ಗುರುವಾರ , ಏಪ್ರಿಲ್ 9, 2020
19 °C

ಹುಬ್ಬಳ್ಳಿ |ರೈತನ ಪುತ್ರ ಈಗ ತಹಶೀಲ್ದಾರ್‌ ಹುದ್ದೆಗೆ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಸಿದ್ಧತೆಗೆಂದು ಯಾವುದೇ ಕೋಚಿಂಗ್‌ ತರಗತಿಗಳಿಗೆ ಹಾಜರಾಗದೆ, ಸತತ ಐದು ವರ್ಷಗಳ ಕಾಲ ಮ್ಯಾರಥಾನ್‌ ಅಧ್ಯಯನ ಮಾಡಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ ಇಲ್ಲಿನ ಕೇಶ್ವಾಪುರ ನಿವಾಸಿ ಸಂತೋಷ ಹಿರೇಮಠ.

ಅಜ್ಜನ ಪ್ರೇರಣೆಯ ಮಾತುಗಳು, ಕೃಷಿಕರಾಗಿದ್ದರೂ ತಂದೆ ಓದಿಗಾಗಿ ನೀಡಿದ ಪ್ರೋತ್ಸಾಹ ಅವರನ್ನು ಈ ಸಾಧನೆ ಮಾಡುವಂತೆ ಮಾಡಿವೆ. ಈಗಾಗಲೇ ಐಎಎಸ್‌, ಕೆಎಎಸ್‌ ಮಾಡಿದವರಿಂದ ಸಲಹೆ ಪಡೆದು, ತಾವೇ ಅಧ್ಯಯನ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

ಇಲ್ಲಿನ ಎಂ.ಆರ್‌. ಸಾಖರೆ ಶಾಲೆಯಲ್ಲಿ ಪ್ರಾಥಮಿಕ, ಸೇಂಟ್‌ ಮೈಕಲ್‌ ಶಾಲೆಯಲ್ಲಿ ಹಿರಿಯ ಪ್ರಾಥಮಿಕ, ಚೇತನಾ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ ಹಾಗೂ ಗೋಕುಲ ರಸ್ತೆಯಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಸಿದ್ಧತೆಗೆಂದು ದೆಹಲಿ ತೆರಳಿದ್ದ ಅವರು, ರಾಜ್ಯದಲ್ಲಿ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನಿಸುತ್ತಲೇ ಮರಳಿ ಬೆಂಗಳೂರಿಗೆ ಬಂದು ಓದಲು ಆರಂಭಿಸಿದರು. ಐಚ್ಛಿಕ ವಿಷಯವನ್ನಾಗಿ ಪಿಯುಸಿ ಹಾಗೂ ಪದವಿಯಲ್ಲಿ ಓದದ ಭೂಗೋಳ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದರು.

‘ಪದವಿಯಲ್ಲಿ ಓದಿದ್ದ ಕಂಪ್ಯೂಟರ್ ಸೈನ್ಸ್‌ ಐಚ್ಛಿಕ ವಿಷಯ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ, ಬೇರೆ ವಿಷಯ ಆಯ್ಕೆ ಮಾಡಿಕೊಳ್ಳಬೇಕಿತ್ತು. ವಿಜ್ಞಾನ ಹಿನ್ನೆಲೆಯುಳ್ಳವರಿಗೆ ಭೂಗೋಳ ವಿಜ್ಞಾನ ಅಧ್ಯಯನಕ್ಕೆ ಉತ್ತಮ ಎಂದು ತೆಗೆದುಕೊಂಡಿದ್ದೆ. ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಅಜ್ಜ ಕೆ.ಜಿ. ಹಿರೇಮಠ ಅವರು ಹುಡಾ ಅಧ್ಯಕ್ಷರಾಗಿದ್ದರು. ಅವರು ಜನರ ಸೇವೆ ಮಾಡಲು ಕೆಎಎಸ್‌ ಮಾಡು ಎನ್ನುತ್ತಿದ್ದರು. ಜೊತೆಗೆ ತಂದೆ ಸಂಗಯ್ಯ ಹಿರೇಮಠ ರೈತರಾಗಿದ್ದರೂ, ಮಕ್ಕಳ ಓದಿಗಾಗಿಯೇ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಅವರ ಕನಸು ನನಸು ಮಾಡಿದ್ದೇನೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು