ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ತುಂಬಿದ ಒಳಚರಂಡಿ, ಮನೆಗೆ ನುಗ್ಗಿದ ನೀರು

ಹುಬ್ಬಳ್ಳಿಯಲ್ಲಿ ಅಬ್ಬರದ ಮಳೆ, ರಸ್ತೆಗಳು ಜಲಾವೃತ, ಲಾಕ್‌ಡೌನ್‌ನಲ್ಲೂ ಸವಾರರ ಪರದಾಟ
Last Updated 21 ಮೇ 2021, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು, ಶುಕ್ರವಾರ ಸಂಜೆ ಏಕಾಏಕಿ ಸುರಿದ ಒಂದು ತಾಸು ಮಳೆಗೆ ಬಹುತೇಕ ಬಡಾವಣೆಗಳ ರಸ್ತೆಗಳು ಜಲಾವೃತವಾದವು. ಚರಂಡಿಗಳು ತುಂಬಿ ಕೆಲ ಮನೆಗಳಿಗೂ ನೀರು ನುಗ್ಗಿದೆ. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು.

ಅಶೋಕನಗರ ರೈಲ್ವೆ ಸೇತುವೆ ಕೆಳಗೆ ನೀರು ನಿಂತಿದ್ದು, ತುರ್ತು ಕಾರ್ಯಕ್ಕೆ ತೆರಳುವ ವಾಹನ ಸವಾರರು ತೀವ್ರ ಪರದಾಡಿದರು. ಅಶೋಕನಗರ ಪೊಲೀಸ್‌ ಠಾಣೆ ಸನಿಹದ ಅಪಾರ್ಟ್‌ಮೆಂಟ್‌ ವಾಹನ ನಿಲುಗಡೆ ಸ್ಥಳದಲ್ಲಿ ನೀರುನುಗ್ಗಿದ ಪರಿಣಾಮ ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಿದ್ದವು. ದೇಶಪಾಂಡೆ ನಗರದ ರೋಟರಿ ಸ್ಕೂಲ್‌ ಎದುರಿನ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು.

ಅರವಿಂದ ನಗರದ ದಾಳಿಂಬರ ಪೇಟೆಯ ಕೆಲವು ಅಂಗಡಿಗಳಿಗೆ ಹಾಗೂ ಅದೇ ರಸ್ತೆಯಲ್ಲಿರುವ ಐದಾರು ಮನೆಗಳಿಗೂ ನೀರು ನುಗ್ಗಿದೆ. ಮಹಿಳೆಯರು, ಮಕ್ಕಳು ಬಿಂದಿಗೆ, ಬಕೆಟ್‌ನಿಂದ ನೀರು ಹೊರಹಾಕುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಹಳೇಹುಬ್ಬಳ್ಳಿಯ ಚನ್ನಪೇಟೆ, ಭವಾನಿ ನಗರ, ಎಸ್‌.ಎಂ. ಕೃಷ್ಣ ನಗರ, ಆನಂದ ನಗರ, ನೇಕಾರ ನಗರ, ಹೆಗ್ಗೇರಿ ಸುತ್ತ–ಮುತ್ತಲಿನ ರಸ್ತೆಗಳಲ್ಲಿ ನೀರು ನಿಂತಿತ್ತು.

ಹೆಗ್ಗೇರಿ ಮಾರುತಿ ನಗರದಲ್ಲಿ ರಸ್ತೆ ಕಾಮಗಾರಿಗೆ ಗುಂಡಿ ತೋಡಿದ್ದು, ಅಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಇದರಿಂದ ರಸ್ತೆ ಕಾಣದೆ ವಾಹನ ಸವಾರು ಮುಂದೆ ಸಾಗಲು ಪರದಾಡಿದರು. ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದ ಹೂಗಾರ ಓಣಿಯ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿತ್ತು. ಸುಮಾರು ಎರಡು ತಾಸು ರಸ್ತೆಯಲ್ಲಿಯೇ ನೀರು ನಿಂತ ಪರಿಣಾಮ ಹೊಲಗಳಿಗೆ ಹಾಗೂ ಅಗತ್ಯ ಕೆಲಸಕ್ಕೆ ತೆರಳುವ ಗ್ರಾಮಸ್ಥರು ತೀವ್ರ ಪರದಾಡಿದರು.

‘ರಸ್ತೆಯ ಪಕ್ಕದ ನಾಲಾದಲ್ಲಿ ಹೂಳು ತುಂಬಿದ್ದರಿಂದ, ನೀರು ರಸ್ತೆಯ ಮೇಲೆ ಹರಿದಿದೆ. ಹೀಗೆ ಹರಿದ ನೀರು ಹೊಲಗಳಿಗೆ ನುಗ್ಗುವುದರಿಂದ ಬೆಳೆಗಳೆಲ್ಲ ಹಾಳಾಗುತ್ತವೆ. ಅಲ್ಲದೆ, ಹಾವು, ಚೇಳುಗಳು ಸಹ ನಾಲಾದಿಂದ ಹರಿದು ಬರುತ್ತವೆ. ಹೂಳು ತೆಗೆಯುವಂತೆ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಆ ಕುರಿತು ಗಮನ ಹರಿಸಿಲ್ಲ’ ಎಂದು ಗ್ರಾಮಸ್ಥ ನಿಂಗಪ್ಪ ಕುರುಬರ ಆರೋಪಿಸಿದರು.

ಸ್ಮಶಾನದ ಬೂದಿ ಅಪಾರ್ಟ್‌ಮೆಂಟ್‌ಗೆ

ಹುಬ್ಬಳ್ಳಿಯ ವಿದ್ಯಾನಗರದ ಸ್ಮಶಾನದ ಪಕ್ಕದಲ್ಲಿರುವ ಸಂಗಮ ಅಪಾರ್ಟ್‌ಮೆಂಟ್‌ಗೂ ನೀರು ನುಗ್ಗಿತ್ತು. ಕೋವಿಡ್‌ನಿಂದ ಮೃತಪಟ್ಟವರನ್ನು ಅದೇ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದು, ಮೃತದೇಹದ ಬೂದಿ ನೀರಿನಲ್ಲಿ ಸೇರಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದೆ. ಇದರಿಂದ ಅಲ್ಲಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರತಿ ದಿನ ಐದಾರು ಮೃತ ದೇಹಗಳನ್ನು ಇಲ್ಲಿ ಸುಡುತ್ತಿದ್ದು, ಅದರ ಹೊಗೆ ಮತ್ತು ಪಿಪಿಇ ಕಿಟ್‌ ಸುಟ್ಟ ಪ್ಲಾಸ್ಟಿಕ್‌ ವಾಸನೆಯಿಂದ ಬೇಸತ್ತು ಹೋಗಿದ್ದೇವೆ. ಪ್ರತಿ ಬಾರಿ ಮಳೆ ಬಂದಾಗ, ಸ್ಮಶಾನದಲ್ಲಿ ಬಿದ್ದ ನೀರು ಬೂದಿಯೊಂದಿಗೆ ಅಪಾರ್ಟ್‌ಮೆಂಟ್‌ಗೆ ಬರುತ್ತದೆ. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ಪುಷ್ಪಾ ನಾಯಕ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT