ಉಪ್ಪಿನಬೆಟಗೇರಿ: ಮುಂಗಾರಿನ ಹೆಸರು ಬೆಳೆ ಕಟಾವು ಆರಂಭವಾಗಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಶಿ ಮಾಡಿದ ಹೆಸರುಕಾಳು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಮುಂಗಾರಿನ ಹೆಸರಿನ ಹಂಗಾಮು ಜೋರಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಹೆಸರು ಕಟಾವಿಗೆ ಟ್ರ‍್ಯಾಕ್ಟರ್, ಟ್ರಕ್, ಚೈನ್‌ಟಾಪ್ ಯಂತ್ರೋಪಕರಣಗಳು ಬಂದಿವೆ. ನಿತ್ಯ ಸುರಿಯುತ್ತಿರುವ ಮಳೆಯಿಂದ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಕಟಾವು ಯಂತ್ರ ಹೊಲಕ್ಕೆ ಹೋಗದ ಸ್ಥಿತಿ ಇದೆ. ಹೆಸರುಕಾಯಿ ಕೊಯ್ಯಲು ಕೂಲಿಆಳುಗಳು ಸಿಗುತ್ತಿಲ್ಲ. ಒಂದು ವೇಳೆ ದೊರೆತರು ಕೂಲಿ ಹಣ ದುಪ್ಪಟ್ಟು ಕೊಟ್ಟು ಹರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆಲ ರೈತರು ಹೆಸರು ಬೆಳೆ ಕಟಾವು ಮಾಡಿದ ಕಾಳಿನ ರಾಶಿಯನ್ನು ಹೊಲದಿಂದ ತಂದು ವಿರೂಪಾಕ್ಷೇಶ್ವ ದೇವಸ್ಥಾನಕ್ಕೆ ತೆರಳುವ ರಸ್ತೆ, ಈದ್ಗಾ ಮೈದಾನ, ಪಾಳು ಬಿದ್ದ ಜಾಗ ಇನ್ನೂ ಕೆಲ ರೈತರು ಹೊಲದಲ್ಲಿ ಒಣಗಿಸಲು ಹಾಕಿದ್ದಾರೆ. ಮಳೆಯಿಂದ ಕಾಳುಗಳನ್ನು ಮುಚ್ಚಿಡಲು ತಾಡಪತ್ರಿ ಖರೀದಿ ಮಾಡಿದ್ದಾರೆ. ಕೆಲವರು ವಾಹನಗಳಲ್ಲಿ ತಂದು ಮಾರಾಟ ಮಾಡುವ ವ್ಯಾಪಾರಿಗಳ ಹತ್ತಿರ, ಇನ್ನೂ ಕೆಲ ರೈತರು ಕೃಷಿ ಪತ್ತಿನ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಗಳಲ್ಲಿ ಖರೀದಿಸಿದ್ದಾರೆ. ತಾಡಪತ್ರಿಗಳ ಗುಣಮಟ್ಟ ಹಾಗೂ ಗಾತ್ರಕ್ಕೆ ತಕ್ಕಂತೆ ಸಾವಿರದಿಂದ ಮೂರು ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ.
‘ವ್ಯಾಪಾರಿಗಳ ಬಳಿಯಲ್ಲಿ ಖರೀದಿಸಿದ ತಾಡಪತ್ರಿಗಳು ದಪ್ಪಗಿದ್ದು, ಗುಣಮಟ್ಟದ್ದಾಗಿವೆ. ಆದರೆ ಕೃಷಿ ಕೇಂದ್ರದಲ್ಲಿನ ತಾಡಪತ್ರಿಗಳನ್ನು ಖರೀದಿಸಿ ತಂದು ಕಾಳಿಗೆ ಹಾಸಲು ಮತ್ತು ಹೊಚ್ಚಲು ಹಾಕಲಾಗಿದ್ದು, ಇವು ಮಳೆಯ ನೀರಿನ ತೇವಾಂಶಕ್ಕೆ ಒಳಗಿನ ಮೇಲ್ಮೈ ಕಾಳು ತೊಯ್ದು ಮೊಳಕೆಯೊಡೆದಿವೆ. ಎರಡರಿಂದ ಮೂರು ತಾಡಪತ್ರಿ ಹೊದೆಸಿ ಬಂದೋಬಸ್ತ್ ಮಾಡಿ ಇಳಿಜಾರಾಗಿ ಮುಚ್ಚಿದ್ದರೂ ಪ್ರಯೋಜನವಾಗಿಲ್ಲ. ಇವು ಕಳಪೆಮಟ್ಟದ್ದಾಗಿವೆ’ ಎಂದು ರೈತರು ಆರೋಪಿಸಿದರು.
ಗುಡಿಸಲು ಹಾಕಿಕೊಂಡು ಹಗಲು, ರಾತ್ರಿ ಎನ್ನದೇ ಮಳೆಯಿಂದ ಹೆಸರು ಕಾಳು ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ಅಳಲು ತೊಡಿಕೊಂಡರು.
ಮುಂಚೆ ಖರೀದಿಸಲಾಗಿದ್ದ ಐಎಸ್‌ಐ ಮಾರ್ಕ್‌ವುಳ್ಳ ನೈಲಾನ ತಾಡಪತ್ರಿಗಳು ಗುಣಮಟ್ಟದ್ದಾಗಿದ್ದವು. ಈಗ ಅವು ದೊರೆಯುತ್ತಿಲ್ಲ ಎಂದು ಉಪ್ಪಿನಬೆಟಗೇರಿ ರೈತ ಅಜೀತ ಛಬ್ಬಿ ಹೇಳಿದರು.
ಬೆಂಗಳೂರಿನಿಂದ ಎನ್.ಸಿ ಆಗಿ ಗುಣಮಟ್ಟದ ತಾಡಪತ್ರಿ ಬಂದಿರುತ್ತವೆ. ಅವು ಕಳಪೆ ಮಟ್ಟದ್ದು ಎಂದು ದೃಢಪಟ್ಟರೆ ಮರಳಿ ಕಳಿಸಲಾಗುವುದುರಾಜಶೇಖರ ಅನಗೌಡರ್ ಸಹಾಯಕ ಕೃಷಿ ನಿರ್ದೇಶಕ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.