ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್ ವಿತರಣೆಗೆ ಮಾಜಿ ಸಚಿವ ಸಂತೋಷ್ ಲಾಡ್‌ಗೆ ಸ್ವಪಕ್ಷೀಯರ ಅಡ್ಡಿ

Last Updated 9 ಜೂನ್ 2021, 16:38 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಮುಗದ ಗ್ರಾಮದಲ್ಲಿ ಆಹಾರ ಕಿಟ್ ಹಂಚಲು ಬಂದ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ವಿರುದ್ಧ ಪಕ್ಷದವರೇ ಆದ ನಾಗರಾಜ ಛಬ್ಬಿ ಬೆಂಬಲಿಗರು ಎಂದು ಹೇಳಿಕೊಂಡ ಗುಂಪು ಅಡ್ಡಿಪಡಿಸಿ ‘ಧಿಕ್ಕಾರ’ ಕೂಗಿದ ಪ್ರಕರಣ ಬುಧವಾರ ಜರುಗಿತು.

ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ನಾಗರಾಜ ಛೆಬ್ಬಿ ಅವರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಲಾಡ್ ಅವರು ಆಹಾರ ಕಿಟ್ ಹಂಚಲು ತೆರಳಿದ್ದು ಸಾಕಷ್ಟು ಗೊಂದಲ ಉಂಟು ಮಾಡಿರುವ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಜತೆಗೆ ಇದರ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಕ್ಷೇತ್ರದನಿಗದಿ, ಮನಗುಂಡಿ, ಮನಸೂರ, ಮುಗದ ಗ್ರಾಮಗಳಲ್ಲಿ ಆಹಾರದ ಕಿಟ್ ವಿತರಣೆಗೆ ಸಂತೋಷ ಲಾಡ್ ಬಂದಿದ್ದರು. ಈ ವೇಳೆ ಮುಗದ ಕ್ರಾಸ್ ಬಳಿ ಲಾಡ್ ಅವರನ್ನು ತಡೆದು ನಿಲ್ಲಿಸಿದ ಗುಂಪು, ಲಾಡ್ ವಿರುದ್ಧ ಘೋಷಣೆ ಕೂಗಿದರು. ಇಷ್ಟು ಮಾತ್ರವಲ್ಲ ನಾಗರಾಜ ಛಬ್ಬಿ ಪರ ಘೋಷಣೆಯೂ ಕೇಳಿ ಬಂತು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

‘ಇಷ್ಟು ದಿನ ಕ್ಷೇತ್ರಕ್ಕೆ ಬಂದಿಲ್ಲ. ಈಗ ಏಕೆ ಬಂದಿದ್ದೀರಿ? ನಿಮ್ಮ ಅವಶ್ಯಕತೆ ನಮಗೆ ಇಲ್ಲ’ ಎಂದು ಛಬ್ಬಿ ಬೆಂಬಲಿಗರು ಎಂದುಕೊಂಡ ಕೆಲ ಯುವಕರು ಲಾಡ್ ಅವರಿಗೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲಾಡ್, ‘ಇದನ್ನು ಪ್ರಶ್ನಿಸಲು ನೀವು ಯಾರು? ನೀವು ಕ್ಷೇತ್ರದ ಜನ ಅಲ್ಲವಲ್ಲ’ ಎಂದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಲಾಡ್, ದಿನ ಬಳಕೆಯ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಇಸ್ಮಾಯಿಲ್ ತಮಟಗಾರ, ಬಸವರಾಜ ಮರಿತಮ್ಮನವರ, ಸಹದೇವ ಪಾಗೋಜಿ, ದೀಪಕ್ ದುರ್ಗಾಯಿ, ರುದ್ರಪ್ಪ ಕೊಂಪಣ್ಣವರ, ನಿಂಗಪ್ಪ ಘಾಟಿನ, ಸುನೀಲ ಪಾಟೀಲ್, ನಾಮದೇವ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT