ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಸಂಭಾಷಣೆಯೇ ಸಂಸ್ಕೃತದ ಆತ್ಮ: ಜಿ.ಆರ್.ಅಂಬಲಿ

‘ಸಂಸ್ಕೃತಾಮೃತಮ್’ ಉದ್ಘಾಟನೆಯಲ್ಲಿ ಜಿ.ಆರ್.ಅಂಬಲಿ ಅಭಿಮತ
Last Updated 26 ಮಾರ್ಚ್ 2023, 16:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಂಸ್ಕೃತವು ಭಾರತದ ಆತ್ಮ. ಸಂಸ್ಕೃತದಲ್ಲಿ ಸಂಭಾಷಣೆ ನಡೆಸುವುದೇ ಸಂಸ್ಕೃತದ ಆತ್ಮ’ ಎಂದು ಸಂಸ್ಕೃತ ಭಾರತಿ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಪ್ರೊ. ಜಿ.ಆರ್. ಅಂಬಲಿ ಹೇಳಿದರು.

ಮಜೇಥಿಯಾ ಫೌಂಡೇಷನ್ ಮತ್ತು ಸಂಸ್ಕೃತ ಭಾರತಿ ಸಹಯೋಗದಲ್ಲಿ ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಆಯೋಜಿಸಿರುವ ಸಂಸ್ಕೃತ ಸಂಭಾಷಣ ಶಿಬಿರ ‘ಸಂಸ್ಕೃತಾಮೃತಮ್’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಭಾಷಣೆಯಿಂದಲೇ ಭಾಷೆ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅದು ಮೃತ ಭಾಷೆ ಆಗುತ್ತದೆ. ನಾವೆಲ್ಲರೂ ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆಯಲ್ಲಿ ತೊಡಗೋಣ, ಅದಕ್ಕೆ ಮುಜುಗರಪಡುವ ಅಗತ್ಯವಿಲ್ಲ’ ಎಂದರು.

ವಿಜಯಪುರದ ಬಟ್ಟೆ ವ್ಯಾಪಾರಿ ರಾಮಸಿಂಗ್ ರಜಪೂತ್ ಮಾತನಾಡಿ ‘ಸ್ವಲ್ಪ ಅಧ್ಯಯನ ಇದ್ದರೆ ಸಂಸ್ಕೃತ ಸರಳ ಮತ್ತು ಸುಲಭ ಭಾಷೆ. ಬೇರೆ ಭಾಷೆಗಳು ಉದರ ಪೋಷಣೆಗೆ ಪೂರಕವಾದರೆ, ಸಂಸ್ಕೃತವು ಜ್ಞಾನ ಪೋಷಣೆಗೆ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘108 ಶಿಬಿರ ಆಯೋಜಿಸುವ ಮೂಲಕ ಆಗಸ್ಟ್ 31ರ ಹೊತ್ತಿಗೆ ಅವಳಿ ನಗರಗಳಲ್ಲಿ ಹತ್ತು ಸಾವಿರ ಜನರಿಗೆ ಸಂಸ್ಕೃತ ಸಂಭಾಷಣೆ ಕಲಿಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದು ಸಮಾಜ ಸೇವಕ ಎ.ಸಿ. ಗೋಪಾಲ ಮಾಹಿತಿ ನೀಡಿದರು.

‘ಸಂಸ್ಕೃತವನ್ನು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಲಿತಕ್ಕೆ ತರಬೇಕು ಎಂಬ ಚಿಂತನೆಯಿಂದ ಈ ಅಭಿಯಾನದ ಯೋಜನೆ ಮೊಳಕೆಯೊಡೆಯಿತು’ ಎಂದು ‘ಸಂಸ್ಕೃತಾಮೃತಮ್’ ಉಪಾಧ್ಯಕ್ಷ ಅಶೋಕ್ ವಿ. ಹರಪನಹಳ್ಳಿ ತಿಳಿಸಿದರು.

‘42 ವರ್ಷಗಳ ಹಿಂದೆ ಸಂಸ್ಕೃತವು ಒಂದು ಮೇಲ್ವರ್ಗದ ಭಾಷೆ, ಶಾಲೆಗಳಲ್ಲಿ ಅಂಕ ಗಳಿಸಲು ಇರುವ ಭಾಷೆ, ಕಠಿಣ ಭಾಷೆ ಎಂಬ ಭಾವನೆ ಇತ್ತು. ಅಂತಹ ಸಂದರ್ಭದಲ್ಲಿ ಹುಟ್ಟಿದ್ದು ಸಂಸ್ಕೃತ ಭಾರತಿ’ ಎಂದು ಸಂಸ್ಕೃತ ಭಾರತೀ ಕರ್ನಾಟಕ ಉತ್ತರ ಪ್ರಾಂತದ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಬಿ.ಎಸ್. ಹೇಳಿದರು.

ಅಭಿಯಾನದ ಕರಪತ್ರಗಳನ್ನು ವೇದಿಕೆಯಲ್ಲಿ ಗಣ್ಯರು ಅನಾವರಣಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT