ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕೆರೆ ಜಾಗ ಒತ್ತುವರಿ ನಿರಂತರ

Published 12 ಮೇ 2024, 4:16 IST
Last Updated 12 ಮೇ 2024, 4:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತೀವ್ರ ಬರಗಾಲ ಆವರಿಸಿದಾಗೆಲ್ಲ ಕೆರೆಗಳು ಬತ್ತಿ, ಕೆರೆಯಂಗಳ ಒಣಗುತ್ತವೆ. ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಇವೆಲ್ಲದರ ಮಧ್ಯೆ ಕೆರೆಯಂಗಳದ ಒತ್ತುವರಿಯೂ ಅವ್ಯಾಹತವಾಗಿ ನಡೆಯುತ್ತದೆ.

ರಾಜ್ಯದ ಒಟ್ಟು 3,777 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅವುಗಳ ಪೈಕಿ 2,581 ಕೆರೆಗಳ ಸಮೀಕ್ಷೆ ನಡೆಸಿದಾಗ, 1,094 ಕೆರೆಗಳು ಒತ್ತುವರಿಯಾಗಿದ್ದು ಪತ್ತೆಯಾಗಿದೆ. ಈವರೆಗೆ 982 ಕೆರೆಗಳ ಒತ್ತುವರಿ ತೆರವು ಪ್ರಕ್ರಿಯೆ ನೆರವೇರಿದ್ದು, ಇನ್ನಷ್ಟು ಕೆರೆಗಳ ಸಮೀಕ್ಷೆ ನಡೆಯಬೇಕಿದೆ.

ಇಲಾಖೆಯ ದಕ್ಷಿಣ ವಲಯದ 17 ಜಿಲ್ಲೆಗಳ 2,082 ಕೆರೆಗಳ ಪೈಕಿ 1,386 ಕೆರೆಗಳ ಸಮೀಕ್ಷೆ ನಡೆದಿತ್ತು. 1,045 ಕೆರೆಗಳ 9,406.88 ಹೆಕ್ಟೇರ್‌ ಪ್ರದೇಶ ಒತ್ತುವರಿ ಆಗಿತ್ತು. 940 ಕೆರೆಗಳ 8,871.28 ಹೆಕ್ಟೇರ್‌ ಪ್ರದೇಶದ ಒತ್ತುವರಿ ತೆರವಾಗಿದೆ.

ಉತ್ತರ ವಲಯದ 14 ಜಿಲ್ಲೆಗಳ 1,695 ಕೆರೆಗಳ ಪೈಕಿ 1,195 ಕೆರೆಗಳ ಸಮೀಕ್ಷೆ ನಡೆದಿತ್ತು. 49 ಕೆರೆಗಳ 259.94 ಹೆಕ್ಟೇರ್‌ ಪ್ರದೇಶ ಒತ್ತುವರಿಯಾಗಿತ್ತು. 42 ಕೆರೆಗಳ 210.87 ಹೆಕ್ಟೇರ್‌ ಪ್ರದೇಶದ ಒತ್ತುವರಿ ತೆರವಾಗಿದೆ.

‘ಇಲಾಖೆಯು ಪ್ರತಿ ವರ್ಷ ಸಮೀಕ್ಷೆ ನಡೆಸಿ, ಒತ್ತುವರಿ ತೆರವು ಮಾಡುತ್ತದೆ. ಆದರೆ, ಒತ್ತುವರಿಗೆ ಪೂರ್ಣಪ್ರಮಾಣದ ಕಡಿವಾಣ ಬಿದ್ದಿಲ್ಲ. ಒತ್ತುವರಿ ಕೊನೆಗಾಣಿಸಲು ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಲವೆಡೆ ಬೆಳೆ ಬೆಳೆಯಲಷ್ಟೇ ರೈತರು ಒತ್ತುವರಿ ಮಾಡಿದ್ದಾರೆ ಎಂಬುದು ಅಧಿಕಾರಿಗಳ ಹೇಳಿಕೆ. ಒತ್ತುವರಿ ಪ್ರಕ್ರಿಯೆ ಹೀಗೇ ಮುಂದುವರಿದರೆ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ, ಬರಗಾಲದಲ್ಲಿ ಜಲಚರಗಳು, ಪ್ರಾಣಿ–ಪಕ್ಷಿಗಳೊಂದಿಗೆ ಜನರೂ ಸಮಸ್ಯೆ ಅನುಭವಿಸುವಂತಾಗುತ್ತದೆ’ ಎಂಬುದು ಪರಿಸರ ವಾದಿಗಳ ಆತಂಕ. 

‘ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಸೇರಿ ಬೇರೆ ಉದ್ದೇಶಕ್ಕೆ ಕೆರೆ ಒತ್ತುವರಿ ಮಾಡಿಕೊಂಡರೆ, ಗ್ರಾಮಗಳಲ್ಲಿ ರೈತರೇ ಬೇರೆ ಬೇರೆ ಕಾರಣಗಳಿಗೆ ಒತ್ತುವರಿ ಮಾಡಿಕೊಳ್ಳುತ್ತಾರೆ. ಕೆರೆಯಲ್ಲಿ ನೀರಿದ್ದರೆ, ಒತ್ತುವರಿಯಾಗಲ್ಲ. ಕೆರೆಗಳ ಸಮೀಕ್ಷೆ ನಿರಂತರ ನಡೆದಿದೆ. ಒತ್ತುವರಿಯಾದದ್ದು ಗೊತ್ತಾದರೆ, ಗಡಿ ಗುರುತಿಸಿ, ಕಲ್ಲು ಹಾಕಿಸುತ್ತೇವೆ. ಒತ್ತುವರಿ ಮಾಡಿದವರಿಗೆ ಯಾವುದೇ ಶಿಕ್ಷೆ ಇಲ್ಲ. ಜನರು ಎಚ್ಚೆತ್ತುಕೊಂಡು, ಕೆರೆ ಕಾಪಾಡಿಕೊಳ್ಳಬೇಕು’ ಎಂದು ಇಲಾಖೆಯ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ರಾಘವನ್‌ ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT