, ಮಾತು ಬದಲಿಸುತ್ತಾರೆ. 

ನವಲೂರಿನ ಊರ ಹೊರಭಾಗದಲ್ಲಿ ಕುಂಟೆ–1 ಒಂದು ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ಒತ್ತುವರಿಗೆ ಒಳಗಾಗದಿದ್ದರೂ ನೀರು ಹರಿಯುವ ಮೂಲವನ್ನು ಕಳೆದುಕೊಂಡಿದೆ. ಸುತ್ತಲೂ ಗುಡ್ಡ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹವಿರುತ್ತದೆ. ಸತ್ತೂರು ಕಾಲೊನಿಯಲ್ಲಿರುವ ಕುಂಟೆ–2 ಅರ್ಧ ಮೀಟರ್‌ನಷ್ಟು ಆಳವನ್ನು ಹೊಂದಿದ್ದು, ಶೇ 50ರಷ್ಟು ಪ್ರದೇಶ ಕೃಷಿ ಪ್ರದೇಶವಾಗಿ ಒತ್ತುವರಿಯಾಗಿದೆ. ಮಾಲಿನ್ಯದ ಸಮಸ್ಯೆ ಇಲ್ಲಿಲ್ಲ. ನವಲೂರಿನಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷವನದ ಸಮೀಪವಿರುವ ಕುಂಟೆ–3, ಮೂರು ಮೀಟರ್‌ನಷ್ಟು ಆಳ ಹೊಂದಿದ್ದು, ಅರಣ್ಯ ಪ್ರದೇಶ, ಬೆಟ್ಟ, ಕೃಷಿ ಪ್ರದೇಶದಿಂದ ಸುತ್ತುವರಿದಿದೆ. ಒತ್ತುವರಿ ಕಾಣದಿದ್ದರೂ, ತ್ಯಾಜ್ಯವನ್ನು ಸುರಿಯುವ ತಾಣವಾಗಿದೆ. ಆಗಾಗ್ಗೆ ತ್ಯಾಜ್ಯ ಸುಟ್ಟು, ಪರಿಸರ ಮಾಲಿನ್ಯವಾಗುತ್ತಿದೆ. ಕುಂಟೆ–4 ಸತ್ತೂರು ಕಾಲೊನಿಯಲ್ಲಿದ್ದು, ಇಲ್ಲೊಂದು ಕೆರೆ ಇತ್ತು ಎನ್ನುವ ಯಾವ ಲಕ್ಷಣವೂ ಇಲ್ಲದಂತಾಗಿದೆ. ಬಯಲು ಪ್ರದೇಶ, ನರ್ಸರಿ, ಸಸ್ಯಗಳ ತಾಣವಾಗಿ ಪರಿವರ್ತನೆಯಾಗಿದೆ.

ಕುಂಟೆ–5 ರೈಲು ಹಳಿ ಹಾಗೂ ಬಡಾವಣೆಗಳಿಂದ ಸುತ್ತುವರಿದಿರುವ ಈ ಕೆರೆ, ಸತ್ತೂರು ಕಾಲೊನಿ ತಡಸಿನಕೊಪ್ಪ ಮುಖ್ಯರಸ್ತೆಯಲ್ಲಿದ್ದು, 2.5 ಮೀಟರ್‌ನಷ್ಟು ಆಳ ಹೊಂದಿದೆ. ಕಟ್ಟಡ ತ್ಯಾಜ್ಯವನ್ನು ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಒಂದು ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ಒತ್ತುವರಿಗೆ ಒಳಗಾಗದಿದ್ದರೂ ನೀರು ಹರಿಯುವ ಮೂಲವನ್ನು ಕಳೆದುಕೊಂಡಿದೆ.

ಕುಂಟೆ–6 ರಾಜೀವಗಾಂಧಿನಗರದಲ್ಲಿದ್ದು, ಸುತ್ತಲೂ ಬಯಲು ಪ್ರದೇಶವನ್ನು ಹೊಂದಿದೆ. ಎರಡು ಮೀಟರ್‌ನಷ್ಟು ಆಳ ಹೊಂದಿದ್ದು, ಒತ್ತುವರಿ ಅಥವಾ ತ್ಯಾಜ್ಯದ ಸಮಸ್ಯೆ ಇಲ್ಲಿಲ್ಲ. ಕುಂಟೆ–7 ಕೂಡ ರಾಜೀವಗಾಂಧಿನಗರದಲ್ಲೇ ಇದ್ದು, ಒಂದು ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ರೈಲು ಹಳಿ, ಬಯಲು ಪ್ರದೇಶದಿಂದ ಆವೃತವಾಗಿದೆ. ಶೇ 25ರಷ್ಟು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗಿಡಗಳನ್ನು ಬೆಳೆಯಲಾಗಿದೆ. ಹುಬ್ಬಳ್ಳಿ–ಧಾರವಾಡ ಹೆದ್ದಾರಿಯ ವಿಠಲ ದೇವಸ್ಥಾನದ ಬಳಿ ಇರುವ ಕುಂಟೆ–8, ಮನೆಗಳು, ಸರ್ಕಾರಿ ಶಾಲೆ, ಸಮುದಾಯ ಭವನ, ದೇವಸ್ಥಾನಗಳಿಗಾಗಿ ಈ ಕೆರೆಯನ್ನು ಸಂಪೂರ್ಣ ಒತ್ತುವರಿ ಮಾಡಲಾಗಿದ್ದು, ಕೆರೆ ಇದ್ದ ಸುಳಿವೂ ಇಲ್ಲದಂತಾಗಿದೆ.

ಕುಂಟೆ–9 ಹೆದ್ದಾರಿಗೆ ಸ್ವಲ್ಪ ದೂರದಲ್ಲಿದ್ದು, ಒಂದು ಮೀಟರ್‌ನಷ್ಟು ಆಳ ಹೊಂದಿದ್ದು, ಒತ್ತುವರಿ, ಮಾಲಿನ್ಯವನ್ನು ಕಂಡಿಲ್ಲ. ತ್ರಿಪುರಸುಂದರಿ ದೇವಿ ದೇವಸ್ಥಾನದ ಬಳಿ ಇರುವ ಕುಂಟೆ–10 ಒಂದು ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ಒತ್ತುವರಿ, ಮಾಲಿನ್ಯವನ್ನು ಕಂಡಿಲ್ಲ. 

ಹುಬ್ಬಳ್ಳಿ–ಧಾರವಾಡ ಹೆದ್ದಾರಿ ಹಾಗೂ ಬಿಆರ್‌ಟಿಎಸ್‌ ಕಾಮಗಾರಿಯಿಂದ ನವಲೂರು ಎರಡು ಭಾಗವಾಗಿದೆ. ಎರಡೂ ಭಾಗದಲ್ಲಿ ನವಲೂರು ತನ್ನ ಜಲಮೂಲಗಳನ್ನು ಹರಡಿಕೊಂಡಿದೆ. ಈ ಜಲಮೂಲಗಳನ್ನು  ಮತ್ತಷ್ಟು ಉಳಿಸಿಕೊಂಡಿದ್ದೇ ಆದಲ್ಲಿ ಇನ್ನಷ್ಟು ಸಮೃದ್ಧವಾಗುವುದರಲ್ಲಿ ಎರಡು ಮಾತಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು