ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನ ಅಭಿಷೇಕಕೆ ಮೆದುವಾಯಿತು ನೆಲವು...

Last Updated 4 ಜುಲೈ 2019, 19:30 IST
ಅಕ್ಷರ ಗಾತ್ರ

ಯಾತಕ್ಕೆ ಮಳೆ ಹೋದವೋ ಶಿವಶಿವ
ಲೋಕ ತಲ್ಲಣಿಸುತಾವೊ
ಬೇಕಿಲ್ಲದಿದ್ದಾರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೆ...

ವರುಣನ ನೆನೆದು ಜನಪದರು ಪದ ಕಟ್ಟಿ ಹಾಡಿದ ಈ ಸಾಲುಗಳು ಮಳೆಯ ಕೊರತೆ ಈಗಷ್ಟೇ ಅಲ್ಲ, ಹಿಂದಿನಿಂದಲೂ
ಇತ್ತು ಎಂಬುದನ್ನು ಹೇಳುತ್ತವೆ. ಮಳೆದೇವನ ಕೃಪೆಗಾಗಿ ಹೋಮ, ಹವನ, ವಿಶೇಷ ಪೂಜೆ, ಮದುವೆ ಸೇರಿದಂತೆ
ಗ್ರಾಮೀಣರು ನಂಬಿಕೆಯಿಟ್ಟು ಆಚರಿಸಿಕೊಂಡು ಬರುತ್ತಿರುವ ಅನೇಕ ಸಂಪ್ರದಾಯಗಳು ಇಂದಿಗೂ ಜನಜನಿತ. ಆದರೂ, ಮಳೆರಾಯ ನೀರುಣಿಸದಿದ್ದಾಗ ಬರವುಂಡ ಎದೆಗಳ ಆರ್ತನಾದವಾಗಿ ಮೇಲಿನ ಸಾಲುಗಳು ಹುಟ್ಟಿಕೊಂಡಿವೆ.

ಹೀಗೆ ಒಂದೊಂದು ಕಾಲಘಟ್ಟದಲ್ಲಿ ಮಳೆ ಪ್ರಾರ್ಥನೆ ಒಂದೊಂದು ರೀತಿಯಲ್ಲಿ ಸಾಗಿದೆ. ಮೌಖಿಕ ಸಾಹಿತ್ಯ ಘಟ್ಟದ್ದು ಒಂದು ಬಗೆಯಾದರೆ, ದಾಖಲು ಅಥವಾ ಬರವಣಿಗೆಯ ಸಾಹಿತ್ಯದ ಘಟ್ಟದ್ದು ಮತ್ತೊಂದು ತೆರನಾದುದು. ಈ ಕಾಲೋತ್ತರದ ಪ್ರಮುಖ ಕವಿ ದ.ರಾ. ಬೇಂದ್ರೆ ಧರೆಗೆ ನೀರುಣಿಸುವ ಗಂಗೆಯನು ತಮ್ಮ ‘ಗಂಗಾವತರಣ’ದಲ್ಲಿ ಕರೆಯುವುದು ಹೀಗೆ...

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ...

ಇದರ ಮುಂದುವರಿದ ಭಾಗವಾಗಿ, ಅನ್ನದಾತನ ಮನದಲ್ಲಿ ಮಳೆ ನಿರೀಕ್ಷೆಯ ಭಿತ್ತಿ ಆಗಸದಂಚಿನಲಿ ಜಾರಿಕೊಳ್ಳುವ ಕರಿಮೋಡಗಳಿಗೆ ಕವಿ ಜಿ.ಎಸ್. ಶಿವರುದ್ರಪ್ಪ ಮನವಿ ಮಾಡಿದ್ದು ಹೀಗೆ.

ಎಲ್ಲಿ ಹೋಗುವಿರಿ, ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ
ದಿನ ದಿನವೂ ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ
ನನ್ನೆದೆಯ ಹಸಿರ ಉಸಿರು ಕುಗ್ಗಿದರು ಬರಲಿಲ್ಲ ನಿಮಗೆ ಕರಣ
ನನ್ನ ಹೃದಯದಲಿ ನೋವು ಮಿಡಿಯುತಿದೆ ನಾನು ನಿಮಗೆ ಶರಣ...

ಜಗದೊಡಲ ಬರಿದು ಕಂಡು ಕರಗುವ ಮೋಡ
ಗಳ ಮಳೆ ಹನಿಗಳು ಕಡೆಗೂ ಇಳೆಗೆ ಮುತ್ತಿ
ಕ್ಕುತ್ತವೆ. ಅನ್ನದಾತನ ಮೊಗದಲಿ ಎಲ್ಲಿಲ್ಲದ ಮಂದಹಾಸ ಒಂದು ಕಡೆ
ಯಾದರೆ ಬತ್ತಿ ಬಾಯಾರಿದ ಕೆರೆ, ಕುಂಟೆ, ಹಳ್ಳ, ಬಾವಿ, ಕಡಲುಗಳಿಗೂ ಎಲ್ಲಿಲ್ಲದ ಕಳೆ. ಮೂಗಿಗೂ ಮನಸಿಗೆ ಹಿತವೆನಿಸುವ ಮೊದಲ ಮಳೆಯ ಮಣ್ಣಿನ ಘಮಲಿಗೆ ಮನ ಸೋಲದವರುಂಟೆ! ಮನುಷ್ಯ
ನಾದಿಯಾಗಿ ವರುಣನ ಸಿಂಚನಕ್ಕೆ ಮೈಯೊಡ್ಡಿ ಪುಳಕಿತವಾಗುವ ಅದೆಷ್ಟೊ ಜೀವರಾಶಿಗಳಲ್ಲಿ ಒಂದು ರೀತಿಯ ಧನ್ಯತಾ ಭಾವ. ಮಳೆ ನಂತರದ ಸೊಬಗನ್ನು ಅದೇ ಶಿವರುದ್ರಪ್ಪನವರು ಬಣ್ಣಿಸುವ ಬಗೆ ನಿಜಕ್ಕೂ ಆಪ್ತವಾಗುತ್ತದೆ.

ಮುಂಗಾರಿನ ಅಭಿಷೇಕಕೆ ಮೆದುವಾಯಿತು ನೆಲವು
ಧಗೆಯಾರಿದ ಹೃದಯದಲಿ ಪುಟಿದೆದ್ದಿತು ಚೆಲವು
ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂಥ ಹಸಿರು...

ಮಳೆಯಲ್ಲಿ ನೆನೆಯವುದೇ ಸಂಭ್ರಮ. ಇಳೆ ನೆನೆದರೆ ತಾನೇ ಅನ್ನ ಹುಟ್ಟುವುದು, ಸಕಲ ಜೀವರಾಶಿಗಳ ಬದುಕು ಸಾಗುವುದು. ಹೀಗೆ ಮಳೆಯೊಳಗೊಂದಾಗಿ ನೆನೆಯುವುದರಲ್ಲೂ ಸಿಗುವ ಮುದವನ್ನು ಕಳೆದುಕೊಳ್ಳಬೇಡಿ ಎನ್ನುತ್ತವೆ ಬೇಂದ್ರೆ ಅಜ್ಜನ ಈ ಕೆಳಗಿನ ಸಾಲಗಳು.

ಮಳೆ ಬರುವ ಕಾಲಕೆ ಒಳಗ್ಯಾಕೆ ಕುಂತೇವು
ಇಳೆಯೊಡನೆ ಜಳಕವಾಡೋಣು
ನಾವೂ ಮೋಡಗಳ ಆಟ ನೋಡೋಣು

ಇನ್ನು ಮಳೆಗೂ ಪ್ರೇಮಿಗಳಿಗೂ ಬಿಡಿಸಲಾಗದ ನಂಟಿದೆ. ಹಾಗಾಗಿಯೇ ಪ್ರೀತಿಯ ಸುತ್ತ ಗಿರಕಿ ಹೊಡೆಯುವ ಸಿನಿಮಾಗಳಲ್ಲಿ ಪ್ರೇಮಿಗಳು ನೆನೆಯದ ದೃಶ್ಯಗಳು ಇಲ್ಲದಿರುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಳೆ ಸ್ನಾನದಲಿ ರೊಮಾನ್ಸ್, ಬೈಕ್ ಸವಾರಿ ಸೇರಿದಂತೆ ಮಳೆಕೇಂದ್ರಿತ ಎಷ್ಟೋ ಹಾಡುಗಳು ಇಂದಿಗೂ ಅಚ್ಚಳಿಯದಂತೆ ಉಳಿದಿವೆ. ‘ಮುಂಗಾರು ಮಳೆ’, ‘ಮಳೆ, ‘ಮಳೆಯಲಿ ಜೊತೆಯಲಿ’, ‘ಮತ್ತೆ ಮುಂಗಾರು’, ‘ಮುಂಗಾರಿನ ಮುಂಚು’... ಹೀಗೆ ಮಳೆ ಜತೆ ಬೆರೆತಿರುವ ಪ್ರೇಮದ ಚಿತ್ರಗಳಿಗೆ ಲೆಕ್ಕವಿಲ್ಲ. ಅದಕ್ಕೆ ಮಳೆಗೆ ಸೋಲದ ಮನಸ್ಸಿಲ್ಲ ಎನ್ನುವುದು.

ದಿನವಿಡೀ ಸುರಿದ ಮಳೆಗೆ ಮನಸೋತರು...

ಜೂನ್ 30ರಂದು ಭಾನುವಾರ ದಿನವಿಡೀ ಧಾರಾಕಾರವಾಗಿ ಸುರಿದ ಮುಂಗಾರು ಮಳೆ, ಮನೆಯ ಹಿರಿಯರು ಹೇಳುತ್ತಿದ್ದ ಮಳೆಗಾಲದ ಅನುಭವವನ್ನು ನೀಡಿತು. ಮೂರ್ನಾಲ್ಕು ವರ್ಷಗಳಿಂದೀಚೆಗೆ ಒಂದೇ ದಿನ ಹೆಚ್ಚು ಮಳೆ ಸುರಿದ ದಿನವಿದು. ಮಳೆ ಅಬ್ಬರಕ್ಕೆ ಮೂಲೆ ಸೇರಿದ್ದ ಛತ್ರಿಗಳು ಹಾಗೂ ರೇನ್‌ಕೋಟ್‌ಗಳು ಹೊರಬಂದವು. ಚರಂಡಿಗಳು ತುಂಬಿ ಹರಿದರೆ, ಕೆರೆ–ಹಳ್ಳಗಳು ಮೈದುಂಬಿದವು. ಜತೆಗೆ, ಅಲ್ಲಲ್ಲಿ ಮರ ಹಾಗೂ ಗೋಡೆ ಕುಸಿದು ಅನಾಹುತವು ಸಂಭವಿಸಿತು. ಆದರೂ, ಒಟ್ಟಾರೆ ಮಳೆ ಖುಷಿ ತಂದಿತು.

ಮುಂಗಾರಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ ಇದುವರೆಗೆ (ಜೂನ್‌ 1ರಿಂದ ಜುಲೈ 2) 125.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಇದನ್ನು ಮೀರಿ 144.8 ಮಿ.ಮೀ ಮಳೆ ಸುರಿದಿದೆ. ವಾರ್ಷಿಕ ವಾಡಿಕೆ ಮಳೆ 85 ಸೆಂ.ಮೀ. ಆಗಿದ್ದು, ಇದುವರೆಗೆ ಅಕಾಲಿಕ ಮಳೆ ಸೇರಿದಂತೆ ಒಟ್ಟು 26.6 ಸೆಂ.ಮೀ. (ವಾಡಿಕೆ 24.9 ಸೆಂ. ಮೀ) ಮಳೆಯಾಗಿದೆ. ಮುಂದಿನ ಏಳು ದಿನಗಳವರೆಗೆ ಸಾಮಾನ್ಯ ಮಳೆಯಾಗಲಿದ್ದು, ಜುಲೈ 7 ಮತ್ತು 8ರಂದು ಬಿರುಸಿನ ಮಳೆ ಸುರಿಯಲಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

‘ಮುಂಗಾರಿನಲ್ಲಿ ದಿನವಿಡೀ ಮಳೆ ಸುರಿದ ನಿದರ್ಶನವಿದೆ. 2009, 2014, 2015ರಲ್ಲಿ ಈ ರೀತಿ ಮಳೆಯಾಗಿದೆ. ಜಿಲ್ಲೆಯ ತಾಲ್ಲೂಕುಗಳ ಪೈಕಿ, ಈ ಬಾರಿ ಹುಬ್ಬಳ್ಳಿಯಲ್ಲೇ ಹೆಚ್ಚು ಮಳೆ ಸುರಿದಿದೆ. ಅದರಲ್ಲೂ ಮಲೆನಾಡಿನ ಸೆರಗಿನಲ್ಲಿರುವ ಛಬ್ಬಿ ಭಾಗ ಹೆಚ್ಚು ಮಳೆ ಪಡೆದಿದೆ. ಬೆಳೆಗಳಾದ ಹೆಸರು, ಸೋಯಾ ಅವರೆ, ಉದ್ದು, ಶೇಂಗಾ ಹಾಗೂ ಗೋವಿನಜೋಳ ಬಿತ್ತನೆಗೆ ಇದು ಸರಿಯಾದ ಕಾಲವಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಹೇಳಿದರು.

ಚಿತ್ರಗಳು: ಈರಪ್ಪ ನಾಯ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT