ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್‌ನಲ್ಲಿ ಲೆಕ್ಕಕ್ಕಿಲ್ಲದ ನಾಯಕ: ಗೋವಿಂದ ಕಾರಜೋಳ

Published 25 ಡಿಸೆಂಬರ್ 2023, 15:54 IST
Last Updated 25 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್‌ನಲ್ಲಿ ಲೆಕ್ಕಕ್ಕಿಲ್ಲದ ನಾಯಕ. ಅಲ್ಲಿ ಅವರಿಗೆ ಮಾನಸಿಕ ಹಿಂಸೆಯಾಗಿದೆ. ಅದನ್ನು ತಡೆದುಕೊಳ್ಳಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಅದಕ್ಕೆ ಹೆಚ್ಚು ಬೆಲೆ ಕೊಡುವ ಅವಶ್ಯಕತೆ ಇಲ್ಲ’ ಎಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಹೇಳಿದರು.

‘ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಬ್ರಿಟಿಷರ ಬೂಟು ನೆಕ್ಕುತ್ತಿದ್ದರು’ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಆರೋಪಕ್ಕೆ ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಿರಿಯ ರಾಜಕಾರಣಿಯಾಗಿ ನಾಲಿಗೆ ಮೇಲೆ ಹಿಡಿತ ಇರಬೇಕು. ಈ ರೀತಿ ಮಾತನಾಡಿದರೆ ಅವರು ದೊಡ್ಡವರಾಗುವುದಿಲ್ಲ. ರಾಜಕಾರಣದಲ್ಲಿ ಇರುವವರು ಜನರಿಗೆ ಆದರ್ಶವಾಗಿರಬೇಕು. ಇದು ಅವರ ಹೀನ ಸಂಸ್ಕೃತಿ ತೋರಿಸುತ್ತದೆ’ ಎಂದರು.

‘ಯುವಕರಿಗೆ ಆದ್ಯತೆ ನೀಡುವ ದೃಷ್ಟಿಯಿಂದ ವರಿಷ್ಠರು ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಹಿರಿಯರಾದವರು ಅವರಿಗೆ ಮಾರ್ಗದರ್ಶನ ಮಾಡಿ ಪಕ್ಷವನ್ನು ಸದೃಢಗೊಳಿಸುವ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಆಗಿರುವ ತಪ್ಪು ತಿದ್ದಲು ಪಕ್ಷದ ಎಲ್ಲ ನಾಯಕರೂ ಕೈಜೋಡಿಸಬೇಕು’ ಎಂದು ಹೇಳಿದರು.

‘ವಿ.ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬುದು ಊಹಾಪೋಹ ಮಾತ್ರ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಕೂರಲು ಯಾರೂ ಬಯಸುವುದಿಲ್ಲ. ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಧಾನಿ ಅಭ್ಯರ್ಥಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬಂದ ನಂತರ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಚುನಾವಣೆ ಬರುವುದರೊಳಗೆ ಅದು ಛಿದ್ರ ಛಿದ್ರವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT