ಭಾನುವಾರ, ಏಪ್ರಿಲ್ 2, 2023
24 °C
ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಲು ಪಾಲಿಕೆ ಹೊಸ ಪ್ರಯತ್ನ

ತ್ವರಿತ ಸೇವೆಗೆ ತುರ್ತು ವಾಹನ: ಪಾಲಿಕೆ ಹೊಸ ಪ್ರಯತ್ನ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿ ದೊಡ್ಡ ಪಾಲಿಕೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮತ್ತು ಅಂದಾಜು 15 ಲಕ್ಷ ಜನಸಂಖ್ಯೆಯ ಅವಳಿನಗರದಲ್ಲಿ ಸಾರ್ವಜನಿಕರ ಸಮಸ್ಯೆಗಳೂ ಹೆಚ್ಚುತ್ತಿವೆ. ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಪಾಲಿಕೆಯು ಹೊಸ ಪ್ರಯೋಗಕ್ಕೆ ಮುಂದಾಗಿದೆ.

ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ನಿತ್ಯ ನೀಡುವ ದೂರಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ, ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ತುರ್ತು ವಾಹನಗಳ ಸೇವೆ ಶೀಘ್ರ ಆರಂಭಗೊಳ್ಳಲಿದೆ. ಹುಬ್ಬಳ್ಳಿ, ಧಾರವಾಡದಲ್ಲಿ ತಲಾ ಎರಡು ವಾಹನಗಳು ಸೇವೆ ಒದಗಿಸಲಿವೆ.

‘ತುರ್ತು ವಾಹನದಲ್ಲಿ ಚಾಲಕ, ಕಾರ್ಮಿಕ ಹಾಗೂ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿರಲಿದ್ದಾರೆ. ಗಟಾರ ಕಟ್ಟಿಕೊಂಡಾಗ, ರಸ್ತೆಗೆ ಅಡ್ಡವಾಗಿ ಮರ/ಕೊಂಬೆ ಬಿದ್ದಾಗ, ನೀರು ಪೋಲು ಸೇರಿದಂತೆ ಸಾರ್ವಜನಿಕರಿಗೆ ಅಡಚಣೆ ಉಂಟುಮಾಡುವ ವಿವಿಧ ದೂರುಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ.‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

12 ತಾಸು ಕಾರ್ಯಾಚರಣೆ:  ‘ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಒಟ್ಟು 12 ತಾಸು ಈ ವಾಹನಗಳು ಕಾರ್ಯನಿರ್ವಹಿಸಲಿವೆ. ತುರ್ತು ಕೆಲಸಗಳಿಗೆ ಅಗತ್ಯವಿರುವ ಸಲಕರಣೆಗಳು ಇರಲಿದ್ದು, ಮಳೆ ಹಾನಿ ಸೇರಿದಂತೆ ಇನ್ನಿತರ ಅವಘಡಗಳು ಸಂಭವಿಸಿದಾಗ ದಿನವಿಡೀ ಕಾರ್ಯಾಚರಣೆ ಮಾಡಲಿವೆ’ ಎಂದರು.

ಸದ್ಯ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ಸ್ಪಂದಿಸಲು ಪಾಲಿಕೆಯಲ್ಲಿ ನಿಯಂತ್ರಣ ಕೊಠಡಿ ವ್ಯವಸ್ಥೆ ಇದೆ. ದಿನದ 24 ತಾಸು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಸಾರ್ವಜನಿಕರಿಂದ ನಿತ್ಯ ದೂರುಗಳನ್ನು ಸ್ವೀಕರಿಸುತ್ತಾರೆ. ಸಮಸ್ಯೆ ತೀವ್ರತೆ ಮೇರೆಗೆ ದೂರುಗಳನ್ನು ವಿಂಗಡಿಸಿ, ಸಂಬಂಧಪಟ್ಟ ವಲಯ, ವಾರ್ಡ್‌ ಹಾಗೂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ನಿರ್ದಿಷ್ಟ ಕಾಲಮಿತಿ ಇಲ್ಲದಿದ್ದರೂ, ಆದಷ್ಟು ಬೇಗ ಸ್ಪಂದಿಸಬೇಕು ಎಂಬ ಸೂಚನೆ ಇದೆ.

‘ನಿಯಂತ್ರಣ ಕೊಠಡಿ ಮತ್ತು ತುರ್ತು ಸೇವೆಯ ವಾಹನಗಳ ಸೇವೆ ವಿಭಿನ್ನವಾಗಿರಲಿದೆ. ತಕ್ಷಣ ಪರಿಹರಿಸಬಲ್ಲ ಸಮಸ್ಯೆ ಇರುವ ಸ್ಥಳಕ್ಕೆ ಮಾತ್ರ ಈ ವಾಹನಗಳು ತೆರಳಿ ಸೇವೆ ಒದಗಿಸಲಿವೆ. ಹೆಚ್ಚು ಸಮಯ ತೆಗೆದುಕೊಳ್ಳುವ ದೊಡ್ಡ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸಲಿದ್ದಾರೆ’ ಎಂದು ಆಯುಕ್ತ ಗೋಪಾಲಕೃಷ್ಣ ಹೇಳಿದರು.

‘ತಪ್ಪು ಮಾಡಿದರೆ ಸ್ಥಳದಲ್ಲೇ ದಂಡ’

‘ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ತುರ್ತು ವಾಹನದಂತೆ, ತಪ್ಪು ಮಾಡಿದವರಿಗೆ ಸ್ಥಳದಲ್ಲೇ ದಂಡ ವಿಧಿಸುವ ತಂಡ ಸಹ ಅವಳಿನಗರದಲ್ಲಿ ಕಾರ್ಯನಿರ್ವಹಿಸಲಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಸೇರಿದಂತೆ ವಿವಿಧ ರೀತಿಯ ನಿಯಮ ಉಲ್ಲಂಘನೆಗಳಿಗೆ ಆರೋಗ್ಯ ನಿರೀಕ್ಷಕರ ತಂಡ ದಂಡ ವಿಧಿಸಲಿದೆ. ಅದಕ್ಕಾಗಿ, ತಂಡಕ್ಕೆ ಹ್ಯಾಂಡೆಡ್ ಯಂತ್ರ ನೀಡಲಾಗುವುದು’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು