ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಫತೇ ಶಾ ವಲಿ ದರ್ಗಾ ಉರುಸ್‌ ಜೂನ್‌ 27ಕ್ಕೆ

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ದರ್ಗಾ; ಸಹಸ್ರಾರು ಭಕ್ತರ ಭೇಟಿ ನಿರೀಕ್ಷೆ
Published 26 ಜೂನ್ 2024, 4:28 IST
Last Updated 26 ಜೂನ್ 2024, 4:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೂಫಿ ಸಂತರ ಪರಂಪರೆಗೆ ಹೆಸರಾದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್‌ ಸಮೀಪದ ಹಜರತ್‌ ಫತೇ ಶಾ ವಲಿ ದರ್ಗಾ ವಿದ್ಯುದೀಪಾಲಂಕಾರದಿಂದ ಜಗಮಗಿಸುತ್ತಿದೆ. 610ನೇ ವರ್ಷದ ಉರುಸ್ ಆಚರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಜೂನ್‌ 26ರಂದು ಫಾತಿಹಾ ಪಾರಾಯಣ, ಜೂನ್‌ 27ರಂದು ಉರುಸ್‌ ನಡೆಯಲಿದೆ.

‘ಹುಬ್ಬಳ್ಳಿಯ ದರ್ಗಾಗಳಲ್ಲಿ ಫತೇ ಶಾ ವಲಿ ದರ್ಗಾಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ. ಸುಮಾರು 700 ವರ್ಷಗಳ ಇತಿಹಾಸವಿದೆ. ಧರ್ಮ, ಜಾತಿ ಬೇಧವಿಲ್ಲದೆ ಜನಸಾಮಾನ್ಯರು ಅಪಾರ ಭಕ್ತಿ ನಂಬಿಕೆಯನ್ನು ಇರಿಸಿಕೊಂಡು ಇಲ್ಲಿಗೆ ಭೇಟಿ ನೀಡುತ್ತಾರೆ. ‌ನಿರೀಕ್ಷೆಯಂತೆ ಹಲವಾರು ಮಂದಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ರೋಗ ರುಜಿನಗಳಿಂದ ಮುಕ್ತರಾಗಿದ್ದಾರೆ’ ಎಂದು ದರ್ಗಾದ ಹಿನ್ನೆಲೆ ತೆರೆದಿಡುತ್ತಾರೆ ಅಲ್ಲಿನ ಧರ್ಮಗುರು ರಿಯಾಝುದ್ದೀನ್‌ (ಬಾಬುಲಾಲ್‌ ಸಾಹೇಬ್‌).

‘ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಉರುಸ್‌ನಲ್ಲಿ ಪಾಲ್ಗೊಳ್ಳಲು ಬರುತ್ತಾರೆ. ಈ ಬಾರಿಯೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಜೂನ್‌ 26ರಂದು ಮಗ್ರಿಬ್‌ ನಮಾಜ್‌ನ ನಂತರ ದರ್ಗಾದಲ್ಲಿ ಫಾತಿಹಾ ಪಾರಾಯಣ ನಡೆಯಲಿದೆ. ನಂತರ ನಗರದ ಪ್ರಮುಖ ವೃತ್ತಗಳಲ್ಲಿ ಸಂದಲ್‌ ಮೆರವಣಿಗೆ ನಡೆದು, ಮರಳಿ ದರ್ಗಾಕ್ಕೆ ತಲುಪಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ’ ಎನ್ನುತ್ತಾರೆ ಅವರು.

ಭಕ್ತರ ಕಾಣಿಕೆಯೇ ಪ್ರಸಾದ:

‘ಈ ದರ್ಗಾಕ್ಕೆ ಹಿಂದೂ, ಮುಸ್ಲಿಂ, ಸಿಖ್‌ ಸಮುದಾಯದ ಭಕ್ತರೂ ಇದ್ದಾರೆ. ತಮ್ಮ ಹರಕೆಯ ಪ್ರಕಾರ ಕೆಲವರು ಅಕ್ಕಿ ಹಾಗೂ ಇತರೆ ಅಡುಗೆ ಸಾಮಾಗ್ರಿಗಳನ್ನು ದರ್ಗಾಕ್ಕೆ ನೀಡುತ್ತಾರೆ. ಅದೇ ಸಾಮಗ್ರಿ ಬಳಸಿ ಅನ್ನ ಪ್ರಸಾದ ತಯಾರಿಸಲಾಗುತ್ತದೆ. ಅಂದಾಜು 50 ಕ್ವಿಂಟಲ್‌ ಅಕ್ಕಿ ಬಳಕೆಯಾಗಲಿದೆ’ ಎನ್ನುತ್ತಾರೆ ರಿಯಾಝುದ್ದೀನ್‌.

ಭಕ್ತಿಯ ಸೆಲೆ –ಭಾವೈಕ್ಯದ ನೆಲೆ

ಹುಬ್ಬಳ್ಳಿಯಲ್ಲಿ ದಶಕಗಳಿಂದ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತ ಬಂದಿವೆ. ತಣ್ಣಗೆ ಕಾಣಿಸುವ ಕಂದಕ ಅಷ್ಟೇ ತಣ್ಣಗಾಗಿ ಮರೆಯಾಗುವುದು ಇಲ್ಲಿನ ನೆಲದ ಗುಣ. ಇಲ್ಲಿನ ದರ್ಗಾ ಮಠಗಳು ಭಾವೈಕ್ಯದ ನೆಲೆಗಳಾಗಿ ಜನರನ್ನು ಭಕ್ತಿಯ ಸೆಲೆಯಲ್ಲಿ ಒಂದುಗೂಡಿಸುತ್ತಲೇ ಬಂದಿರುವುದೇ ಅದಕ್ಕೆ ಕಾರಣ ಎನ್ನಬಹುದು. ದರ್ಗಾಕ್ಕೆ ಬರುವ ಎಲ್ಲ ಧರ್ಮಗಳ ಭಕ್ತರು ತಮ್ಮದೇ ರೀತಿಯಲ್ಲಿ ಅಲ್ಲಿನ ಕ್ರಮಗಳನ್ನು ಪರಿಪಾಲಿಸಿಕೊಂಡು ಗೌರವ ಸಲ್ಲಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಭಕ್ತಿಯೊಂದೇ ಅಲ್ಲಿ ಎಲ್ಲರಲ್ಲಿ ನೆಲೆಗೊಳ್ಳುತ್ತದೆ.

ಸೂಫಿ ಅನುಭಾವದ ಘಮಲು

ಉದ್ದನೆಯ ಪೈಜಾಮ ಅದರ ಮೇಲೊಂದು ಕೋಟು ತಲೆ ಮೇಲೊಂದು ಟೊಪ್ಪಿಗೆ ಅಧ್ಯಾತ್ಮ ಅಂಟಿಕೊಂಡ ಗಡ್ಡ ಕೈಯಲ್ಲಿ ನವಿಲುಗರಿ... ಸೂಫಿ ಪರಂಪರೆಯ ಘಮಲು ಇಲ್ಲಿನ ಫತೇ ಶಾ ವಲಿ ದರ್ಗಾದ ಅಂಗಳದಲ್ಲಿ ಭಕ್ತರನ್ನು ಸ್ವಾಗತಿಸುವುದು ಹೀಗೆ. ದರ್ಗಾದಲ್ಲಿ ಅಲ್ಲಲ್ಲಿ ಕುಳಿತಿರುವ ಸೂಫಿಗಳು ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಅಧ್ಯಾತ್ಮದ ನೆಲೆಯಲ್ಲಿ ಫಕೀರರಂತೆ ಕಳೆದುಹೋಗುವ ಅವರು ದರ್ಗಾದ ಮಹಿಮೆಗೆ ಕಳೆ ತುಂಬಿದವರಂತೆ ಭಾಸವಾಗುತ್ತಾರೆ.

ಮಂಗಳೂರಿನಿಂದ ಹುಬ್ಬಳ್ಳಿಗೆ ಕೆಲಸಕ್ಕೆ ಬಂದಿದ್ದು ದರ್ಗಾ ವೀಕ್ಷಿಸಲು ಬಂದಾಗ ಉರುಸ್‌ನ ಸಿದ್ಧತೆ ನಡೆಯುತ್ತಿರುವುದು ಗಮನಕ್ಕೆ ಬಂತು. ಇಂತಹ ಪ್ರಸಿದ್ಧ ದರ್ಗಾದ ಉರುಸ್‌ನಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಕಾಯುತ್ತಿರುವೆ.
ಬಾದ್‌ಶಾ ಬೆಳ್ತಂಗಡಿ. ದಕ್ಷಿಣ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT