ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಬೆಂಗಳೂರು, ಚೆನೈ, ಹೈದರಬಾದ್ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ‘ಕೇಂದ್ರೀಯ ಹೊಸ ಬಸ್‌ನಿಲ್ದಾಣ’ದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು, ನೆಮ್ಮದಿಯ ನಿದ್ದೆಗೂ ಅವರು ಪರದಾಡುವಂತಾಗಿದೆ.
ಶಿಥಿಲಗೊಂಡಿರುವ ಚಾವಣಿಯಿಂದ ಮಳೆ ನೀರು ಸೋರುತ್ತಿದ್ದು, ಪ್ರಯಾಣಿಕರು ಕೊಡೆಗಳನ್ನು ಹಿಡಿದು ಆಸನದಲ್ಲಿ ಕೂರುತ್ತಾರೆ. ಚಾವಣಿ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿದೆ. ನಿಲ್ದಾಣದಲ್ಲಿನ 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿದ್ದು, 12ನೇ ಪ್ಲಾಟ್‌ಫಾರ್ಮ್ ಸಂಪೂರ್ಣ ಜಲಾವೃತವಾಗಿದೆ.
ಪ್ರವೇಶ ದ್ವಾರದ ಬಲಭಾಗದಲ್ಲಿ ಟೆಂಡರ್ ಪಡೆದಿರುವ ಎರಡು ಅಂಗಡಿಗಳಿದ್ದು, ಸೋರುವ ಮಳೆನೀರಿನಿಂದ ರಕ್ಷಿಸಿಕೊಳ್ಳಲು, ಮುಂಭಾಗಕ್ಕೆ ಚಾವಣೆ ಹಾಕಿಕೊಂಡಿದ್ದಾರೆ. ಪ್ರಯಾಣಿಕರು ಸೂಟ್‌ಕೇಸ್, ಬ್ಯಾಗುಗಳನ್ನು ಹೊತ್ತುಕೊಂಡು ಆಯಾ ಪ್ಲಾಟ್‌ಫಾರ್ಮ್‌ಗಳಿಗೆ ನೀರಿನಲ್ಲೇ ದಾಟಿಕೊಂಡು ಹೋಗಬೇಕು.
‘ಮಳೆ ನೀರು ಸೋರದಂತೆ ನಿಯಂತ್ರಿಸಲು, ಕಟ್ಟಡದ ಕೆಲ ಕಡೆ ಭೀಮ್‌ಗಳಿಗೆ ತಗಡು ಹಾಕಲಾಗಿದೆ. ಸಿಬ್ಬಂದಿ ವಿಶ್ರಾಂತಿಗೃಹದ ಗೋಡೆಗಳು ತೇವಗೊಂಡಿದ್ದು, ಒಂದು ಭಾಗವನ್ನು ಈಚೆಗಷ್ಟೇ ಸರಿಪಡಿಸಿ ಪ್ಲಾಸ್ಟರ್ ಮಾಡಲಾಗಿದೆ. ಆದರೆ, ಪೂರ್ಣಪ್ರಮಾಣದ ಸುವ್ಯವಸ್ಥೆ ಮಾಡಲಾಗಿಲ್ಲ’ ಎಂದ ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ತಿಳಿಸಿದರು.
‘1 ಮತ್ತು 1ಬಿ, 7, 7ಎ, 7ಬಿ, 4, 4ಎ ಮತ್ತು 4ಬಿ ಪ್ಲಾಟ್‌ಫಾರ್ಮ್‌ನ ಚಾವಣಿಯಿಂದ ಮಳೆ ನಿಂತ ಬಳಿಕವೂ ನೀರು ಸುರಿಯುತ್ತದೆ. ಅಲ್ಲಿರುವ ಆಸನಗಳೆಲ್ಲ ಒದ್ದೆಯಾಗಿದ್ದು, ಅಲ್ಲಿ ಕೂರಲು ಆಗುವುದಿಲ್ಲ. ಒಮ್ಮೊಮ್ಮೆ ತಾವು ತಂದ ಬಟ್ಟೆಯಲ್ಲೇ ಆಸನಗಳನ್ನು ಒರೆಸಿಕೊಂಡು ಬಸ್‌ಗೆ ಕಾಯುತ್ತ ಕೂರುತ್ತೇವೆ’ ಎಂದು ಪ್ರಯಾಣಿಕರು ಹೇಳಿದರು.
‘ಸರ್ಕಾರದ ಕಟ್ಟಡದ ಬಾಳಿಕೆ ಅವಧಿ ಕನಿಷ್ಠ 60 ವರ್ಷ. 2000ನೇ ಇಸವಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆಯಾಗಿದೆ. ಅನುದಾನ ಕೊರತೆಯಿಂದ ಬಸ್ ನಿಲ್ದಾಣ ನಿರ್ವಹಣೆ ಕಷ್ಟವಾಗಿದೆ. ಪೈಪ್‌ಗಳಲ್ಲಿ ಕಸ ತುಂಬಿದ್ದು, ಮಳೆ ನೀರು ಹರಿಯುವುದಿಲ್ಲ. ಅದಕ್ಕೆ ಚಾವಣಿ ಮೇಲೆ ನೀರು ಹರಿಯದೇ ಸೋರುತ್ತದೆ. ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರ ಯರಗುಪ್ಪ ತಿಳಿಸಿದರು.
ಬಸ್ ನಿಲ್ದಾಣದ ಮೇಲ್ದರ್ಜೆಗೆ ₹20 ಕೋಟಿ ವೆಚ್ಚದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಳೆನೀರು ಸೋರುವಿಕೆ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಲಾಗುವುದುಭರತ್ ಎಸ್. ವ್ಯವಸ್ಥಾಪಕ ನಿರ್ದೇಶಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಮಾರುಕಟ್ಟೆ ಪ್ರದೇಶದಿಂದ ದೂರವಿದ್ದ ಕಾರಣ ಪ್ರಯಾಣಿಕರು ಈ ನಿಲ್ದಾಣಕ್ಕೆ ಹೋಗುತ್ತಿರಲಿಲ್ಲ. ಸೂಕ್ತ ಸೌಲಭ್ಯಗಳು ಆಗಲೂ ಇರಲಿಲ್ಲ. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. –ಆರ್.ಎಫ್.ಕವಳಿಕಾಯಿ ಕಾರ್ಯಾಧ್ಯಕ್ಷ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.