ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ರೈತನ ಮಗ ಅಂಜನ್ ರೂರಲ್ ಸ್ಟಾರ್

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 26 ಜನವರಿ 2020, 19:30 IST
ಅಕ್ಷರ ಗಾತ್ರ

ಪ್ರಸಿದ್ಧ ನಟ, ನಟಿಯರ ಹೆಸರಿನಲ್ಲಿ ಅಭಿಮಾನಿಗಳಸಂಘಗಳಿರುವುದನ್ನು ನಾವು ಕಂಡಿರುತ್ತೇವೆ. ಆದರೆ, ಒಬ್ಬ ಯುವ ನಟನ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುಂಚೆಯೇ ರಾಜ್ಯದಾದ್ಯಂತಅಭಿಮಾನಿ ಸಂಘಗಳಿದ್ದು, ಅವರ ಹೆಸರಲ್ಲಿ ಜನ ಸ್ವಯಂಪ್ರೇರಿತರಾಗಿ ನೂರಕ್ಕೂ ಹೆಚ್ಚು ಸಂಘಗಳನ್ನು ಹುಟ್ಟುಹಾಕಿದ್ದು ಅಚ್ಚರಿ ಮೂಡಿಸುವಂತಹದ್ದು. ಖ್ಯಾತ ನಟ, ನಟಿಯರಿಗೆ ಟೈಟಲ್ ಬಿರುದುಗಳಿರುವ ಹಾಗೆ ಇವರಿಗೂ ಒಂದು ಬಿರುದಿದೆ. ಅದುವೇ ರೂರಲ್ ಸ್ಟಾರ್.

ಇವರು ರೂರಲ್ ಸ್ಟಾರ್ ಅಂಜನ್. ಧಾರವಾಡ ಜಿಲ್ಲೆ ಕುಂದಗೋಳದ ಗೌಡಗೇರಿಯವರು. ರೈತನ ಮಗ ಅಂಜನ್ ‘ರೂರಲ್ ಸ್ಟಾರ್’ ಆಗಿ ಹೊರಹೊಮ್ಮಿದ್ದರ ಹಿಂದೆ ಸಾಕಷ್ಟು ಪರಿಶ್ರಮ, ನಿರಂತರವಾಗಿ ಸಾಧಿಸುವ ಹಂಬಲ ಮತ್ತು ಅಪ್ಪನ ಆದರ್ಶ ಗುಣಗಳು ಸ್ಫೂರ್ತಿ ಎಂದು ಹೇಳುವ ಅಂಜನ್, ತಮ್ಮ ಬಹುನಿರೀಕ್ಷಿತ ಚಿತ್ರ ‘ಯರ‍್ರಾಬಿರ‍್ರಿ’ಯ ಬಿಡುಗಡೆಯ ತಯಾರಿಯಲ್ಲಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಭೆಗಳೆಲ್ಲ ಸೇರಿ ಮಾಡಿದ ಮೊದಲ ಸಿನಿಮಾ‘ಮನಸಿನ ಚಿತ್ತಾರ’ ಕೆಲವೇ ಚಿತ್ರಮಂದಿರಗಳಲ್ಲಿ ತೆರೆಕಂಡು ನಿರೀಕ್ಷಿತ ಗೆಲುವು ಸಾಧಿಸಿತು. ಆದರೆ, ಆ ಸಿನಿಮಾದಲ್ಲಿ ಅಭಿನಯಿಸಿದ ಅಂಜನ್‌ನನ್ನು ಜನ ಮರೆಯಲಿಲ್ಲ. ತಮ್ಮ ವೃತ್ತಿಪರ ನಟನೆಯಿಂದಾಗಿ ಅಂಜನ್ ಬಹುಬೇಗ ಕನ್ನಡ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ನಟರ ಸಾಲಿಗೆ ನಿಲ್ಲುವ ಸಾಮರ್ಥ್ಯ ತೋರಿದರು. ಸದ್ಯ ತಮ್ಮ ಕನಸಿನ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಾಗ ‘ಪ್ರಜಾವಾಣಿ ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.

ಒಂದು ಸಾಧಾರಣ ಕುಟುಂಬದ ಹುಡುಗ ಒಂದೇ ಸಿನಿಮಾ ಮುಖಾಂತರ ನೂರಕ್ಕೂ ಹೆಚ್ಚು ಡಾನ್ಸ್ ಕ್ಲಬ್ ಮತ್ತು ಅಖಿಲ ಕರ್ನಾಟಕ ಅಂಜನ್ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ರೂರಲ್ ಸ್ಟಾರ್‌ಗೆತಮ್ಮ ತಂದೆಯೇ ಗುರು. ತಂದೆ ರಂಗಭೂಮಿ ಕಲಾವಿದರಾದ್ದರಿಂದ ಬಾಲ್ಯದಿಂದಲೇ ಅವರ ನಾಟಕಗಳನ್ನು ನೋಡುತ್ತಾ ಬೆಳೆದವರು. ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲೇ ನಾಟಕ ಪ್ರದರ್ಶನವಿರಲಿ ತಪ್ಪದೇ ಭಾಗವಹಿಸುತ್ತಿದ್ದ ಅಂಜನ್ ನಟನೆಯತ್ತ ಆಕರ್ಷಿತರಾಗಿದ್ದು ಅವರನ್ನು ಸಿನಿಮಾ ಕ್ಷೇತ್ರದತ್ತ ಕೊಂಡೊಯ್ಯಿತಂತೆ.

ಹತ್ತನೇ ತರಗತಿಯವರೆಗೂ ಕ್ರೀಡೆಯಲ್ಲಿ ಸದಾ ಮುಂದಿರುತ್ತಿದ್ದ ಅಂಜನ್ ರಾಜ್ಯಮಟ್ಟದಲ್ಲಿ ಅನೇಕ ಬಹುಮಾನ, ಪ್ರಶಸ್ತಿಗಳನ್ನು ಗೆದ್ದವರು. ಆದರೆ ಕ್ರೀಡೆಯಲ್ಲಿ ಮುಂದುವರಿಯಲು ಆರ್ಥಿಕ ಸಂಕಷ್ಟ ಎದುರಾದ್ದರಿಂದ ಕ್ರೀಡೆಯಿಂದ ವಿದಾಯ ಹೇಳಿದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಡಾನ್ಸ್ ಕ್ಲಾಸ್ ಪ್ರಾರಂಭಿಸಿ ಪ್ರಸಿದ್ಧಿ ಪಡೆದರು. ಆಗ ಸ್ನೇಹಿತರು ನಟನಾ ಕ್ಷೇತ್ರಕ್ಕೆ ಕಾಲಿಡುವಂತೆ ಸಲಹೆ ನೀಡಿದ್ದರಿಂದ,ಸಿನಿಮಾ ಜಗತ್ತಿನಲ್ಲಿ ‘ಮಹಾರಥ’ ಸಿನಿಮಾಗೆ ಹಿನ್ನೆಲೆ ಧ್ವನಿ ನೀಡಿದರು. ನಂತರ ಅವಕಾಶಗಳು ಇವರನ್ನರಸಿ ಬಂದವು. ಕಿಚ್ಚ ಸುದೀಪ್ ಅವರನ್ನು ಆದರ್ಶವಾಗಿಟ್ಟುಕೊಂಡಿರುವ ಅಂಜನ್ ಆಕ್ಷನ್ ಮತ್ತು ಪ್ರೇಮಕಥೆಯ ಸುತ್ತ ಹೆಣೆದಿರುವ ‘ಯರ‍್ರಾಬಿರ‍್ರಿ’ ಸಿನಿಮಾದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ.

‘ಉತ್ತರ ಕರ್ನಾಟಕದವರೇ ಆದ ಸೋನು ಪಾಟೀಲ ಹಾಗೂ ಅರ್ಚನಾ ನಟಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಸೆನ್ಸಾರ್ ಮಂಡಳಿಯಲ್ಲಿದ್ದು,ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಗೋವಿಂದ್ ದಾಸರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ’ ಅಂಜನ್‌ ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಸ್ಯಾಂಡಲ್‌ವುಡ್‌ನ ನಟರು ಸದಾ ಮುಂದಿರುತ್ತಾರೆ. ಹಿರಿಯ ನಟರ ಸಿನಿಮಾಗಳನ್ನು ನೋಡುತ್ತಾ ಬೆಳೆದ ಅಂಜನ್‌ಗೆ ಕನ್ನಡ ಚಲನ ಚಿತ್ರೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿವ ಕನಸಿದೆ. ಕನ್ನಡ ಸಿನಿಮಾ ರಸಿಕರ ಮನಗೆಲ್ಲಲು ಕನಸು ಕಾಣುತ್ತಿರುವ ಯುವ ನಟನಿಗೆ ನಟನೆಯಲ್ಲಿ ತನ್ನ ಭವಿಷ್ಯ ರೂಪಿಸಿಕೊಳ್ಳುವ ಬಯಕೆಯಿದೆ. ಅದಕ್ಕೆ ತಕ್ಕಂತೆ ಪರಿಶ್ರಮ ಪಡುತ್ತಿರುವ ಅಂಜನ್ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ. ತಮ್ಮ ಬಿಡುವಿನ ಸಮಯದಲ್ಲಿ ಅಪ್ಪ, ಅಮ್ಮನ ಜೊತೆಗೆ ತಮ್ಮ ಗ್ರಾಮದಲ್ಲಿ ಸಮಯ ಕಳೆಯುವ ಅಂಜನ್, ಅಪ್ಪನಿಗೆ ಕೃಷಿಯಲ್ಲಿ ನೆರವಾಗುವ ಮೂಲಕ ಪಕ್ಕಾ ರೈತನ ಮಗ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT