ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸ್ವಚ್ಛತಾ ಕಾರ್ಮಿಕರ ವಜಾ: ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ರೈಲ್ವೆ ವರ್ಕ್‌ಶಾಪ್‌ ಎದುರು ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಆಕ್ರೋಶ
Last Updated 18 ನವೆಂಬರ್ 2022, 15:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರೈಲ್ವೆ ವರ್ಕ್‌ಶಾಪ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 12 ಸಫಾಯಿ ಕರ್ಮಚಾರಿ ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದನ್ನು ಖಂಡಿಸಿ, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ವತಿಯಿಂದ ನಗರದ ಗದಗ ರಸ್ತೆಯಲ್ಲಿರುವ ರೈಲ್ವೆ ವರ್ಕ್‌ಶಾಪ್‌ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ‘ಗುತ್ತಿಗೆದಾರ ಹಾಗೂ ರೈಲ್ವೆ ಇಲಾಖೆಯ ಕೆಲವು ಅಧಿಕಾರಿಗಳ ದರ್ಪದಿಂದ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಕನಿಷ್ಠ ವೇತನ, ಬ್ಯಾಂಕ್‌ ಪಾಸ್‌ಬುಕ್, ಎ.ಟಿ.ಎಂ ದಾಖಲೆಯನ್ನು ಕಾರ್ಮಿಕರು ಕೇಳಿದ್ದಕ್ಕೆ, ಯಾವುದೇ ನೋಟಿಸ್ ನೀಡದೆ 12 ಜನರನ್ನು ಕೆಲಸದಿಂದ ತೆಗೆದು ಹಾಕಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾಲ್ಕು ವರ್ಷಗಳ ಹಿಂದೆ 138 ದಲಿತ ಸಫಾಯಿ ಕರ್ಮಚಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಇ.ಎಸ್‌.ಐ, ಪಿ.ಎಫ್ ಸೇರಿದಂತೆ ಕಾರ್ಮಿಕ ಕಾಯ್ದೆಯಡಿ ಸಿಗುವ ವಿವಿಧ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ವಂಚಿಸಲಾಗಿದೆ. ಕಾರ್ಮಿಕರಿಗೆ ಸರ್ಕಾರದಿಂದ ₹13,553 ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಆದರೆ, ಗುತ್ತಿಗೆದಾರ ವಿನೀತ ತಿವಾರಿ ಎಂಬುವರು ಕಾರ್ಮಿಕರ ಬ್ಯಾಂಕ್ ಪಾಸ್‌ಬುಕ್, ಎ.ಟಿ.ಎಂ ಕಾರ್ಡ್‌ ತಮ್ಮ ಬಳಿಯೇ ಇಟ್ಟುಕೊಂಡು, ಕೇವಲ ₹9,000 ವೇತನವನ್ನು ಮಾತ್ರ ಕಾರ್ಮಿಕರಿಗೆ ಕೊಟ್ಟು ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೆಲಸದಿಂದ ವಜಾ ಮಾಡಿರುವ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು. ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT