ಭಾನುವಾರ, ಫೆಬ್ರವರಿ 23, 2020
19 °C
ವರದಕ್ಷಿಣಿ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ: ಅಪರಾಧಿಗಳಿಗೆ ತಲಾ ₹52 ಸಾವಿರ ದಂಡ

ಗಂಡ, ಅತ್ತೆ, ಇಬ್ಬರು ನಾದಿನಿಯರಿಗೆ 10 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳಕ್ಕೆ ನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಮೃತಳ ಗಂಡ, ಅತ್ತೆ ಹಾಗೂ ಇಬ್ಬರು ನಾದಿನಿಯರಿಗೆ ತಲಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹52 ಸಾವಿರ ದಂಡ ವಿಧಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ದ್ರಾಕ್ಷಾಯಿಣಿಯ ಗಂಡ ಕೃಷ್ಣಾ ಚಿನ್ನಪ್ಪಾ ದೇವಸೂರ, ಅತ್ತೆ ಶೆಟ್ಟಮ್ಮಾ (ಸಾವಿತ್ರಿ), ನಾದಿನಿಯರಾದ ಮಾಲತಿ ಚಿನ್ನಪ್ಪಾ ದೇವಸೂರ ಹಾಗೂ ವಿಜಯಲಕ್ಷ್ಮಿ ಚಿನ್ನಪ್ಪಾ ದೇವಸೂರ ಶಿಕ್ಷೆಗೆ ಒಳಗಾದವರು.

ಗೋಕುಲ ರಸ್ತೆಯ ರಾಮಲಿಂಗೇಶ್ವರನಗರ ಶಂಕ್ರಪ್ಪಾ ವಿರೂಪಾಕ್ಷಪ್ಪ ಗೆಜ್ಜಿ ಅವರ ಪುತ್ರಿ ದ್ರಾಕ್ಷಾಯಿಣಿ ಅವರ ವಿವಾಹ, ನವನಗರ ಬಳಿಯ ಶಿವಾನಂದನಗರದ ಕೃಷ್ಣಾ ಚಿನ್ನಪ್ಪಾ ದೇವಸೂರ ಅವರೊಂದಿಗೆ 2014ರಲ್ಲಿ ನಡೆದಿತ್ತು. ಗೆಜ್ಜಿ ಅವರು ವರದಕ್ಷಿಣೆಯಾಗಿ ಕೃಷ್ಣಾ ಅವರಿಗೆ ₹50 ಸಾವಿರ ನಗದು ಹಾಗೂ 2 ತೊಲೆ ಬಂಗಾರ ಕೊಟ್ಟಿದ್ದರು.

ಆದರೆ, ಅಷ್ಟಕ್ಕೆ ಸುಮ್ಮನಾಗದ ಕೃಷ್ಣಾ ಕುಟುಂಬದವರು, ತವರಿನಿಂದ ₹5 ಲಕ್ಷ ತರುವಂತೆ ದ್ರಾಕ್ಷಾಯಿಣಿ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ದ್ರಾಕ್ಷಾಯಿಣಿ, 2015ರ ಡಿಸೆಂಬರ್‌ನಲ್ಲಿ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ದ್ರಾಕ್ಷಾಯಿಣಿ ಕುಟುಂಬದವರು ನೀಡಿದ ದೂರಿನ ಮೇರೆಗೆ, ಎಪಿಎಂಸಿ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 304 (ಬಿ) (ವರದಕ್ಷಿಣೆ ಕಿರುಕುಳ ಸಾವು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಎಸಿಪಿ ಎಸ್‌.ಬಿ. ಛಬ್ಬಿ ಪ್ರಕರಣದ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್. ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿ ಆದೇಶ ಹೊರಡಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಜಿ. ಹೊಸಮನಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು