ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಹನುಮ ಜಯಂತಿ; ಭವ್ಯ ಮೆರವಣಿಗೆ

Published 23 ಏಪ್ರಿಲ್ 2024, 15:49 IST
Last Updated 23 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧೆಡೆ ಹನುಮ ಜಯಂತಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಎಸ್‌ಎಸ್‌ಕೆ ಯುವಕ ಸಂಘದ ವತಿಯಿಂದ  ಆಂಜನೇಯ ಮತ್ತು ಶ್ರೀರಾಮನ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು.

ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಜೈ ಹನುಮಾನ್‌, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಸಮಾಜದ ಯುವಕರು, ಹಿರಿಯರು, ಮಹಿಳೆಯರು ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡಿ.ಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೆರವಣಿಗೆಯು ಗಣಪತಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಜನತಾ ಬಜಾರ್‌, ಅಂಚಟಗೇರಿ ಓಣಿ, ಮೂರು ಸಾವಿರ ಮಠ, ಮಹಾವೀರ ಗಲ್ಲಿ, ಕಾಟವೆ ಬಿಲ್ಡಿಂಗ್ ಮೂಲಕ ತುಳಜಾಭವಾನಿ ದೇವಸ್ಥಾನ ವೃತ್ತ ತಲುಪಿತು.

ಸಂಘದ ಅಧ್ಯಕ್ಷ ಪ್ರಕಾಶ ಎಂ.ಬುರಬುರೆ, ಸಂಚಾಲಕ ಆನಂದ ಬದ್ದಿ, ವಿನಾಯಕ ಬದ್ದಿ, ಮುಖಂಡರಾದ ರಂಗಾ ಬದ್ದಿ, ಭಾಸ್ಕರ ಜಿತೂರಿ ಇದ್ದರು.

ವಿವಿಧೆಡೆ ಜಯಂತಿ ಆಚರಣೆ: ನಗರದ ವಿವಿಧೆಡೆ ಪವನಸುತನ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಬಂದ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಜಯಂತಿ ಅಂಗವಾಗಿ ಆಂಜನೇಯ ಮೂರ್ತಿಗೆ ಎಲೆ, ಬೆಣ್ಣೆ ಹಾಗೂ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ಹೋಮ, ಭಜನೆ, ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 

ಆಂಜನೇಯ ದೇವಸ್ಥಾನಗಳ ಎದುರು ಶಾಮಿಯಾನ ಹಾಕಿ, ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆ ಪಾನಕ, ಮಜ್ಜಿಗೆ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ, ಭಕ್ತಿಗೀತೆಗಳು ಮೊಳಗಿದವು.

ಹನುಮಾನ್ ಜಯಂತಿ ಪ್ರಯುಕ್ತ ಹುಬ್ಬಳ್ಳಿಯ ಮರಾಟಗಲ್ಲಿಯ ಹನುಮಾನ್ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು
ಹನುಮಾನ್ ಜಯಂತಿ ಪ್ರಯುಕ್ತ ಹುಬ್ಬಳ್ಳಿಯ ಮರಾಟಗಲ್ಲಿಯ ಹನುಮಾನ್ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

ವಿದ್ಯಾನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನ, ದಾಜಿಬಾನಪೇಟೆ, ಬಿಡ್ನಾಳ, ಕಮರಿಪೇಟೆ, ಮರಾಠಗಲ್ಲಿಯ ಹನುಮಾನ್‌ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ನಡೆಯಿತು.  ಹಳೇಹುಬ್ಬಳ್ಳಿಯ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ಹನುಮ ಮೂರ್ತಿಯ ತೊಟ್ಟಿಲೋತ್ಸವ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು, ತೊಟ್ಟಿಲು ತೂಗಿದರು. 

ನ್ಯೂ ಕಾಟನ್ ಮಾರ್ಕೆಟ್‌,  ಬಮ್ಮಾಪುರ ಓಣಿ, ಸಿಬಿಟಿ, ಹಳೇಹುಬ್ಬಳ್ಳಿ, ನಗರದ ದಿಡ್ಡಿ ಹನುಮ ಓಣಿ, ದೇಶಪಾಂಡೆ ನಗರ, ಗೋಕುಲ ಗ್ರಾಮದ ಆಂಜನೇಯ ದೇವಸ್ಥಾನಗಳಲ್ಲಿ ಸಂಭ್ರಮದಿಂದ ಹನುಮ ಜಯಂತಿ ಆಚರಿಸಲಾಯಿತು.

ಹುಬ್ಬಳ್ಳಿಯ ದಾಜಿಬಾನಪೇಟೆಯ ಹನುಮಾನ್ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ ಜರುಗಿತು
ಹುಬ್ಬಳ್ಳಿಯ ದಾಜಿಬಾನಪೇಟೆಯ ಹನುಮಾನ್ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ ಜರುಗಿತು

ಸಂಭ್ರಮದ ರಥೋತ್ಸವ: ಉಣಕಲ್‌ನಲ್ಲಿ ಹನುಮ ಮೂರ್ತಿ ಮೆರವಣಿಗೆ ಜರುಗಿತು. ನಾಗಶೆಟ್ಟಿಕೊಪ್ಪದಲ್ಲಿ ಮಾರುತಿ ಜಾತ್ರೋತ್ಸವದ ಪ್ರಯುಕ್ತ ಮತ್ತು ಗೋಪನಕೊಪ್ಪದ ಹನುಮಾನ್‌ ದೇವಸ್ಥಾನ, ಮಾರುತೇಶ್ವರ ದೇವಸ್ಥಾನಗಳಲ್ಲಿ ಹನುಮ ಜಯಂತಿ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಹುಬ್ಬಳ್ಳಿಯ ಬಿಡ್ನಾಳ ಗ್ರಾಮದಲ್ಲಿ ಹನುಮ ಜಯಂತಿ ಪ್ರಯುಕ್ತ ದೇವರ ಮೂರ್ತಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಹುಬ್ಬಳ್ಳಿಯ ಬಿಡ್ನಾಳ ಗ್ರಾಮದಲ್ಲಿ ಹನುಮ ಜಯಂತಿ ಪ್ರಯುಕ್ತ ದೇವರ ಮೂರ್ತಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು

ಸಾಮೂಹಿಕ ಗದಾ ಪೂಜೆ: ಹನುಮ ಜಯಂತಿಯ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ನಗರದ ವಿವಿಧ ದೇವಸ್ಥಾನಗಳಲ್ಲಿ ಸಾಮೂಹಿಕ ‘ಗದಾಪೂಜೆ' ನೆರವೇರಿಸಲಾಯಿತು. ಜತೆಗೆ ರಾಮರಾಜ್ಯದ ಪ್ರತಿಜ್ಞೆ ಮಾಡಲಾಯಿತು.

ಸಾಮೂಹಿಕ ಪ್ರಾರ್ಥನೆ, ಮಾರುತಿಯ ಆರತಿ, ಹನುಮಾನ್‌ ಚಾಲೀಸಾ ಪಠಣ, ಸಾಮೂಹಿಕ ನಾಮಜಪ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT