ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಬರ: ಆರ್ಥಿಕ ಸಂಕಷ್ಟ, ಜಾನುವಾರು ಮಾರಾಟ

ಉಚಿತ ಮೇವು ಪೂರೈಸಲು ರೈತರ ಆಗ್ರಹ
Published 30 ಮಾರ್ಚ್ 2024, 7:18 IST
Last Updated 30 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬರಗಾಲದಿಂದಾಗಿ ಆಕಳು, ದನ–ಕರು, ಎಮ್ಮೆ ಸಾಕಲು ನಮಗೆ ಕಷ್ಟವಾಗುತ್ತಿದೆ. ಹೀಗಾಗಿ ನಮ್ಮಲ್ಲಿನ ಕೆಲ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಲು ಬಂದಿದ್ದೇವೆ’ ಎ‌ಂದರು ಕುಸಗಲ್‌ ಗ್ರಾಮದ ರೈತ ಸೋಮಣ್ಣನವರ.

ಇಲ್ಲಿನ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಅವರು ಅಳಲು ತೋಡಿಕೊಂಡಿದ್ದು ಹೀಗೆ. ಅವರೊಂದಿಗೆ ಹಲವು ರೈತರು ಸಂಕಷ್ಟ ಹೇಳಿಕೊಂಡರು.

ಪ್ರತಿ ಶನಿವಾರ ಜಾನುವಾರುಗಳ ಸಂತೆಗೆ  ಅಮರಗೋಳ, ಕುಸಗಲ್ ಮತ್ತು ಕರ್ಲವಾಡ ಗ್ರಾಮಗಳಿಂದ ರೈತರು ವಾಹನಗಳಲ್ಲಿ ಆಕಳು, ದನ–ಕರು ಹಾಗೂ ಎಮ್ಮೆಗಳನ್ನು ತರುತ್ತಾರೆ. ನೋವು, ಬೇಸರದಿಂದ ಅವುಗಳನ್ನು ಮಾರುತ್ತಾರೆ.

‘ಮೇವು, ನೀರಿನ ಸಮಸ್ಯೆ ಆಗುವುದನ್ನು ತಪ್ಪಿಸಲು ಜಿಲ್ಲಾಡಳಿತವು ಗೋಶಾಲೆ, ಮೇವು ಬ್ಯಾಂಕ್‌ ತೆರೆದಿದೆ. ಆದರೂ ಆರ್ಥಿಕ ಸಂಕಷ್ಟ, ಮತ್ತಿತರ ಸಮಸ್ಯೆ ಕಾರಣ ರೈತರು ಸಂತೆಯಲ್ಲಿ ಮಾರಲು ಜಾನುವಾರುಗಳನ್ನು ತರುತ್ತಾರೆ.

ಮೇವು ಉಚಿತವಾಗಿ ನೀಡಲಿ:  ‘ಪ್ರತಿ ರೈತ ಕುಟುಂಬದ ಮನೆಯಲ್ಲಿ ಕನಿಷ್ಠ 3 ರಿಂದ 4 ಜಾನುವಾರು ಇವೆ. ಇವುಗಳಿಗೆ ದಿನಕ್ಕೆ ಕನಿಷ್ಠ 20ರಿಂದ 30 ಕೆಜಿ ಮೇವು ಬೇಕು. ಅಧಿಕಾರಿಗಳು ಪ್ರತಿ ಕೆಜಿ ₹2ರಂತೆ ಪ್ರತಿ ಟನ್‌ ₹2 ಸಾವಿರಕ್ಕೆ ಮೇವು ಮಾರುತ್ತಾರೆ. ಹಣ ಕೊಟ್ಟು ಮೇವು ಖರೀದಿಸುವ ಸ್ಥಿತಿಯಲ್ಲಿ ರೈತರಿಲ್ಲ. ಉಚಿತ ಮೇವು ಪೂರೈಸಲು ಸರ್ಕಾರ ಮುಂದಾಗಬೇಕು’ ಎಂದು ಕಲಘಟಗಿಯ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಬರಪೀಡಿತ ತಾಲ್ಲೂಕಿನಲ್ಲಿನ ಜಾನುವಾರುಗಳಿಗೆ ರೈತರು ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಕಲಘಟಗಿ ತಾಲ್ಲೂಕು ಕೇಂದ್ರದಲ್ಲಿ ಮೇವು ಬ್ಯಾಂಕ್‌ ಬೇಗ ಆರಂಭಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ’ ಎಂದರು.

‘8 ತಿಂಗಳ ಹಿಂದೆ ₹1.30ಲಕ್ಷಕ್ಕೆ ಜೋಡಿ ಎತ್ತುಗಳನ್ನು ಖರೀದಿಸಿದ್ದೆ. ಖರೀದಿದಾರರು ₹ 70 ಸಾವಿರಕ್ಕೆ ಕೇಳುತ್ತಾರೆ. ಮೇವಿನ ಕೊರತೆಯಿಂದ ಮಾರಬೇಕಾದ ಪರಿಸ್ಥಿತಿಯಿದೆ’ ಪಾಳ ಗ್ರಾಮದ ರೈತ ಸಿದ್ದಪ್ಪ ಎಲಿವಾಳ ತಿಳಿಸಿದರು.

ದಿವ್ಯಪ್ರಭು  
ದಿವ್ಯಪ್ರಭು  
ಹೇಮನಗೌಡ ಬಸನಗೌಡ್ರು
ಹೇಮನಗೌಡ ಬಸನಗೌಡ್ರು
ಪರಶುರಾಮ ಎತ್ತಿನಗುಡ್ಡ
ಪರಶುರಾಮ ಎತ್ತಿನಗುಡ್ಡ
ಹುಬ್ಬಳ್ಳಿಯ ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್‌ ತೆರೆದಿರುವುದು
ಹುಬ್ಬಳ್ಳಿಯ ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್‌ ತೆರೆದಿರುವುದು

ಮಾದನಭಾವಿ ಗ್ರಾಮದ ಬಳಿ ಗೋಶಾಲೆ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಅಗತ್ಯವಿರುವೆಡೆ ಮೇವು ಬ್ಯಾಂಕ್‌ ತೆರೆಯಲೂ ಸೂಚಿಸಲಾಗಿದೆ.

– ದಿವ್ಯಪ್ರಭು ಜಿಲ್ಲಾಧಿಕಾರಿ 

ಶಿರುಗುಪ್ಪಿ ಗ್ರಾಮದಲ್ಲಿ ಮೇವು ಬ್ಯಾಂಕ್‌ನಲ್ಲಿ ಜಾನುವಾರುಗಳಿಗೆ ಪೂರೈಸುವಷ್ಟು ಬಿಳಿ ಜೋಳದ ಮೇವಿನ ಸಂಗ್ರಹವಿದೆ. ಕೆಜಿಗೆ ₹2 ರಂತೆ ಸರ್ಕಾರ ಸೂಚಿಸಿದ ದರದಲ್ಲಿ ಮೇವು ಮಾರುತ್ತೇವೆ.

– ರಾಮಚಂದ್ರಪ್ಪ ಹೊಸಮನಿ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ.

ದನಕರುಗಳಿಗೆ ಮೇವು ಇಲ್ಲದೇ ರೈತರು ಮಾರಲು ದನದ ಸಂತೆಗೆ ಹೋದರೂ ಅವುಗಳನ್ನು ಖರೀದಿಸುವವರು ಇಲ್ಲ. ಅಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಉಚಿತವಾಗಿ ಮೇವು ಪೂರೈಸಬೇಕು.

– ಸುರೇಶ ಕಿರೆಸೂರ್ ಮಾಜಿ ಅಧ್ಯಕ್ಷ ಅಮರಗೋಳ ಎಪಿಎಂಸಿ ಹುಬ್ಬಳ್ಳಿ.

ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಪ್ರತಿ ತಾಲ್ಲೂಕಿನಲ್ಲಿ 3 ರಿಂದ 4 ಮೇವು ಬ್ಯಾಂಕ್‌ ಆರಂಭಿಸಿ ಜಾನುವಾರುಗಳಿಗೆ ಉಚಿತವಾಗಿ ಮೇವು ಪೂರೈಸಬೇಕು..

–ಹೇಮನಗೌಡ ಬಸನಗೌಡ್ರು ಉಪಾಧ್ಯಕ್ಷ ರತ್ನ ಭಾರತ ರೈತ ಸಮಾಜ ರಾಷ್ಟ್ರೀಯ ಘಟಕ

ದನ ಕರು ಆಕಳುಗಳನ್ನು ಸಾಕಲು ಕಷ್ಟವಾಗುತ್ತಿದೆ. ಮಾರಲು ಮುಂದಾದರೂ ಯಾರೂ ಖರೀದಿಸಲು ಬರುತ್ತಿಲ್ಲ. ಕಸಾಯಿಖಾನೆಯವರು ಕೇಳುತ್ತಾರೆ. ಕೊಡಲು ಮನಸಿಲ್ಲ.

–ಮಾಳಪ್ಪ ಹೊನ್ನೆಹಳ್ಳಿ ರೈತ ಬೀರವಳ್ಳಿ ಗ್ರಾಮ ಕಲಘಟಗಿ ತಾಲ್ಲೂಕು. 

ಮಾರ್ಚ್‌ 24ರಿಂದ ಕಲಘಟಗಿ ಕುಂದುಗೊಳ ಮತ್ತು ನವಲಗುಂದ ತಾಲ್ಲೂಕಿನ ಎಪಿಎಂಸಿ ಸೇರಿ ಹುಬ್ಬಳ್ಳಿಯ ಶೆರೆವಾಡದಲ್ಲಿ ಒಂದೊಂದು ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ.

–ಡಾ.ರವಿ ಸಾಲಿಗೌಡರ, ಉಪ ನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಧಾರವಾಡ

ಜಿಲ್ಲೆಯ ಜಾನುವಾರುಗಳ ವಿವರ ತಾಲ್ಲೂಕು;ಜಾನುವಾರು ಧಾರವಾಡ;72182 ಅಳ್ನಾವರ;4287 ಹುಬ್ಬಳ್ಳಿ;25015 ಹುಬ್ಬಳ್ಳಿ ನಗರ;18151 ಕಲಘಟಗಿ;50637 ಕುಂದಗೋಳ;28162 ನವಲಗುಂದ;23261 ಅಣ್ಣಿಗೇರಿ;11769 ಒಟ್ಟು;233464

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT