ಭಾನುವಾರ, ಜುಲೈ 3, 2022
25 °C
ಅರ್ಜಿ ಸಲ್ಲಿಕೆಗೆ ವಿಧಿಸಿರುವ ಷರತ್ತುಗಳ ಸಡಿಲಿಕೆಗೆ ಆಟೊ, ಟ್ಯಾಕ್ಸಿ ಚಾಲಕರ ಒತ್ತಾಯ

ಹುಬ್ಬಳ್ಳಿ | ಚಾಲಕರಿಗೆ ಪ್ಯಾಕೇಜ್‌, 1.75 ಲಕ್ಷ ಅರ್ಜಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದ ಆಟೊ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹3 ಸಾವಿರ ಪರಿಹಾರಕ್ಕೆ ಇದುವರೆಗೆ 1.75 ಲಕ್ಷ ಮಂದಿ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರಿಹಾರಕ್ಕೆ ಮೇ 27ರಿಂದ ಸೇವಾಸಿಂಧು ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆಗೆ ಆರಂಭವಾಗಿತ್ತು. 

ಸಾರಿಗೆ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ  ಮೂರೂ ಬಗೆಯ ಸುಮಾರು 18 ಲಕ್ಷ ಚಾಲಕರಿದ್ದಾರೆ. ಆದರೆ, ಪರಿಹಾರ ಘೋಷಿಸಿರುವುದು ಕೇವಲ 2.10 ಲಕ್ಷ ಮಂದಿಗೆ ಮಾತ್ರ. ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ₹5 ಸಾವಿರ ಪರಿಹಾರ ಘೋಷಿಸಿದ್ದ ಸರ್ಕಾರ, ಇದರಿಂದ 7.25 ಲಕ್ಷ ಮಂದಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಿತ್ತು. ಕಡೆಗೆ ನೆರವು ತಲುಪಿದ್ದು 2.14 ಲಕ್ಷ ಚಾಲಕರಿಗಷ್ಟೆ. ಈ ಬಾರಿ ಅದಕ್ಕಿಂತಲೂ ಕಡಿಮೆ ಮಂದಿಯನ್ನು ಪರಿಗಣಿಸಿ ನೆರವು ಘೋಷಿಸಿದೆ.

ಕಷ್ಟದಲ್ಲಿರುವ ಎಲ್ಲರಿಗೂ ಸ್ಪಂದಿಸಬೇಕಿದ್ದ ಸರ್ಕಾರ, ಮೊದಲು ಬಂದವರಿಗಷ್ಟೇ ಪರಿಹಾರ ಎಂಬ ನೀತಿ ಅನುಸರಿಸುತ್ತಿದೆ.‌ ಅಲ್ಲದೆ, ಅರ್ಜಿ ಸಲ್ಲಿಕೆಗೆ ಹಿಂದೆ ಇದ್ದ ಕಠಿಣ ಷರತ್ತುಗಳನ್ನೇ ಈ ಸಲವೂ ಮುಂದುವರಿಸಿರುವುದು ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ಷರತ್ತುಗಳೇನು?:

ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಚಾಲನಾ ಪರವಾನಗಿ, ಬ್ಯಾಡ್ಜ್‌ ಹಾಗೂ ವಾಹನದ ಸುಸ್ಥಿತಿ (ಫಿಟ್‌ನೆಸ್‌) ಪ್ರಮಾಣ ಪತ್ರ ಇರಬೇಕು. ಹಳದಿ ಬೋರ್ಡ್‌ನ ಸ್ವಂತ ಆಟೊ, ಟ್ಯಾಕ್ಸಿ ಅಥವಾ ಮ್ಯಾಕ್ಸಿ ಕ್ಯಾಬ್ ಹೊಂದಿ ರಬೇಕು.

‘ಸ್ವಂತ ಆಟೊ ಗಳನ್ನು ಹೊಂದಿ ರುವ ವರಷ್ಟೇ ಅಲ್ಲದೆ, ಬಾಡಿಗೆ ಓಡಿಸು ವವರೂ ಇದ್ದಾರೆ. ಲಾಕ್‌ಡೌನ್‌ನಿಂದ ಅವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದ್ದು, ಅಲ್ಪ ಪರಿಹಾರದಿಂದಲೂ ವಂಚಿತರಾಗಿದ್ದಾರೆ. ಸರ್ಕಾರ ಷರತ್ತುಗಳನ್ನು ಸಡಿಲಗೊಳಿಸಿ, ಅವರಿಗೂ ನೆರವು ಸಿಗುವಂತೆ ಮಾಡಬೇಕು’ ಎಂದು ಹುಬ್ಬಳ್ಳಿಯ ಆಟೊ ಚಾಲಕರ ಸಂಘದ ಅಧ್ಯಕ್ಷ ಪುಂಡಲೀಕ ಬಡಿಗೇರ ‘ಪ್ರಜಾವಾಣಿ’ಗೆ ಒತ್ತಾಯಿಸಿದರು.

‘ರಾಜ್ಯದಾದ್ಯಂತ 3 ಲಕ್ಷ ಟ್ಯಾಕ್ಸಿಗಳಿವೆ. ಆಟೊ ಮತ್ತು ಟ್ಯಾಕ್ಸಿ ಚಾಲಕರು ಸೇರಿ ಕೇವಲ 2.10 ಲಕ್ಷ ಮಂದಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ. ಬದಲಿಗೆ ₹10 ಸಾವಿರ ಘೋಷಿಸಿ, ಕಷ್ಟದಲ್ಲಿರುವ ಎಲ್ಲರಿಗೂ ಪಾರದರ್ಶಕವಾಗಿ ತಲುಪಿಸಬೇಕು’ ಎಂದು ಬೆಂಗಳೂರು ಟ್ಯಾಕ್ಸಿ ಚಾಲಕರ ಯೂನಿಯನ್ ಮತ್ತು ಕೆಎಸ್‌ಟಿಡಿಸಿ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರ ಯೂನಿಯನ್ ಅಧ್ಯಕ್ಷ ಡಾ. ಪ್ರಕಾಶ್ ಕೆ. ಆಗ್ರಹಿಸಿದರು.

‘1.36 ಲಕ್ಷ ಅರ್ಜಿಗಳು ಅರ್ಹ’
‘ಸ್ವೀಕೃತವಾಗಿರುವ 1.75 ಲಕ್ಷ ಅರ್ಜಿಗಳ ಪೈಕಿ 1 ಲಕ್ಷ ಆಟೊ, 65 ಟ್ಯಾಕ್ಸಿ ಹಾಗೂ 10 ಸಾವಿರ ಮ್ಯಾಕ್ಸಿ ಕ್ಯಾಬ್ ಚಾಲಕರ ಅರ್ಜಿಗಳು ಸೇರಿವೆ. ಷರತ್ತುಗಳ ಪ್ರಕಾರ, ಪೋರ್ಟಲ್‌ನಲ್ಲಿ ಇದುವರೆಗೆ 1.36 ಲಕ್ಷ ಅರ್ಜಿಗಳು ಪರಿಹಾರಕ್ಕೆ ಅರ್ಹವಾಗಿವೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೇಮಂತಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು