ಮಂಗಳವಾರ, ಜುಲೈ 27, 2021
23 °C
ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಶಶಿಕಲಾ ಜೊಲ್ಲೆ ಸಭೆ

ಮೂರನೇ ಅಲೆ ಎದುರಿಸಲು ಸಿದ್ಧತೆ: ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಜಿಲ್ಲೆಯ 144 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಮಕ್ಕಳಿಗಾಗಿ ಕೋವಿಡ್ ಕಾಳಜಿ ಕೇಂದ್ರ ಸಜ್ಜುಗೊಂಡಿದ್ದು, ನಗರ ವ್ಯಾಪ್ತಿಯಲ್ಲಿ 10ರಿಂದ 20 ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ’ ಎಂದು ಮಹಿಳಾ-ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಕೋವಿಡ–19 ಸಂಭವನೀಯ ಮೂರನೇ ಅಲೆ ಎದುರಿಸಲು ಸಿದ್ಧತೆ ಕುರಿತಂತೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಭಾವ್ಯ ಕೋವಿಡ್ 3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತೆ ಕುರಿತು ಪ್ರವಾಸ ಕೈಗೊಂಡಿದ್ದೇನೆ. ಅದರಂತೆಯೇ ಜಿಲ್ಲೆಯಲ್ಲಿ 16 ವರ್ಷದೊಳಗಿನ ಮಕ್ಕಳ ಸಂಖ್ಯೆ 4.6 ಲಕ್ಷ ಇದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.‌

‘ಕೋವಿಡ್ ಮೊದಲನೇ ಅಲೆಯಲ್ಲಿ 1479 ಮಕ್ಕಳು, ಎರಡನೇ ಅಲೆಯಲ್ಲಿ 1143 ಮಕ್ಕಳು ಸೋಂಕಿಗೆ ತುತ್ತಾದರೂ, ಅವರಲ್ಲಿ ಗಂಭೀರ ಸ್ವರೂಪದ ಲಕ್ಷಗಳು ಕಾಣಿಸಲಿಲ್ಲ. ಇವರಲ್ಲಿ 18 ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೂರನೇ ಅಲೆಯ ಸ್ವರೂಪ ಕುರಿತು ಈಗಲೇ ಏನನ್ನೂ ಹೇಳುವಂತಿಲ್ಲ. ಹೀಗಾಗಿ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ, ಆಮ್ಲಜನಕ ಪೂರೈಕೆ, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಕೊಠಡಿ, ಚಿಕ್ಕ ಮಕ್ಕಳೊಂದಿಗೆ ತಾಯಂದಿರು ಇರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಹಲವು ದಾನಿಗಳು ಈ ಅಲೆ ಎದುರಿಸಲು ನೆರವಾಗಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ’ ಎಂದರು.

‘ಜಿಲ್ಲೆಯಲ್ಲಿ ಇಬ್ಬರು ಪಾಲಕರನ್ನು ಕಳೆದುಕೊಂಡ ಎರಡು ಕುಟುಂಬಗಳ ಮೂವರು ಮಕ್ಕಳು ಇದ್ದಾರೆ. ಇವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಈಗಾಗಲೇ ಯೋಜನೆ ಘೋಷಿಸಿದೆ. ಹೀಗೆ ಪಾಲಕರನ್ನು ಕಳೆದುಕೊಂಡ ಇಂಥ ಮಕ್ಕಳ ಆರೈಕೆಗೆ ಹತ್ತಿರದ ಸಂಬಂಧಿಕರು ನಿರಾಕರಿಸಿದಲ್ಲಿ ಅಥವಾ ಇಲ್ಲದಿದ್ದಲ್ಲಿ ಅಂಥವರನ್ನು ಇಲಾಖೆ ಕೇಂದ್ರದಲ್ಲೇ ಜೋಪಾನ ಮಾಡಲಾಗುವುದು. ನಂತರದಲ್ಲಿ ದತ್ತು ಕೊಡುವ ಕುರಿತು ಚಿಂತಿಸಲಾಗುವುದು’ ಎಂದರು.

ಉಣಕಲ್‌ನಲ್ಲಿರುವ ಬಾಲ ಮಂದಿರದಲ್ಲಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ಹಾಗೂ ಸಾಮಗ್ರಿಗಳನ್ನು ಅಧಿಕಾರಿಗಳು ನೀಡದೇ, ಮನೆಗೆ ಒಯ್ಯುವ ಬಗ್ಗೆ ಮಕ್ಕಳೇ ನಿರ್ದೇಶಕರಿಗೆ ಹಾಗೂ ಸಿಎಂ ಅವರಿಗೆ ಪತ್ರ ಬರೆದಿದ್ದರು. ಈ ಮಾಹಿತಿಯನ್ನು ತಮ್ಮ ಗಮನಕ್ಕೆ ತಾರದ ಅಧಿಕಾರಿಗಳ ವಿರುದ್ಧ ಸಚಿವರು ವೇದಿಕೆಯಲ್ಲೇ ಗರಂ ಆದರು. ಈ ಕುರಿತು ಕೈಗೊಂಡಿರುವ ತನಿಖಾ ವರದಿಯನ್ನು ಶೀಘ್ರದಲ್ಲಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು