ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬ್ಯಾಂಕ್ ಉದ್ಯೋಗಿಗೆ ₹27.78 ಲಕ್ಷ ವಂಚನೆ

Published 23 ಜನವರಿ 2024, 5:40 IST
Last Updated 23 ಜನವರಿ 2024, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಬ್ಯಾಂಕ್ ಉದ್ಯೋಗಿ, ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ ಸೋಮಶೇಖರ್‌ ಬಿಲಗುಂದಿ ಅವರಿಂದ ₹27.78 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಅಪರಿಚಿತ ವ್ಯಕ್ತಿ ನಕಲಿ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ ಲಿಂಕ್‌ ಅನ್ನು ಸೋಮಶೇಖರ್ ಕ್ಲಿಕ್‌ ಮಾಡಿದ್ದಾರೆ. ಬಳಿಕ ಆರೋಪಿ ಅವರ ಮೊಬೈಲ್ ಸಂಖ್ಯೆಯನ್ನು ‘ಜೆ.ಪಿ ಮೋರ್ಗನ್ ಎಕ್ಸ್‌ಚೇಂಜ್ ಗ್ರೂಪ್‌’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿ ಹಣ ಹೂಡುವಂತೆ ಪ್ರೇರೇಪಿಸಿದ್ದಾನೆ.

ಆರಂಭದಲ್ಲಿ ಸೋಮಶೇಖರ ಅವರಿಂದ ಹಣ ಹಾಕಿಸಿಕೊಂಡು ಲಾಭ ನೀಡಿದ್ದಾನೆ. ಬಳಿಕ ಕೋಟಕ್ ಮಹಿಂದ್ರ ಬ್ಯಾಂಕ್‌ನಿಂದ ₹8.50 ಲಕ್ಷ, ಡಿಬಿಎಸ್ ಬ್ಯಾಂಕ್‌ನಿಂದ ₹17 ಲಕ್ಷ ಮತ್ತು 2.28 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹6.11 ಲಕ್ಷ ವಂಚನೆ:

ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿಸಿ ನಗರದ ಗದಗ ರಸ್ತೆಯ ಜನತಾ ಕ್ವಾರ್ಟರ್ಸ್‌ ನಿವಾಸಿ ಮುನಿಗೆಟ್ಟಿ ಬ್ಯೂಲಾ ಅವರಿಗೆ ₹6.11 ಲಕ್ಷ ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸ್‌ಆ್ಯಪ್ ಮೂಲಕ ಮುನಿಗೆಟ್ಟಿ ಅವರನ್ನು ಸಂಪರ್ಕಿಸಿರುವ ಅಪರಿಚಿತ ವ್ಯಕ್ತಿ, ಆರಂಭದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾನೆ. ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿ ಕೆಲವು ಟಾಸ್ಕ್‌ಗಳನ್ನು ನೀಡಿ, ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಸವಾರ ಸಾವು:

ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಬೈಕ್‌ ಸ್ಕಿಡ್ ಆಗಿ ಬಿದ್ದು, ಗಾಯಗೊಂಡಿದ್ದ ಬಸಪ್ಪ ಜಾನಕಾಯಿ (32) ಅವರು ಮೃತಪಟ್ಟಿದ್ದಾರೆ.

ಚಾಲಕರಾಗಿರುವ ಬಸಪ್ಪ ಅವರು ಅಗಡಿಯಿಂದ ದ್ಯಾಮಾಪುರಕ್ಕೆ ಹೋಗುತ್ತಿದ್ದಾಗ ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT