ಶನಿವಾರ, ಏಪ್ರಿಲ್ 4, 2020
19 °C
ಹೋಳಿ ಹಬ್ಬದ ನಿಮಿತ್ತ ನಡೆದ ಸೌಹಾರ್ದ ಸಭೆಯಲ್ಲಿ ಡಿಸಿಪಿ ಪಿ.ಕೃಷ್ಣಕಾಂತ್ ಎಚ್ಚರಿಕೆ

ಹಬ್ಬದ ನೆಪದಲ್ಲಿ ತೊಂದರೆ ಮಾಡಿದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹಬ್ಬಗಳು ಸಮಾಜದಲ್ಲಿ ಸೌಹಾರ್ದ ಬಿತ್ತಬೇಕು. ಆದರೆ, ಹಬ್ಬದ ನೆಪದಲ್ಲಿ ಬೇರೆಯವರಿಗೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ ಪಿ. ಕೃಷ್ಣಕಾಂತ್ ಎಚ್ಚರಿಕೆ ನೀಡಿದರು.

ಹೋಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಶುಕ್ರವಾರ ವಿವಿಧ ಧರ್ಮಗಳ ಪ್ರಮುಖರೊಂದಿಗೆ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ‘ಹೋಳಿಯಲ್ಲಿ ನಮ್ಮೊಳಗಿರುವ ಕಲ್ಮಶ ಮತ್ತು ದುಷ್ಟಶಕ್ತಿಗಳನ್ನು ಸುಡಬೇಕು. ಹಬ್ಬಗಳ ಆಚರಣೆ ಮೂಲಕ, ಸಮಾಜದಲ್ಲಿ ಐಕ್ಯತೆ ಮೂಡಿಸಬೇಕು’ ಎಂದರು.

‘ಹಬ್ಬದಲ್ಲಿ ಡಿ.ಜೆ ಸೌಂಡ್ ಮತ್ತು ಧ್ವನಿವರ್ಧಕ ಬಳಸುವಂತಿಲ್ಲ. ಬಲವಂತವಾಗಿ ಯಾರೂ ಬಣ್ಣ ಹಚ್ಚಬಾರದು. ಸಂಭ್ರಮಾಚರಣೆ ಹೆಸರಿನಲ್ಲಿ ಯಾರಾದರೂ ತೊಂದರೆ ಮಾಡಿದರೆ, ತಕ್ಷಣ ಸ್ಥಳೀಯ ಪೊಲೀಸರಿಗೆ ಅಥವಾ ನನಗೇ ನೇರವಾಗಿ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಹೋಳಿ ಐಕ್ಯತೆಯ ಸಂಕೇತ. ಹಬ್ಬ ಆಚರಣೆಯಲ್ಲಿ ಜಾತಿ ಅಥವಾ ಧರ್ಮಕ್ಕಿಂತ ಸೌಹಾರ್ದವೇ ಮುಖ್ಯ. ಹಾಗಾಗಿ, ನಾವೆಲ್ಲರೂ ಒಂದೇ ಎಂದು ಅರಿತು ಹಬ್ಬ ಆಚರಿಸಬೇಕು’ ಎಂದು ಕಿವಿಮಾತು ಹೇಳಿದರು.

ಫಾದರ ಜೋಸೆಫ್ ಲೂಡಿಸ್, ‘ಕೆಲ ಸಂಕುಚಿತ ಮನೋಭಾವದವರಿಂದಾಗಿ ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಾದ ಸ್ಥಿತಿ ಬಂದಿದೆ. ಆ ಮನಸ್ಥಿತಿಯಿಂದ ಎಲ್ಲರೂ ಹೊರ ಬರಬೇಕು’ ಎಂದರು.

ಕಾಂಗ್ರೆಸ್ ಮುಖಂಡ ಎ.ಎಂ. ಹಿಂಡಸಗೇರಿ ಮಾತನಾಡಿ, ‘ಈದ್ ಮಿಲಾದ್‌ನಲ್ಲಿ ಮೆರವಣಿಗೆಯಲ್ಲಿ ಲಕ್ಷಾಂತರ ರೂ‍ಪಾಯಿ ವೆಚ್ಚ ಮಾಡಿ ಡಿ.ಜೆ ಸೌಂಡ್ ಬಳಸಲಾಗುತ್ತಿತ್ತು. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದ್ದರಿಂದ ಅಂಜುಮನ್ ಸಮಿತಿ ಹಾಗೂ ಮುತುವಲಿಗಳು ಡಿ.ಜೆ ಬಳಸದಂತೆ ನಿರ್ಣಯ ಮಾಡಿದ್ದೇವೆ. ಅದನ್ನು ಎಲ್ಲರೂ ಪಾಲಿಸಿದರು. ಇದು ಹೀಗೆಯೇ ಮುಂದುವರಿಯಬೇಕು. ಹಬ್ಬಗಳಿಂದ ಯಾರಿಗೂ ತೊಂದರೆಯಾಗಬಾರದು’ ಎಂದು ಅಭಿಪ್ರಾಯಪಟ್ಟರು.

ಎಸಿಪಿ ಎಂ.ವಿ. ಮಲ್ಲಾಪುರ ಮಾತನಾಡಿ, ‘ಕಳೆದ ವರ್ಷ ಗಣೇಶೋತ್ಸವದಲ್ಲಿ ನಡೆದಂತಹ ಅಹಿತಕರ ಘಟನೆಗಳು ಮರುಕಳಿಸಲು ಅವಕಾಶ ನೀಡಬಾರದು. ಹಾಗಾಗಿ, ಎಲ್ಲಾ ಧರ್ಮಗಳ ಮುಖಂಡರೂ ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು’ ಎಂದರು.

ಸಭೆಯಲ್ಲಿ ಬಿಜೆಪಿ ಮುಖಂಡರು ಬಹುತೇಕ ಗೈರು ಎದ್ದು ಕಂಡಿತು.

ಸಂಚಾರ ವಿಭಾಗದ ಎಸಿಪಿ ಎಸ್‌.ಎಂ. ಸಂದಿಗವಾಡ ಸ್ವಾಗತಿಸಿದರು. ಮಾರುತಿ ಗುಳ್ಳಾರಿ ಪ್ರಾರ್ಥಿಸಿದರು. ಡಿಸಿಪಿ ಶರದ್ ಯಾದವ, ಮುಖಂಡರಾದ ಐ.ಜಿ.ಸನದಿ, ಯೂಸುಫ್ ಸವಣೂರ, ಪಿತಾಂಬ್ರಪ್ಪ ಬೀಳಾರ, ಅಲ್ತಾಫ ಹಳ್ಳೂರ, ಡಿ.ಕೆ. ಚವ್ಹಾಣ, ಮೇಜರ್ ಗ್ಯಾನಸಿಂಗ್, ಸುಭಾಸ ಶಿಂಧೆ, ಭಾಸ್ಕರ ಜಿತೂರಿ, ಮಹೇಂದ್ರ ಲದ್ದಡ, ತಾಜುದ್ದೀನ ಪೀರಾ ಖಾದ್ರಿ ಮುಂತಾದವರು ಇದ್ದರು.

ಬಂದೋಬಸ್ತ್‌ಗೆ ಆರ್‌ಎಎಫ್‌

‘ಹಬ್ಬದ ಬಂದೋಬಸ್ತ್‌ಗೆ ಈ ಬಾರಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಒದಗಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಧಾರವಾಡದಲ್ಲಿ ಮಾರ್ಚ್ 9 ಮತ್ತು 10 ಹಾಗೂ ಹುಬ್ಬಳ್ಳಿಯಲ್ಲಿ 13ರಂದು ಹೋಳಿ ಮೆರವಣಿಗೆ ನಡೆಯಲಿದೆ. ಬಂದೋಬಸ್ತ್‌ಗೆ ಅವಳಿನಗರದ 484 ಸಿಬ್ಬಂದಿ, ಸಿಎಎಆರ್ ಸೇರಿದಂತೆ ಹೊರಗಿನಿಂದಲೂ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗುವುದು’ ಎಂದು ಡಿಸಿಪಿ ಪಿ. ಕೃಷ್ಣಕಾಂತ್ ಹೇಳಿದರು.

‘ಶಾಂತಿಗೆ ಭಂಗವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರನ್ನು ಬಂಧಿಸಲಾಗುವುದು. ಮೆರವಣಿಗೆಯಲ್ಲಿ ಅಹಿತಕರ ಘಟನೆಗಳ ಮೇಲೆ ನಿಗಾ ಇಡಲು ಕೆಲ ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)