ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ ಬಿರುಸಿನ ಮತದಾನ, ಮಧ್ಯಾಹ್ನ ನೀರಸ...

ಯುವ ಮತದಾರರ ಸಂಭ್ರಮ, ಕೆಲವೆಡೆ ಮತಯಂತ್ರದಲ್ಲಿ ದೋಷ
Published 8 ಮೇ 2024, 5:25 IST
Last Updated 8 ಮೇ 2024, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಪ್ರಯುಕ್ತ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಬಿಸಿಲಿನ ಕಾರಣಕ್ಕೆ ಬೆಳಿಗ್ಗೆಯೇ ಮತಗಟ್ಟೆಗಳಿಗೆ ಬಂದ ಮತದಾರರು ತಮ್ಮ ಮತ ಹಕ್ಕು ಚಲಾಯಿಸಿದರು.

ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಎಲ್ಲ ಮತಗಟ್ಟೆಗಳಲ್ಲೂ ಸರತಿ ಸಾಲುಗಳು ಕಂಡು ಬಂದವು. ಬೆಳಗಿನ ಅವಧಿಯಲ್ಲಿ ಬಿರುಸಿನ ಮತದಾನ ನಡೆದರೆ ಮಧ್ಯಾಹ್ನ ನೀರಸವಾಗಿತ್ತು. ಸಂಜೆಯಾಗುತ್ತಿದ್ದಂತೆ ಮತ್ತೆ ಚುರುಕು ಪಡೆದುಕೊಂಡಿತು.

ನೃಪತುಂಗ ಬೆಟ್ಟದ ಜನತಾ ಶಾಲೆಯ ಮತಗಟ್ಟೆ (ಸಂಖ್ಯೆ 87) ಮತ್ತು ಬೆಂಗೇರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗಳಲ್ಲಿ  (ಸಂಖ್ಯೆ 117) ವಿವಿ ಪ್ಯಾಟ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಯಂತ್ರಗಳನ್ನು ಬದಲಾಯಿಸಲಾಯಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಉಳಿದಂತೆ ಎಲ್ಲಿಯೂ ತಾಂತ್ರಿಕ ದೋಷ ಮತ್ತು ಮತದಾನ ಪ್ರಕ್ರಿಯೆ ಸ್ಥಗಿತದಂತಹ ಘಟನೆಗಳು ನಡೆಯಲಿಲ್ಲ.

ಬೆಳಿಗ್ಗೆ 7 ಗಂಟೆಯಿಂದ 11.30ರವರೆಗೂ ಬಹುತೇಕ ಮತಗಟ್ಟೆಗಳಲ್ಲಿ ಸರತಿ ಸಾಲುಗಳು ಕಂಡು ಬಂದವು. ಮಧ್ಯಾಹ್ನದ ನಂತರ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. 

ಮಹಿಳಾ ಮತದಾರರನ್ನು ಸೆಳೆಯಲು ಸಿದ್ಧೇಶ್ವರ ಪಾರ್ಕ್‌ನ ಸೇಂಟ್ ಅಂಟೋನಿ ಶಾಲೆ ಮತ್ತು ಕೇಶ್ವಾಪುರದ ಸಹಸ್ರಾರ್ಜುನ ಶಾಲೆಯಲ್ಲಿ ತೆರೆಯಲಾಗಿದ್ದ ಸಖಿ ಮತಗಟ್ಟೆಗಳು ಗಮನ ಸೆಳೆದವು. ಇಲ್ಲಿ ಮತ ಚಲಾಯಿಸಲು ಬಂದ ಮತದಾರರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.

ಮಹಿಳಾ ಮತದಾರರನ್ನು ಸೆಳೆಯಲು ತೆರೆಯಲಾಗಿದ್ದ ಸಖಿ ಮತಗಟ್ಟೆಗಳನ್ನು ಗುಲಾಬಿ ಬಣ್ಣದ ಬಲೂನುಗಳಿಂದ ಸಿಂಗರಿಸಲಾಯಿತು. ಸಿದ್ಧೇಶ್ವರ ಪಾರ್ಕ್‌ನ ಸೇಂಟ್ ಅಂಟೋನಿ ಪಬ್ಲಿಕ್ ಶಾಲೆ, ವಿವೇಕಾನಂದ ಕಾಲೊನಿಯ ಚಿನ್ಮಯ ವಿದ್ಯಾಲಯ, ಕುಸುಗಲ್ ರಸ್ತೆಯ ಎಸ್‌ಬಿಐ ಆಫೀಸರ್ಸ್ ಅಸೋಸಿಯೇಷನ್‌ ಎಜುಕೇಷನ್ ಸೊಸೈಟಿಯ ಇಂಗ್ಲಿಷ್ ಮಾಧ್ಯಮ ಶಾಲೆ ಐದು ಸಖಿ ಮತಗಟ್ಟೆಗಳಲ್ಲಿ ಹೆಚ್ಚಿನ ದಟ್ಟಣೆ ಕಂಡು ಬಂತು.

ಎಲ್ಲ ಮತಗಟ್ಟೆಗಳ ಎದುರು ರಂಗೋಲಿ ಬಿಡಿಸಿ ಮತದಾರರನ್ನು ಸ್ವಾಗತಿಸಲಾಯಿತು. ಬಿಸಿಲ ಕಾರಣ ಮತದಾರರಿಗೆ ತೊಂದರೆಯಾಗದಂತೆ ಶಾಮಿಯಾನ ಹಾಕಲಾಗಿತ್ತು.

ಕೇಶ್ವಾಪುರದ ಸೇಂಟ್ ಮೇರಿ ಪ್ರೌಢಶಾಲೆಯಲ್ಲಿ ತೆರೆಯಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆ (ಸಂಖ್ಯೆ 158) ನಾಡಿನ ಕಲೆ, ಸಂಸ್ಕೃತಿಕ ಬಿಂಬಿಸುವ ಚಿತ್ರಗಳಿಂದ ಕಂಗೊಳಿಸಿತು.

ಸೆಲ್ಫಿ ಸಂಭ್ರಮ: ವಿವಿಧ ಮತಗಟ್ಟೆಗಳ ಆವರಣದಲ್ಲಿ ‘ನಾನು ಹೆಮ್ಮಯ ಮತದಾರ’, ‘ನನ್ನ ಮತ ನನ್ನ ಹಕ್ಕು’ ಎಂಬ ಘೋಷಣೆಗಳಿಂದ ಸೆಲ್ಫಿ ಸ್ಟ್ಯಾಂಡ್‌ಗಳನ್ನು ಇಡಲಾಗಿತ್ತು. ಮತದಾನ ಮಾಡಿದ ಮಹಿಳೆ, ಪುರುಷರು, ಯುವ ಮತದಾರರು ಅಲ್ಲಿ ಸೆಲ್ಫಿ ತೆಗೆದುಕೊಂಡು, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಬಹುತೇಕ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಮತಗಟ್ಟೆ ಎದುರು ಜಮಾಯಿಸಿದ್ದು ಕಂಡು ಬಂತು. ಕೆಲವೆಡೆ ಮತದಾನ ಮಾಡಿ ಹೊರಬಂದ ಮತದಾರರಿಗೆ ನೀರು, ಮಜ್ಜಿಗೆ ವಿತರಿಸಲಾಯಿತು.

ಯಾರು, ಎಲ್ಲಿ ಮತದಾನ?: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ಹುಬ್ಬಳ್ಳಿಯ ಬಸವೇಶ್ವರ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ನಂತರ ಮಾತನಾಡಿದ ಅವರು, 'ದೇಶದ ಸುಭದ್ರತೆ ಹಾಗೂ ಅತ್ಯುತ್ತಮ ಆಡಳಿತಕ್ಕಾಗಿ ಮತದಾನ ಮಾಡಿದ್ದೇನೆ' ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಪುತ್ರ ವಸಂತ ಹೊರಟ್ಟಿ ಮತ್ತು ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಮಲಿಂಗೇಶ್ವರನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಹುಬ್ಬಳ್ಳಿಯ ಕೇಶ್ವಾಪುರದ ಫಾತಿಮಾ ಪದವಿ ಕಾಲೇಜಿನ ಮತಗಟ್ಟೆ ಆವರಣದಲ್ಲಿ ಮತದಾನದ ನಂತರ ಸೆಲ್ಫಿ ತೆಗೆದುಕೊಂಡ ಯುವಕರ ತಂಡ
ಹುಬ್ಬಳ್ಳಿಯ ಕೇಶ್ವಾಪುರದ ಫಾತಿಮಾ ಪದವಿ ಕಾಲೇಜಿನ ಮತಗಟ್ಟೆ ಆವರಣದಲ್ಲಿ ಮತದಾನದ ನಂತರ ಸೆಲ್ಫಿ ತೆಗೆದುಕೊಂಡ ಯುವಕರ ತಂಡ
ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್‌ ಮೇರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನದ ಬಳಿಕ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೊ ತೆಗೆಸಿಕೊಂಡ ಸ್ನೇಹಲತಾ ಗೌಡರ
ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್‌ ಮೇರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನದ ಬಳಿಕ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೊ ತೆಗೆಸಿಕೊಂಡ ಸ್ನೇಹಲತಾ ಗೌಡರ
ರುಚಿತಾ ಬಸವರಾಜ ಆಲೂರ
ರುಚಿತಾ ಬಸವರಾಜ ಆಲೂರ
ಅಕ್ಷಯ್‌ ಕ್ರಾಂತಿಕಿರಣ್
ಅಕ್ಷಯ್‌ ಕ್ರಾಂತಿಕಿರಣ್

‘ಮೋದಿ ನೇತೃತ್ವದ ಸರ್ಕಾರ ನಿಶ್ಚಿತ’ ಹುಬ್ಬಳ್ಳಿ: ‘ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ. ಜನರ ಉತ್ಸಾಹ ನೋಡಿದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಬರುವುದು ನಿಶ್ಚಿತ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ‘ಐದು ವರ್ಷ ದೇಶದ ಭವಿಷ್ಯವನ್ನು ಯಾರ ಕೈಗೆ ನೀಡಬೇಕು ಎಂದು ನಿರ್ಧರಿಸುವ ಚುನಾವಣೆ ಇದು. ರಾಜ್ಯದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಎಲ್ಲ 14 ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರತಿ ಬಾರಿಯೂ ಹೆಚ್ಚಿನ ಅಂತರದಿಂದ ಗೆದ್ದಿದ್ದೇನೆ. ಈ ಬಾರಿಯೂ ಅಭೂತಪೂರ್ವ ಅಂತರದಿಂದ ಗೆಲುವು ಸಾಧಿಸುತ್ತೇನೆ’ ಎಂದರು. ‘ಪ್ರತಿ ಚುನಾವಣೆಯಲ್ಲಿಯೂ ನನ್ನ ತೇಜೋವಧೆ ಮಾಡಲಾಗುತ್ತದೆ. ನನ್ನ ಸಾರ್ವಜನಿಕ ಬದುಕು ಶುದ್ಧವಾಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಎಲ್ಲವನ್ನೂ ಎದುರಿಸುದ್ದೇನೆ. ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಮಾಡುತ್ತಾರೆ. ಕಾಂಗ್ರೆಸ್ ಸ್ಥಿತಿ ನೋಡಿ ಜನ ಮರುಕ‌ ಪಡುತ್ತಿದ್ದಾರೆ’ ಎಂದು ಹೇಳಿದರು‌. ಬಸವರಾಜ ಹೊರಟ್ಟಿ ಬೇಸರ ಹುಬ್ಬಳ್ಳಿ: ಈ ಚುನಾವಣೆಯಲ್ಲಿ ಬಹಳಷ್ಟು ಜನ ಮತದಾನ ಮಾಡಿಲ್ಲ. ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ಈ ಚುನಾವಣೆ ಕೇವಲ ಟೀಕೆ ಟಿಪ್ಪಣಿಗಳಿಗೆ ಸೀಮಿತವಾಗಿದೆ. ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಮೆರಿಕದಿಂದ ಬಂದು ಮತದಾನ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಬ್ಬಳ್ಳಿಯ ವಿಜಯನಗರದ ರುಚಿತಾ ಬಸವರಾಜ ಆಲೂರ ಅವರು ಇಲ್ಲಿನ ಲಯನ್‌ ಶಾಲೆಯ ಮತಗಟ್ಟೆಯಲ್ಲಿ (75) ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು. ‘ನನ್ನ ತಂದೆ ಮತದಾನದ ಮಹತ್ವವನ್ನು ತಿಳಿಸಿ ಮತದಾನ ಮಾಡಲು ಬರುವಂತೆ ಹೇಳಿದರು. ಜವಾಬ್ದಾರಿಯುತ ಪ್ರಜೆಯಾಗಿ ಮತದಾನ ಮಾಡಿದ್ದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ರುಚಿತಾ ಹೇಳಿದರು. ಅಮೆರಿಕದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಹುಬ್ಬಳ್ಳಿಯ ನರರೋಗ ತಜ್ಞ ಬಿಜೆಪಿ ಮುಖಂಡ ಡಾ.ಕ್ರಾಂತಿಕಿರಣ ಅವರ ಪುತ್ರ ಅಕ್ಷಯ್ ಕ್ರಾಂತಿಕಿರಣ ಅವರು ತಮ್ಮ ಮೊದಲ ಮತದಾನ ಮಾಡಿದರು. ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿನ ಬೂತ್ ನಂ.102ರಲ್ಲಿ ಅವರು ಮತ ಚಲಾಯಿಸಿದರು.

₹5ಗೆ ಇಡ್ಲಿ ಉಚಿತ ಐಸ್‌ಕ್ರೀಂ ಮತದಾನ ಮಾಡಿದ ಶಾಯಿ ತೋರಿಸಿದವರಿಗೆ ನಗರದ ದುರ್ಗದಬೈಲ್‌ನಲ್ಲಿ ಭಾಸ್ಕರ ಡೋಂಗರೆ ಅವರು ₹5ಗೆ ಒಂದು ಇಡ್ಲಿ ಮಾರಾಟ ಮಾಡಿದರು. ‘ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಕಡಿಮೆ ದರದಲ್ಲಿ ಇಡ್ಲಿ ನೀಡಲಾಯಿತು. ಬೆಳಿಗ್ಗೆ 7 ಗಂಟೆಯಿಂದ 10.30ರವರೆಗೆ 600 ಇಡ್ಲಿಗಳು ಮಾರಾಟವಾದವು’ ಎಂದು ಭಾಸ್ಕರ ಡೋಂಗರೆ ಹೇಳಿದರು. ನಗರದ ಅಕ್ಷಯ ಕಾಲೊನಿ ಹಾಗೂ ಕೇಶ್ವಾಪುರದಲ್ಲಿನ ಡೆರಿಶ್‌ ಐಸ್‌ಕ್ರೀಂ ಮಳಿಗೆಯಲ್ಲಿ ಉಚಿತ ಐಸ್‌ಕ್ರೀಂ ವಿತರಿಸಲಾಯಿತು. 'ಮತದಾನ ಮಾಡಿದ ಬೆರಳಿನ ಶಾಯಿ ಗುರುತು ತೋರಿಸಿದವರಿಗೆ ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ ₹7ಲಕ್ಷ ಮೌಲ್ಯದ ಐಸ್‌ಕ್ರೀಂ ಮಾರಾಟ ಮಾಡಲಾಯಿತು’ ಎಂದು ಮಳಿಗೆಯ ಮಾಲೀಕರಾದ ದಾನಕಶಿರೂರ ಹಾಗೂ ಸರಾಫ ತಿಳಿಸಿದರು. ಊಟದಲ್ಲಿ ಶೇ 20ರಷ್ಟು ರಿಯಾಯಿತಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ನಗರದ ಹನ್ಸ್‌ ಹೋಟೆಲ್‌ನಲ್ಲಿ ‘ಡೆಮಾಕ್ರಸಿ ಡಿಸ್ಕೌಂಟ್’ ಅಭಿಯಾನದ ಅಂಗವಾಗಿ ಊಟದ ದರದಲ್ಲಿ ಶೇ 20ರಷ್ಟು ರಿಯಾಯಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT