ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮರುಮೌಲ್ಯಮಾಪನದಲ್ಲಿ ಅಂಕ ಏರಿಕೆ, ಮೌಲ್ಯಮಾಪಕರಿಗೆ ಭಾರಿ ದಂಡ

Last Updated 21 ಜನವರಿ 2023, 6:42 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2021ರ ಆಗಸ್ಟ್‌ನಲ್ಲಿ ನಡೆದಿದ್ದ ಬಿ.ಎಸ್ಸಿ 3ನೇ ಸೆಮಿಸ್ಟರ್ ಪರೀಕ್ಷೆ ಮೌಲ್ಯಮಾಪನದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದರಿಂದ 17 ಜನ ಮೌಲ್ಯಮಾಪಕರಿಗೆ ಭಾರಿ ಮೊತ್ತದ ದಂಡ ವಿಧಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

ಕೋವಿಡ್–19 ಸಂದರ್ಭದಲ್ಲಿ ಬಿ.ಎಸ್ಸಿ 3ನೇ ಸೆಮಿಸ್ಟರ್‌ನ ರಾಸಾಯನ ವಿಜ್ಞಾನ ವಿಷಯದಲ್ಲಿ ಶೇ30ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಮರುಮೌಲ್ಯಮಾಪನಕ್ಕೆ ಆಗ್ರಹಿಸಿದ್ದರು.

ವಿ.ವಿಯು ಎರಡನೇ ಬಾರಿ ಮೌಲ್ಯಮಾಪನ ನಡೆಸಿದಾಗ ಉತ್ತೀರ್ಣರಾದವರ ಸಂಖ್ಯೆ ಶೇ70ಕ್ಕೆ ಏರಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾಲಯ, ತನಿಖೆಗೆ ಸಮಿತಿ ರಚಿಸಿತ್ತು. ಅಸಮರ್ಪಕ ಮೌಲ್ಯಮಾಪನವಾಗಿರುವುದನ್ನು ಸಮಿತಿ ಖಾತ್ರಿಪಡಿಸಿ, ಮೌಲ್ಯಮಾಪಕರಿಗೆ ದಂಡ ವಿಧಿಸಲು ಸಿಂಡಿಕೇಟ್‌ಗೆ ಶಿಫಾರಸು ಮಾಡಿತು. ಅದರಂತೆ, ಪ್ರತಿ ಉತ್ತರ ಪತ್ರಿಕೆಗೆ ₹5 ಸಾವಿರದಂತೆ ದಂಡ ವಿಧಿಸಲಾಗಿದೆ.

ಪರಿಣಾಮ, ಪ್ರತಿ ಮೌಲ್ಯಮಾಪಕರು ಕನಿಷ್ಠ ₹2 ಲಕ್ಷದಿಂದ ₹7 ಲಕ್ಷದವರೆಗೆ ವಿಶ್ವವಿದ್ಯಾಲಯಕ್ಕೆ ದಂಡ ಭರಿಸಬೇಕಾಗಿದೆ. 10 ಮೌಲ್ಯಮಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇವರಲ್ಲಿ ಹಲವರು ಅತಿಥಿ ಉಪನ್ಯಾಸಕರಾಗಿರುವುದರಿಂದ ಭಾರಿ ಚರ್ಚೆಗೆ ಕಾರಣವಾಗಿದೆ.

‘1, 3 ಹಾಗೂ 5ನೇ ಸೆಮಿಸ್ಟರ್‌ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದೇವೆ. 1 ಹಾಗೂ 5ನೇ ಸೆಮಿಸ್ಟರ್‌ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಮೌಲ್ಯಮಾಪನದ ನಂತರ ಮಾಡರೇಟರ್ ಹಾಗೂ ಮುಖ್ಯಸ್ಥರು ಸಹ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಸಮ್ಮತಿಸಿದ್ದಾರೆ. ಈಗ ನಮ್ಮ ತಪ್ಪು ಮಾತ್ರ ಹೇಗಾಗುತ್ತದೆ. ಮೌಲ್ಯಮಾಪನವನ್ನು ಮೇಲಧಿಕಾರಿಗಳ ಸೂಚನೆಯಂತೆಯೇ ನಡೆಸಲಾಗಿದೆ’ ಎಂದು ನೊಂದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ, ‘ನಾನು ವಿವಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ನಡೆದ ವಿಷಯವಾಗಿದೆ. ಇಲ್ಲಿ ಸಮಿತಿಯ ಶಿಫಾರಸಿನಂತೆ ಸಿಂಡಿಕೇಟ್ ನಿರ್ಣಯ ತೆಗೆದುಕೊಂಡಿದೆ. ಮರುಮೌಲ್ಯಮಾಪನದಲ್ಲಿ ಹಲವರು ಹೆಚ್ಚು ಅಂಕ ಗಳಿಸಿದ್ದರೆ, ಕೆಲವರು ಕಡಿಮೆ ಅಂಕ ಪಡೆದಿದ್ದಾರೆ. ವಿ.ವಿ ಇತಿಹಾಸದಲ್ಲೇ ಇಂಥ ಪ್ರಕರಣ ನಡೆದಿರುವುದು ಇದೇ ಮೊದಲು. ದಂಡ ವಿಧಿಸಿರುವುದನ್ನು ರದ್ದು ಪಡಿಸುವಂತೆ ಮೌಲ್ಯಮಾಪಕರು, ಕುಲಪತಿ ಅವರಿಗೆ ಮನವಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT