ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈದ್ಗಾ’ ಮೈದಾನದ ಗಣೇಶ ಮೂರ್ತಿ ವಿಸರ್ಜನೆ ನಾಳೆ

Published 20 ಸೆಪ್ಟೆಂಬರ್ 2023, 16:06 IST
Last Updated 20 ಸೆಪ್ಟೆಂಬರ್ 2023, 16:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಸೆಪ್ಟೆಂಬರ್ 21ರಂದು ಮಧ್ಯಾಹ್ನ 11.45ಕ್ಕೆ ಹಮ್ಮಿಕೊಳ್ಳಲಾಗಿದ್ದು, ಸಂಜೆಯೊಳಗೆ ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ವಿಸರ್ಜನೆ ಮಾಡಲಾಗುವುದು’ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.

’ಮೆರವಣಿಗೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಬಿಜೆಪಿಯ ಪ್ರಮುಖರು ಹಾಗೂ ಗಜಾನನ ಉತ್ಸವ ಮಹಾಮಂಡಳಿಯವರು ಭಾಗವಹಿಸಲಿದ್ದು, ಎಲ್ಲ ಪಕ್ಷದವರು ಹಾಗೂ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಬೇಕು’ ಎಂದು ಅವರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

‘ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಠರಾವು ಪಾಸು ಮಾಡಲಾಗಿತ್ತು. ಆದರೆ, ಪಾಲಿಕೆ ಆಯುಕ್ತರು ಅನುಮತಿ ನೀಡುವಲ್ಲಿ ವಿಳಂಬ ತೋರಿದರು. ಇದರಿಂದ ನಾವು ಪಾಲಿಕೆ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಿದೆವು. ನಂತರ ಆಯುಕ್ತರು ಅನುಮತಿ ನೀಡಿದರು’ ಎಂದರು.

‘ನಗರದ ಹಲವಡೆ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆಯದಿರುವ ಮತ್ತು ಧಾರ್ಮಿಕ ವಿಷಯಕ್ಕಾಗಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿ, ’ಕ್ಷೇತ್ರದ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಕಾಮಗಾರಿಗಳನ್ನು ಬೇಗನೆ ಮುಗಿಸಲು ಸಂಬಂಧಿಸಿದ ಅಧಿಕಾರಿ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದರು.

ವಿಧಾನಪರಿಷತ್‌ ಸದಸ್ಯ ಪ್ರದೀಪ್‌ ಶೆಟ್ಟರ್, ಪಾಲಿಕೆ ಮೇಯರ್‌ ವೀಣಾ ಬರದ್ವಾಡ, ರಾಜಣ್ಣ ಕೊರವಿ, ವೀರಣ್ಣ ಸವಡಿ, ರವಿನಾಯಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT