ಬುಧವಾರ, ಅಕ್ಟೋಬರ್ 20, 2021
25 °C
ಧಾರವಾಡ: ಐದು ವರ್ಷಗಳಲ್ಲಿ 218 ಪೋಕ್ಸೊ ಪ್ರಕರಣ ದಾಖಲು

ದೌರ್ಜನ್ಯದ ಮುಷ್ಠಿಯಲಿ ಕಿಶೋರಿಯರು!

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 70ರ ವೃದ್ಧನಿಂದ 12 ವರ್ಷದ ಬಾಲಕಿಯ ಮೇಲೆ‌ ಅತ್ಯಾಚಾರ, ಬಾಡಿಗೆಗಿದ್ದ ಕುಟುಂಬದ ಒಂಬತ್ತು ವರ್ಷದ ಬಾಲಕಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ, ಶಾಲೆಗೆ ತೆರಳುವ ಬಾಲಕಿಯನ್ನು ಸಂಬಂಧಿಯೊಬ್ಬ ಮನೆಗೆ ಕರೆದೊಯ್ದು ಅತ್ಯಾಚಾರ, ಭಿಕ್ಷೆ ಬೇಡುತ್ತಿದ್ದ ಬಾಲಕಿಗೆ ಎಗ್ ರೈಸ್ ಆಸೆ ತೋರಿಸಿ ಯುವಕನಿಂದ ಅತ್ಯಾಚಾರ...

ಇವು ಒಂದು ತಿಂಗಳ ಈಚೆಗೆ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು. ಪಾಲಕರ ದೂರಿನ ಮೇರೆಗೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ಸಹ ಬಂಧಿಸಲಾಗಿದೆ. ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲಿವೆ.

ಐದು ವರ್ಷಗಳಲ್ಲಿ(2017-2021) ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 218 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ವರ್ಷ ಈವರೆಗೆ(ಅ.‌8) 33 ಪ್ರಕರಣಗಳು ದಾಖಲಾಗಿವೆ. 

ಅತ್ಯಾಚಾರ ಮತ್ತು ಬಾಲಕಿಯರ ಮೇಲೆ‌ ನಡೆಯುವ ಲೈಂಗಿಕ ದೌರ್ಜನ್ಯ ಖ‌ಂಡಿಸಿ ದೇಶದಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಆಗ್ರಹಿಸುತ್ತಿವೆ. ಆದರೂ, ಇಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.

‘ಹತ್ತಿರದವರೇ ಈ ಕೃತ್ಯ ನಡೆಸುವುದರಿಂದ ಪಾಲಕರಿಗೆ ಹೇಳಲು ಹಿಂದೇಟು ಹಾಕುತ್ತಾರೆ. ಕೆಲವು ಪಾಲಕರಿಗೆ ವಿಷಯ ಗೊತ್ತಾದರೂ, ಬೆದರಿಕೆ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಪ್ರಕರಣಗಳನ್ನು ಮುಚ್ಚಿಡುತ್ತಾರೆ’ ಎಂದು ಪೊಲೀಸರು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲಾ ಬೈಲೂರ, ‘ಇತ್ತೀಚೆಗೆ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ. ಶೋಷಣೆಗೆ ಒಳಗಾದ ಮಕ್ಕಳಿಗೆ ಮಕ್ಕಳ‌ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ವೆಚ್ಚ ಭರಿಸಿ, ಸಮಾಲೋಚನೆ ನಡೆಸಲಾಗುತ್ತದೆ. ಅಗತ್ಯವಿದ್ದರೆ, ಬಾಲ ಮಂದಿರದಲ್ಲಿ ಆರೈಕೆ ಮಾಡಲಾಗುತ್ತದೆ. ದೌರ್ಜನ್ಯ ನಿಯಂತ್ರಣ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ, ಸ್ತ್ರೀ ಶಕ್ತಿ ಸಂಘಟನೆ, ಗ್ರಾಮ‌ ಪಂಚಾಯಿತಿ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ಮಕ್ಕಳಲ್ಲಿ ಜಾಗೃತಿ ಮೂಡಿಸಿ’: ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಬಹುತೇಕ ಪೋಕ್ಸೊ ಪ್ರಕರಣಗಳಲ್ಲಿ ಆರೋಪಿ ಕುಟುಂಬಕ್ಕೆ ಹತ್ತಿರದವನೇ ಆಗಿರುತ್ತಾನೆ. ಮನೆಗೆ ಬರುವ ಮತ್ತು ಮನೆಯಲ್ಲಿರುವ ಪುರುಷರ ಬಗ್ಗೆ ತಾಯಿ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಯಾವ ಅಂಗ ಮುಟ್ಟಿದರೆ ಎಚ್ಚರ ವಹಿಸಬೇಕು ಎನ್ನುವ ತಿಳಿವಳಿಕೆ ಪಾಠವನ್ನು ಮಗಳಿಗೆ ಹೇಳಬೇಕು. ಬಾಲ್ಯದಲ್ಲಿ ಲೈಂಗಿಕ ಶೋಷಣೆಗೆ ಒಳಗಾದ ಮಗು, ಯೌವ್ವನದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ತಾನು ಬಳಸಲ್ಪಟ್ಟವಳು ಎನ್ನುವ ಕಾರಣಕ್ಕೆ ಮದುವೆಗೂ ಹಿಂಜರಿಯಬಹುದು’ ಎಂದು ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಅಭಿಪ್ರಾಯಪಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.