ಮಂಗಳವಾರ, ಫೆಬ್ರವರಿ 25, 2020
19 °C
ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳ ಜೊತೆ ಕಂದಾಯ ಸಚಿವ ಅಶೋಕ್‌ ಸಭೆ

ಮನೆ ನಿರ್ಮಾಣಕ್ಕೆ ಎಂಟು ತಿಂಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನೆರೆಯಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಎಂಟು ತಿಂಗಳ ಒಳಗೆ ಮನೆ ನಿರ್ಮಿಸಿಕೊಡಬೇಕು; ಈ ಕುರಿತು ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರ ಸೂಚಿಸಿದರು.

ನಗರದಲ್ಲಿ ಮಂಗಳವಾರ ನೆರೆ ಪರಿಹಾರ ಕುರಿತು ಜಿಲ್ಲೆಯ ಪ್ರಮುಖ ಅಧಿಕಾರಿಗಳ ಜೊತೆ ಅವರು ಪರಿಶೀಲನಾ ಸಭೆ ನಡೆಸಿದರು.

‘ಮನೆಗಳ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹1 ಲಕ್ಷ ಬಿಡುಗಡೆ ಮಾಡಲಾಗಿದ್ದು, ಒಟ್ಟು ಐದು ಹಂತಗಳಲ್ಲಿ ₹5 ಲಕ್ಷ ನೀಡಲಾಗುವುದು. ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಹಣದ ಸಮಸ್ಯೆಯಿಲ್ಲ. ಆದ್ದರಿಂದ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಎರಡನೇ ಕಂತಿನ ಹಣವನ್ನೂ ಫಲಾನುಭವಿಗಳಿಗೆ ಬೇಗನೆ ಬಿಡುಗಡೆ ಮಾಡಬೇಕು’ ಎಂದರು.

ಮುಂದಿನ ತಿಂಗಳು ಮತ್ತೆ ಸಭೆ ಮಾಡುತ್ತೇನೆ; ಆ ವೇಳೆಗೆ ಕೆಲಸ ಚುರುಕಾಗಿರಬೇಕು, ಇಲ್ಲವಾದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 128 ಮನೆಗಳು ಸಂಪೂರ್ಣವಾಗಿ ಬಿದ್ದಿದ್ದು, ಒಟ್ಟು 21,008 ಮನೆಗಳು ಹಾಳಾಗಿವೆ. ಇದಕ್ಕಾಗಿ ಈಗಾಗಲೇ ₹105 ಕೋಟಿ ಪರಿಹಾರ ಲಭಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾಹಿತಿ ನೀಡಿದರು.

₹214 ಕೋಟಿ ಅನುದಾನ: ನೆರೆಯಿಂದ ಹಾನಿಗೊಳಗಾದ ಜಿಲ್ಲೆಯ 1,04,290 ರೈತರಿಗೆ ಒಟ್ಟು ₹214 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ವರ್ಷದ ಬರಗಾಲದ ಸಮಯದಲ್ಲಿ ₹60.86 ಕೋಟಿ ಪರಿಹಾರ ಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಆಕೃತಿ ಬನ್ಸಾಲ್, ಜಿಲ್ಲಾ ಪಂಚಾಯ್ತಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಪಾಲನಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಬೀಬ್, ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು ಪಾಲ್ಗೊಂಡಿದ್ದರು.

ರಸ್ತೆ ದುರಸ್ತಿಗೆ ಮತ್ತಷ್ಟು ಅನುದಾನ
ನೆರೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗಾಗಿ ಎನ್‌.ಡಿ.ಆರ್.ಎಫ್‌ ಅಡಿ ಪ್ರತಿ ಕಿ.ಮೀ.ಗೆ ₹60 ಸಾವಿರ ನೀಡಲಾಗುತ್ತಿದೆ. ಈ ಹಣ ಗುಣಮಟ್ಟದ ಕಾಮಗಾರಿಗೆ ಸಾಕಾಗುವುದಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆಯಿಂದ ಹೊಂದಾಣಿಕೆ ಮಾಡಿ ಅನುದಾನ ಕೊಡಲಾಗುವುದು. ಈ ಜಂಟಿ ಅನುದಾನದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಅಶೋಕ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು