ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಅಪಹರಣ ಆರೋಪ; ಕಾರ್ಪೊರೇಟರ್‌ ವಿರುದ್ಧ ಪ್ರಕರಣ ದಾಖಲು

ಠಾಣೆಗೆ ಮುತ್ತಿಗೆ ಹಾಕಿದ ಚೇತನ ಬೆಂಬಲಿಗರು; ಇನ್‌ಸ್ಪೆಕ್ಟರ್‌ ಗರಂ
Last Updated 25 ಜೂನ್ 2022, 13:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪತ್ನಿಸಹನಾಹಿರೆಕೇರೂರಅವರನ್ನು,ಅವರತಂದೆ, ತಾಯಿಹಾಗೂಚಿಕ್ಕಪ್ಪನಮಗನಾದ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಅವರು ಅಪಹರಣಮಾಡಿದ್ದಾರೆ’ ಎಂದು ಪತಿ ನಿಖಿಲ್‌ ದಾಂಡೇಲಿ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘2021ರ ನವೆಂಬರ್‌ನಲ್ಲಿ ಕುಂದಗೋಳದ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದು, ಇದೇ 26ರಂದು ನಗರದ ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ಆರತಕ್ಷತೆ ಇಟ್ಟುಕೊಳ್ಳಲಾಗಿತ್ತು. ಪತ್ನಿಯ ತಂದೆ ಶಿವು ಹಿರೇಕೆರೂರ ಮತ್ತು ತಾಯಿ ಜಯಲಕ್ಷ್ಮಿ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಬರುವಂತೆ ಒಪ್ಪಿಸಲು, ಶುಕ್ರವಾರ ಬೆಳಿಗ್ಗೆ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನ ಬಾಟಾ ಷೋರೂಂ ಬಳಿ ಬಂದಾಗ, ಚೇತನ ಅವರು ಒಂದು ತಾಸಿನಲ್ಲಿ ಕಳುಹಿಸಿಕೊಡುವುದಾಗಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಒಂದು ತಾಸಿನ ನಂತರ ಪತ್ನಿ ಮರಳಿ ಬರದ ಹಿನ್ನೆಲೆಯಲ್ಲಿ ಅವಳ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಆಗಿತ್ತು. ಪತ್ನಿಯ ತಂದೆ–ತಾಯಿ ಹಾಗೂ ಚೇತನ ಅವಳನ್ನು ಅಪಹರಿಸಿದ್ದಾರೆ’ ಎಂದು ನಿಖಿಲ್‌ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ, ಆರೋಪಿ ಚೇತನ ಹಿರೇಕೆರೂರ ಅವರನ್ನು ಶನಿವಾರ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಹೆಗ್ಗೇರಿ, ಮಾರುತಿ ನಗರ, ಹೊಸೂರು ನಿವಾಸಿಗಳು ಹಾಗೂ ಆಟೊ ಚಾಲಕರು ಸೇರಿ ನೂರಕ್ಕೂ ಹೆಚ್ಚು ಮಂದಿ ಪೊಲೀಸ್‌ ಠಾಣೆ ಮುತ್ತಿಗೆ ಹಾಕಿ ಚೇತನ ಬಿಡುಗಡೆಗೆ ಆಗ್ರಹಿಸಿದರು.

‘ಪಾಲಿಕೆ ಸದಸ್ಯನಾದ ಬಳಿಕೆ ಚೇತನ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಡಾವಣೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಿ, ನೆಮ್ಮದಿಯ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಂತಹ ವ್ಯಕ್ತಿ ತನ್ನದೇ ಕುಟುಂಬದ ಯುವತಿಯನ್ನು ಅಪಹರಣ ಮಾಡುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಚೇತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಪ್ರಕಾರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬರಲಿದೆ. ಅಪಹರಣವಾಗಿದೆ ಎಂದು ಸಹನಾ ಅವರ ಪತಿ ದೂರು ನೀಡಿದ್ದು, ಸಹನಾ ಪತ್ತೆಯಾಗಿ ಅವರ ಹೇಳಿಕೆ ಏನೆಂಬುದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಚೇತನ ಬೆಂಬಲಿಗರಿಗೆ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಹೇಳಿದರು.

ಆ ವೇಳೆ ಬೆಂಬಲಿಗನೊಬ್ಬ ಆವೇಷಭರಿತವಾಗಿ ಮಾತನಾಡಿದ್ದಕ್ಕೆ ಇನ್‌ಸ್ಪೆಕ್ಟರ್‌, ‘ನಿಯಂತ್ರಣ ತಪ್ಪಿ ಮಾತನಾಡಿದರೆ ನಾವು ಸಹ ಪೊಲೀಸ್‌ ಏನು ಎಂಬುದನ್ನು ತೋರಿಸಬೇಕಾಗುತ್ತದೆ. ಸಮಾಧಾನದಿಂದ ನಿಮ್ಮ ಮಾತು ಆಲಿಸಿದ್ದೇನೆ. ಅದು ಬಿಟ್ಟು ನೀವು ಆಕ್ರೋಶ ವ್ಯಕ್ತಪಡಿಸಿದರೆ ನಾವು ಸಹ ನಮ್ಮ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ನಿಮ್ಮೆಲ್ಲರ ಅಭಿಮಾನಕ್ಕೆ, ಪ್ರೀತಿಗೆ ನಾನು ಋಣಿ. ವಿಚಾರಣೆಗಾಗಿ ಪೊಲೀಸರು ನನ್ನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಯಾರೂ ಆವೇಷ ಪಡುವುದು ಬೇಡ. ಪೊಲೀಸ್‌ ಠಾಣೆಯಲ್ಲಿ ಐದಾರು ದಿನ ಇದ್ದ ಬಂದವನು ನಾನು, ಇದು ಹೊಸದೇನು ಅಲ್ಲ’ ಎಂದು ಚೇತನ ಹಿರೇಕೆರೂರ ಬೆಂಬಲಿಗರಿಗೆ ಸಮಾಧಾನ ಪಡಿಸಿ ಠಾಣೆಯಿಂದ ಹೊರಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT