ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಟಿ ಬಚಾವೊ...’ ಹೆಸರಲ್ಲಿ ಪಾಲಕರಿಗೆ ವಂಚನೆ

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಖಾತೆಗೆ ₹ 2 ಲಕ್ಷದಿಂದ ₹ 10 ಲಕ್ಷ ನೀಡುವ ವದಂತಿ
Last Updated 16 ಜನವರಿ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಬೇಟಿ ಬಚಾವೊ ಬೇಟಿ ಪಢಾವೊ' ಯೋಜನೆಯಡಿ ಹೆಣ್ಣು ಮಕ್ಕಳ ಬ್ಯಾಂಕ್‌ ಖಾತೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ ಎಂದು ಪಾಲಕರನ್ನು ನಂಬಿಸಿ, ₹20ಕ್ಕೆ ಅರ್ಜಿ ಮಾರಾಟ ಮಾಡಿ ವಂಚಿಸುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಿಂದ ಸುಮಾರು ಎರಡು ಸಾವಿರ ಅರ್ಜಿಗಳನ್ನು ಭರ್ತಿ ಮಾಡಿ, ನವದೆಹಲಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಅಂಚೆ ಮೂಲಕ ಕಳುಹಿಸಿದ್ದಾರೆ. ಭರ್ತಿ ಮಾಡಿರುವ ಅರ್ಜಿಗಳಿಗೆ ಶಾಲಾ ಮುಖ್ಯ ಶಿಕ್ಷಕರ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ಸಹಿ ಮತ್ತು ಮೊಹರು ಸಹ ಇವೆ. ಅಚ್ಚರಿಯ ಸಂಗತಿಯೆಂದರೆ, ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಯು ಧಾರವಾಡ ಜಿಲ್ಲೆಗೆ ಅನ್ವಯವಾಗಲ್ಲ!

ಬೇಟಿ ಬಚಾವೊ ಯೋಜನೆಯಡಿ ಕೇಂದ್ರ ಸರ್ಕಾರ 8 ರಿಂದ 32 ವರ್ಷದ ಮಹಿಳೆಯರಿಗೆ ₹ 2 ಲಕ್ಷದಿಂದ ₹ 10 ಲಕ್ಷ ನೀಡುತ್ತದೆ. ಈ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಿದೆ. ಹಿಂದಿ ಭಾಷೆಯಲ್ಲಿರುವ ಅರ್ಜಿ ಭರ್ತಿ ಮಾಡಿ, ಜನ್ಮ ದಿನಾಂಕದ ಪ್ರಮಾಣ ಪತ್ರ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ, ಪಾಲಿಕೆ ಸದಸ್ಯರ ಸಹಿಯೊಂದಿಗೆ ಕಳುಹಿಸಬೇಕು ಎಂದು ಜನರನ್ನು ನಂಬಿಸಿ, ಮೋಸ ಮಾಡಲಾಗುತ್ತಿದೆ.

‘ಯೋಜನೆಗೆ ಸಂಬಂಧಿಸಿ ವೀರಾಪುರ ಓಣಿ, ಯಲ್ಲಾಪುರ ಓಣಿ, ಸೆಟ್ಲಮೆಂಟ್‌ ಭಾಗದಿಂದ ಸಾವಿರಾರು ಮಂದಿ ಅರ್ಜಿಗಳಿಗೆ ನನ್ನ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಪ್ರೋತ್ಸಾಹ ಹಣ ಬರುತ್ತದೆಯೋ ಇಲ್ಲವೋ ಎನ್ನುವುದು ನನಗೆ ಸ್ಪಷ್ಟವಿಲ್ಲ’ ಎಂದು ಪಾಲಿಕೆ 57ನೇ ವಾರ್ಡ್‌ನ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಕರು ಶಾಲೆಗೆ ಬಂದು ಜನ್ಮ ದಿನಾಂಕದ ಪ್ರಮಾಣ ಪತ್ರ ಪಡೆಯಲು ಮುಗಿ ಬೀಳುತ್ತಿದ್ದಾರೆ. ಇಂತಹ ಯಾವುದೇ ಯೋಜನೆಯಿಲ್ಲ ಎಂದರೂ ಕೇಳುತ್ತಿಲ್ಲ. ಪ್ರಮಾಣ ಪತ್ರ ನೀಡಲು ಪಟ್ಟು ಹಿಡಿದು, ಪಡೆದುಕೊಳ್ಳುತ್ತಿದ್ದಾರೆ’ ಎಂದು ಎರಡೆತ್ತಿನ ಮಠದ ಅಕ್ಕಮಹಾದೇವಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಜೋತ್ಸ್ನಾ ಗಿರಿಯನ್‌ ಹೇಳಿದರು.

‘ಈ ಯೋಜನೆಯಡಿ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಶಿಕ್ಷಣದ ಮಾಹಿತಿ, ಬಾಲ್ಯ ವಿವಾಹ ತಡೆ ಕುರಿತು ಜಾಗೃತಿ ಮೂಡಿಸಲು ಯೋಜನೆ ಇದಾಗಿದೆ. ಇತರ ಜಿಲ್ಲೆಗಳಿಗಿಂತ ಧಾರವಾಡ ಜಿಲ್ಲೆಯಲ್ಲಿ ಲಿಂಗಾನುಪಾತ ಹೆಚ್ಚಿರುವುದರಿಂದ ಇಲ್ಲಿ ಯೋಜನೆ ಅನುಷ್ಠಾನವಾಗಿಲ್ಲ. ವಂಚಕರ ಕುರಿತು ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಧಾರವಾಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಶೆಟ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT