ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಮೆಟ್ರೊ: ಓ ಪಾದಚಾರಿ, ನಿನಗೆಲ್ಲಿದೆ ಸುಗಮ ದಾರಿ?

Last Updated 10 ಜನವರಿ 2020, 19:45 IST
ಅಕ್ಷರ ಗಾತ್ರ

ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ ವ್ಯಾಪಾರ ಚಟುವಟಿಕೆಗಳಿಗೆ ಹೆಸರಾಗಿದ್ದು, ‘ಛೋಟಾ ಬಾಂಬೆ’ ಎಂದೂ ಕರೆಯುತ್ತಾರೆ. ನಾಲ್ಕೂ ದಿಕ್ಕುಗಳನ್ನು ಸಂಪರ್ಕಿಸುವ ಹೆದ್ದಾರಿಗಳು, ದೇಶದ ಯಾವುದೇ ಮೂಲೆಗೂ ಸಂಪರ್ಕ ಸೇತುವಾಗಿರುವ ಇಲ್ಲಿನ ರೈಲು ನಿಲ್ದಾಣ ಹಾಗೂ ಪ್ರಮುಖ ನಗರಗಳಿಗೆ ತಲುಪಬಹುದಾದ ವಿಮಾನ ಸೌಲಭ್ಯವಿರುವುದು ಈ ನಗರದ ಹೆಗ್ಗಳಿಕೆ. ಹಾಗಾಗಿ, ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಬೆರಳೆಣಿಕೆಯ ನಗರಗಳಲ್ಲಿ ಹುಬ್ಬಳ್ಳಿಯೂ ಒಂದು.

ಸ್ಮಾರ್ಟ್ ಸಿಟಿ ‘ಗರಿ’ ಹೊತ್ತಿರುವ ನಗರದ ಬೆಳವಣಿಗೆಗೆ ತಕ್ಕಂತೆ, ಇಲ್ಲಿ ಜನಸ್ನೇಹಿ ಫುಟ್‌ಪಾತ್ ವ್ಯವಸ್ಥೆ ಇದೆಯೇ ಎಂದು ಒಮ್ಮೆ ಕಣ್ಣಾಡಿಸಿದರೆ ನಿರಾಶೆಯಾಗದೇ ಇರದು. ಜನರು ವಾಹನಗಳ ಸಂದಣಿಯಲ್ಲಿ ಸಿಲುಕದೆ, ಸುರಕ್ಷಿತವಾಗಿ ನಡೆದು ಸಾಗಲು ಸುಗಮವಾಗಬೇಕಿದ್ದ ಪಾದಚಾರಿ ಮಾರ್ಗಗಳು, ಜನರ ಪಾಲಿಗೆ ದುರ್ಗಮವೆನಿಸಿವೆ. ಹಾಗಾಗಿಯೇ, ಇಲ್ಲಿನ ಬಹುತೇಕ ರಸ್ತೆಗಳಲ್ಲಿ ವಾಹನ ಜಂಗುಳಿ ಜತೆಗೆ, ಜನ ಜಂಗುಳಿಯೂ ಸಾಮಾನ್ಯವಾಗಿದೆ.

ನಗರದ ಹೃದಯ ಭಾಗವಾದ ಚನ್ನಮ್ಮನ ವೃತ್ತ, ಜನತಾ ಬಜಾರ್, ಹಳೇ ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾ ಬಜಾರ್‌, ದಾಜಿಬಾನ ಪೇಟೆ, ಕೊಪ್ಪೀಕರ ರಸ್ತೆ, ಸ್ಟೇಷನ್ ರಸ್ತೆ, ದುರ್ಗದ ಬೈಲ್, ಹಳೇ ಹುಬ್ಬಳ್ಳಿ ದುರ್ಗದ ಬೈಲ್, ಕಮರಿ ಪೇಟೆ, ಕೇಶ್ವಾಪುರ, ನೀಲಿಜನ್ ರಸ್ತೆ, ಸರಾಫ ಗಲ್ಲಿ, ಮೂರು ಸಾವಿರ ಮಠದ ರಸ್ತೆ, ಇಂಡಿ ಪಂಪ್ ವೃತ್ತ, ಗಣೇಶ ಪೇಟೆ, ಸಿಬಿಟಿ... ಹೀಗೆ ಜನರಿಂದ ಸದಾ ಗಿಜಿಗಿಡುವ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಇದ್ದೂ ಇಲ್ಲದಂತಿವೆ.

ಅತಿಕ್ರಮಣದ ಹಲವು ರೂಪ

ನಗರದ ಪ್ರಮುಖ ರಸ್ತೆಗಳಲ್ಲಿ ಒಮ್ಮೆ ಸಂಚರಿಸಿದರೆ, ಪಾದಚಾರಿ ಮಾರ್ಗ ಹೇಗೆಲ್ಲಾ ಅತಿಕ್ರಮಣಗೊಂಡಿದೆ ಎಂಬುದು ಕಣ್ಣಿಗೆ ರಾಚುತ್ತದೆ. ದುರ್ಗದ ಬೈಲ್ ಹಾಗೂ ಇತರ ಮಾರುಕಟ್ಟೆ ಪ್ರದೇಶಗಳ ಫುಟ್‌ಪಾತ್ ಮಾರ್ಗವನ್ನು ರಸ್ತೆ ಬದಿ ವ್ಯಾಪಾರಿಗಳು ಆವರಿಸಿಕೊಂಡಿದ್ದಾರೆ. ಇನ್ನುಳಿದೆಡೆ ವಾಹನ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿವೆ. ಜನರು ವಿಧಿ ಇಲ್ಲದೆ, ಇವುಗಳ ಮಧ್ಯೆ ಕೊಸರಿಕೊಂಡು ಓಡಾಡಬೇಕಿದೆ.

ರಸ್ತೆಯ ಬದಿ ಕಟ್ಟಡ, ಮಳಿಗೆ ಅಥವಾ ಇತರ ಕೆಲಸಗಳನ್ನು ಕೈಗೊಂಡಾಗಲೂ ಫುಟ್‌ಪಾತ್‌ ಅನ್ನು ಕೆಲ ದಿನಗಳ ಮಟ್ಟಿಗೆ ಬಂದ್ ಮಾಡಲಾಗಿರುತ್ತದೆ. ಕಟ್ಟಡ ನಿರ್ಮಾಣ ಮಾಡುವವರು ಪಾದಚಾರಿ ಮಾರ್ಗದಲ್ಲೇ ಮರಳು, ಸಿಮೆಂಟ್, ಇಟ್ಟಿಗೆ ಅಥವಾ ಕಟ್ಟಡದ ಅವಶೇಷವನ್ನು ರಾಶಿ ಹಾಕುವುದುಂಟು.

‘ದಾಜಿಬಾನ ಪೇಟೆ, ಮಾರ್ಕೆಟ್, ಹಳೇ ಪಿ.ಬಿ. ರಸ್ತೆ ಸೇರಿದಂತೆ ಕೆಲವೆಡೆ ಅಂಗಡಿಯವರು ವಸ್ತುಗಳನ್ನು ಫುಟ್‌ಪಾತ್‌ನಲ್ಲಿ ಜೋಡಿಸುವ ಮೂಲಕ, ಪಾದಚಾರಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡುತ್ತಾರೆ. ಕೆಲವೆಡೆ ಶಾಶ್ವತವಾಗಿ ಗೂಡಂಗಡಿಗಳು ನಿರ್ಮಾಣವಾಗಿವೆ. ಚನ್ನಮ್ಮ ವೃತ್ತದ ಹಿಂಭಾಗದ ರಸ್ತೆಯಲ್ಲಿರುವ ವ್ಯಾಪಾರಿಗಳು ಗುಜರಿ ವಸ್ತು ಮತ್ತು ಟೈಯರ್‌ಗಳನ್ನು ರಸ್ತೆಯಲ್ಲೇ ಗುಡ್ಡೆ ಹಾಕಿರುತ್ತಾರೆ. ಟೆಂಡರ್ ಶ್ಯೂರ್ ರಸ್ತೆಯ ಫುಟ್‌ಪಾತ್‌ನಲ್ಲೂ ವಾಹನಗಳ ನಿಲುಗಡೆ ಅವ್ಯಾಹತವಾಗಿ ನಡೆಯುತ್ತಿದೆ. ಕೆಲ ರಸ್ತೆಗಳು ಚಾಟ್ಸ್‌ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾರುವ ತಳ್ಳು ಗಾಡಿಗಳ ಅಡ್ಡವಾಗಿ ಮಾರ್ಪಡುತ್ತವೆ. ಇಲ್ಲಿ ಬರುವ ಗ್ರಾಹಕರು ರಸ್ತೆಯಲ್ಲೇ ತಮ್ಮ ವಾಹನ ನಿಲ್ಲಿಸುವುದರಿಂದ, ಸಂಚಾರಕ್ಕೂ ತೊಂದರೆಯಾಗುವುದುಂಟು’ ಎಂದು ವಿದ್ಯಾರ್ಥಿ ಆನಂದ ಕಮತರ ಬೇಸರ ವ್ಯಕ್ತಪಡಿಸಿದರು.

ಅಗೆದು ಹಾನಿ ಮಾಡುವುದಂಟು

ಕೇಬಲ್ ಅಳವಡಿಕೆ, ನೀರಿನ ಪೈಪ್‌ಲೈನ್ ಸೇರಿದಂತೆ ವಿವಿಧ ಕಾರಣಗಳಿಗಾಗಿಯೂ ಪಾದಚಾರಿ ಮಾರ್ಗವನ್ನು ಅಗೆದು, ಹಾಗೆಯೇ ಬಿಟ್ಟು ಜನರು ಓಡಾಡಲು ಆಗದಂತೆ ಮಾಡುವುದು ಕೂಡ ಸಾಮಾನ್ಯವಾಗಿದೆ. ಮುಖ್ಯ ರಸ್ತೆಗಳಲ್ಲೇ ಇಂತಹ ಅವ್ಯವಸ್ಥೆ ನಡೆದಿದ್ದರೂ, ಪಾಲಿಕೆ ಕಣ್ಮುಚ್ಚಿಕೊಂಡು ಕುಳಿತಿರುತ್ತದೆ.

‘ಹೆಸ್ಕಾಂ, ಜಲಮಂಡಳಿ ಸೇರಿದಂತೆ ಕೆಲ ಖಾಸಗಿ ಕಂಪನಿಗಳು ರಸ್ತೆ ಅಥವಾ ಪಾದಚಾರಿ ಮಾರ್ಗವನ್ನು ಅಗೆಯುವುದುಂಟು. ಕೆಲಸ ಮುಗಿದ ಬಳಿಕ, ಮುಂಚೆ ಇದ್ದ ಹಾಗೆಯೇ ಆ ಮಾರ್ಗವನ್ನು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ, ಅಂತಹವರಿಗೆ ನೋಟಿಸ್ ಕೊಟ್ಟು ದಂಡ ವಿಧಿಸಬಹುದಾಗಿದೆ. ಕೆಲವರು ಅಗೆದ ಸ್ಥಳವನ್ನು ಮುಚ್ಚಲು ಪಾಲಿಕೆಗೆ ಇಂತಿಷ್ಟು ಮೊತ್ತದ ಹಣವನ್ನು ನೀಡುತ್ತಾರೆ. ಆಗ ಪಾಲಿಕೆ ಪುನರ್‌ನಿರ್ಮಾಣ ಕೆಲಸ ಮಾಡುತ್ತದೆ’ ಎಂದು ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಈ. ತಿಮ್ಮಪ್ಪ ಹೇಳಿದರು.

ಇಲ್ಲಿ ಪಾದಚಾರಿ ಎಲ್ಲಿ?

ಕೇಂದ್ರ ರಸ್ತೆ ಅನುದಾನದಡಿ ಹಳೇ ಪಿ.ಬಿ. ರಸ್ತೆಯ ಬಂಕಾಪುರ ಚೌಕದಿಂದಿಡಿದು ಚನ್ನಮ್ಮನ ವೃತ್ತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಪಾದಚಾರಿಗಳಿಗಾಗಿ ಎಲ್ಲಿಯೂ ಫುಟ್‌ಪಾತ್‌ ನಿರ್ಮಿಸಿಲ್ಲ. ರಸ್ತೆಯ ಅಂಚನ್ನು ನೆಲಮಟ್ಟಕ್ಕೆ ಪೂರ್ಣಗೊಳಿಸದೆ ಅಪಾಯಕಾರಿಯಾದ ರೀತಿಯಲ್ಲಿ ಬಿಡಲಾಗಿದೆ. ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ, ಅಪಘಾತ ಗ್ಯಾರಂಟಿ. ಅಷ್ಟೊಂದು ಅವೈಜ್ಞಾನಿಕವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ.

‘ರಸ್ತೆಯಲ್ಲಿರುವ ಮನೆಗಳ ಹಾಗೂ ಅಂಗಡಿಗಳ ಗೋಡೆಯ ಮಟ್ಟಕ್ಕೆ ಬರುವಷ್ಟು ಎತ್ತರವಾಗಿ ರಸ್ತೆ ನಿರ್ಮಿಸಲಾಗಿದೆ. ಬಾಗಿಲುಗಳು ಕೂಡ ರಸ್ತೆಗೇ ಹೊಂದಿಕೊಂಡಂತಿವೆ. ಅತ್ಯಂತ ಇಕ್ಕಟ್ಟಾಗಿದ್ದ ಈ ರಸ್ತೆಯನ್ನು ಸರಿಯಾಗಿ ವಿಸ್ತರಣೆ ಮಾಡಲಿಲ್ಲ. ಸ್ಥಳೀಯರ ವಿರೋಧದಿಂದಾಗಿ ಇದ್ದ ಸ್ಥಿತಿಯಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹಾಗಾಗಿ, ಪಾದಚಾರಿ ಮಾರ್ಗ ಮತ್ತು ಪಾರ್ಕಿಂಗ್ ಸೌಲಭ್ಯ ಈ ರಸ್ತೆಯಲ್ಲಿ ಮರೀಚಿಕೆಯಾಗಿದೆ’ ಎಂದು ವ್ಯಾಪಾರಿ ಅಬ್ದುಲ್ ಕರೀಂಸಾಬ್ ಹೇಳಿದರು.

ಹಳೇ ಪಿ.ಬಿ. ರಸ್ತೆ ಹೊರತುಪಡಿಸಿ ಸಿಆರ್‌ಎಫ್‌ನಡಿಯೇ ನಿರ್ಮಾಣಗೊಂಡಿರುವ ವಿದ್ಯಾನಗರ, ದೇಶಪಾಂಡೆ ನಗರದ ರಸ್ತೆಗಳಲ್ಲಿ ನಿಯಮದ ಪ್ರಕಾರವೇ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ.

ಗ್ಯಾರೇಜ್ ವಾಹನಗಳ ಹಾವಳಿ

ಕಾಟನ್ ಮಾರ್ಕೆಟ್, ನೀಲಿಜನ್ ರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗಗಳೂ ಅತಿಕ್ರಮಣಕ್ಕೊಳಗಾಗಿವೆ. ಗ್ಯಾರೇಜ್‌, ಗೂಡಂಗಡಿ, ಪಾರ್ಕಿಂಗ್‌ನಿಂದಾಗಿ ಇಲ್ಲಿ ಜನರು ನಡೆದುಕೊಂಡು ಓಡಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಾಟನ್‌ ಮಾರ್ಕೆಟ್‌ನಲ್ಲಿ ಸರಕು ಸಾಗಣೆ ವಾಹನಗಳ ಭರಾಟೆ ಹೆಚ್ಚಾಗಿರುವುದರಿಂದ, ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ಯಾವಾಗಲೂ ಇದ್ದೇ ಇರುತ್ತದೆ. ಗ್ಯಾರೇಜ್‌ನವರು, ಟೈಯರ್ ಅಂಗಡಿಯವರು ಫುಟ್‌ಪಾತ್‌ಗಳಲ್ಲೇ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಪಕ್ಕದದಲ್ಲೇ ಸಂಚಾರ ಠಾಣೆ ಇದ್ದರೂ, ಚಾಲಕರು ಯಾವುದೇ ಭಯವಿಲ್ಲದೆ ವಾಹನಗಳನ್ನು ರಸ್ತೆ ಬದಿ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಾರೆ. ಪಾಲಿಕೆ
ಅಧಿಕಾರಿಗಳು ಹಾಗೂ ಪೊಲೀಸರು ಕೆಲವೊಮ್ಮೆ ಇಲ್ಲಿ ತೆರವು ಮಾಡಿಸಿದರೂ, ಮೂರ್ನಾಲ್ಕು ದಿನದ ಬಳಿಕ ಯಥಾಸ್ಥಿತಿ ಮುಂದುವರಿಯುತ್ತದೆ.

ಹೀಗಿರಬೇಕು ಫುಟ್‌ಪಾತ್‌

ಕನಿಷ್ಠ 40 ಅಡಿ ಅಗಲವಿರುವ ಜನನಿಬಿಡ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು ಇರಬೇಕು. ಗರಿಷ್ಠ 10 ಅಡಿವರೆಗಿನ ಈ ಮಾರ್ಗಕ್ಕೆ ಪೇವರ್ ಹಾಕಬೇಕು. ಸುರಕ್ಷತೆಯ ದೃಷ್ಟಿಯಿಂದ, ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಜನರು ಸುಲಭವಾಗಿ ರಸ್ತೆಗಿಳಿಯಂತೆ ಅಡ್ಡವಾಗಿ ಕಬ್ಬಿಣ ಅಥವಾ ಸಿಮೆಂಟ್‌ ತಡೆಗಳನ್ನು ನಿರ್ಮಿಸಬೇಕು. ಒಂದು ಸಿಗ್ನಲ್‌ನಿಂದ ಮತ್ತೊಂದು ಸಿಗ್ನಲ್‌ವರೆಗೆ ಈ ರೀತಿ ಮಾಡುವುದರಿಂದ ಪಾದಚಾರಿಗಳು ರಸ್ತೆಗಿಳಿದು ವಾಹನ ಸಂಚಾರಕ್ಕೆ ತೊಂದರೆಯುಂಟು ಮಾಡಲು ಅವಕಾಶವಿರುವುದಿಲ್ಲ.

‘ಮಾಹಿತಿ ನೀಡದೆ ಅನಧಿಕೃತ ಅಂಗಡಿ ತೆರವು’

‘ಕೆಎಂಸಿ ಕಾಯ್ದೆ– 1976ರ 288 (ಡಿ) ಪ್ರಕಾರ, ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದರೆ, ಯಾವುದೇ ಮಾಹಿತಿ ನೀಡದೆ ತೆರವು ಮಾಡಬಹುದಾಗಿದೆ. ಪಾಲಿಕೆಯ ನಿಯಂತ್ರಣ ಕೊಠಡಿ ಹಾಗೂ ವಲಯ ಕಚೇರಿಗಳಿಗೆ ಫುಟ್‌ಪಾತ್ ಅತಿಕ್ರಮಣದ ಬಗ್ಗೆ ಸಾರ್ವಜನಿಕರಿಂದ ಬರುವ ದೂರುಗಳ ಮೇರೆಗೆ, ಆಗಾಗ ಕಾರ್ಯಾಚರಣೆ ನಡೆಸುತ್ತಲೇ ಇರುತ್ತೇವೆ. ಗೂಡಂಗಡಿಗಳನ್ನು, ತಳ್ಳು ಗಾಡಿಗಳನ್ನು ಹಾಗೂ ಅಂಗಡಿಯವರು ರಸ್ತೆ ಬದಿಯಲ್ಲಿಡುವ ವಸ್ತುಗಳನ್ನು ಎತ್ತಿಕೊಂಡು ಬರುತ್ತೇವೆ. ವಾಪಸ್ ಕೊಡುವುದೇ ಇಲ್ಲ. ಕೊಟ್ಟರೆ ಮತ್ತೆ ಅದನ್ನೇ ಮುಂದುವರಿಸುತ್ತಾರೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ಹೇಳಿದರು.

‘ಅಧಿಕೃತವಾಗಿ ಪರವಾನಗಿ ಪಡೆದ ಅಂಗಡಿಯವರು ಫುಟ್‌ಪಾತ್ ಅತಿಕ್ರಮಿಸಿದ್ದರೆ, ಅವರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡುತ್ತೇವೆ. ಅದಕ್ಕೂ ಬಗ್ಗದಿದ್ದರೆ, ಪರವಾನಗಿ ರದ್ದುಗೊಳಿಸುತ್ತೇವೆ. ಆದರೆ, ಅನಧಿಕೃತವಾಗಿ ವ್ಯಾಪಾರ ಮಾಡುವವರನ್ನು, ಅಂಗಡಿ ಇಟ್ಟುಕೊಂಡವರನ್ನು ಮಾಹಿತಿ ನೀಡದೆ ಎತ್ತಂಗಡಿ ಮಾಡುತ್ತೇವೆ. ಜತೆಗೆ, ದಂಡವನ್ನು ವಿಧಿಸುತ್ತೇವೆ’ ಎಂದು ತಿಳಿಸಿದರು.

‘ಜನರ ಹಾಗೂ ವ್ಯಾಪಾರಿಗಳ ಹಿತದೃಷ್ಟಿಯಿಂದ, ಕೆಲ ನಿಗದಿತ ಸ್ಥಳಗಳಲ್ಲಿ ಷರತ್ತಿನ ಮೇರೆಗೆ ವ್ಯಾಪಾರ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಆ ಸ್ಥಳಗನ್ನು ಹಾಕರ್ಸ್ ಝೋನ್ ಎಂದು ಕರೆಯಲಾಗುತ್ತದೆ. ಕಲಾದಗಿ ಓಣಿ, ನೆಹರೂ ನಗರ, ದುರ್ಗದ ಬೈಲ್ ಕೇಶ್ವಾಪುರದ ಸಂತೆ ಮೈದಾನ, ರವಿನಗರ ಸೇರಿದಂತೆ ಹುಬ್ಬಳ್ಳಿಯಲ್ಲಿ ಅಂತಹ 14 ಸ್ಥಳಗಳಿವೆ. ಇಲ್ಲಿ ವ್ಯಾಪಾರಕ್ಕೆ ಪೂರಕವಾದ ಸೌಕರ್ಯವಿರುತ್ತದೆ. ವ್ಯಾಪಾರಿಗಳಿಂದ ಇಂತಿಷ್ಟು ಶುಲ್ಕ ವಿಧಿಸಿ, ಗುರುತಿನ ಚೀಟಿ ನೀಡಲಾಗಿರುತ್ತದೆ’ ಎಂದು ವಿವರಿಸಿದರು.

‘ಅತಿಕ್ರಮಣ ತೆರವಿಗೆ ಪಡೆ ರಚನೆ’

‘ಹುಬ್ಬಳ್ಳಿ ಬೆಳವಣಿಗೆ ಹೊಂದಿದಂತೆ ಇಲ್ಲಿನ ಜನ ಸಾಂದ್ರತೆಯೂ ಹೆಚ್ಚಾಗಿದೆ. ಹಾಗಾಗಿ, ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಿದ್ದರೂ, ಅವುಗಳ ಬಳಕೆ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅತಿಕ್ರಮಣವಾಗುತ್ತಿದೆ. ಇದರ ತಡೆಗೆ ನಿರಂತರ ಕಾರ್ಯಾಚರಣೆಯೊಂದೇ ದಾರಿ. ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದಾಗ ಸಂಚಾರ ಪೊಲೀಸರು ಟೋಯಿಂಗ್ (ವಾಹನ ಎತ್ತಿಕೊಂಡು ಹೋಗುವುದು) ಮಾಡುವಂತೆ, ನಾವು ಕೂಡ ಮಾಡುವ ಆಲೋಚನೆ ಇದೆ. ಅದಕ್ಕಾಗಿ, ಪಾಲಿಕೆ ಸಿಬ್ಬಂದಿ ಮತ್ತು ಸಂಚಾರ ಪೊಲೀಸರನ್ನೊಳಗೊಂಡ ಪಡೆಯನ್ನು ರಚಿಸುವ ಆಲೋಚನೆ ಇದೆ’ ಎಂದು ಪಾಲಿಕೆಯ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಈ. ತಿಮ್ಮಪ್ಪ ಹೇಳಿದರು.

‘ವಾಹನ ಸಮೇತ ರಸ್ತೆಗಳಲ್ಲಿ ಸಂಚರಿಸುವ ಈ ಪಡೆಯು, ಫುಟ್‌ಪಾತ್ ಅತಿಕ್ರಮಿಸಿಕೊಂಡು ಇಟ್ಟಿರುವ ಅಂಗಡಿಗಳ ಸಾಮಾನುಗಳು, ಗೂಡಂಗಡಿ, ಗಾಡಿ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಿದೆ. ಚನ್ನಮ್ಮ ವೃತ್ತ ಸೇರಿದಂತೆ, ನಗರ ಪ್ರಮುಖ ಪ್ರದೇಶಗಳಲ್ಲಿ ನಿರಂತರವಾಗಿ ಈ ರೀತಿ ಕಾರ್ಯಾಚರಣೆ ನಡೆದರೆ, ಅತಿಕ್ರಮಣದಾರರು ಪಾದಚಾರಿ ಮಾರ್ಗದ ತಂಟೆಗೆ ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT