ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಪುಟಗಳಲ್ಲಿ ಧಾರವಾಡ: ಜನರ ನಿರ್ಲಕ್ಷ್ಯಕ್ಕೆ ನಶಿಸುತ್ತಿರುವ ಸ್ಮಾರಕಗಳು

ರಾಷ್ಟ್ರೀಯ ಸ್ಮಾರಕಗಳು– ದೇವಸ್ಥಾನಗಳ ಸ್ಥಿತಿಗತಿ
Last Updated 6 ಡಿಸೆಂಬರ್ 2021, 15:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಶಿಕ್ಷಣ ಕಾಶಿಯಷ್ಟೆ ಅಲ್ಲದೇ ಐತಿಹಾಸಿಕವಾಗಿಯೂ ಅತ್ಯಂತ ಮಹತ್ವ ಪೂರ್ಣವಾದ ಸ್ಥಳವಾಗಿದೆ.ಬನವಾಸಿಯ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ದೇವಗಿರಿಯ ಯಾದವರು, ವಿಜಯನಗರ, ಬಿಜಾಪುರದ ಆದಿಲ್‌ ಶಾಹಿ, ಮರಾಠರು, ಹೈದರಾಲಿ, ಟಿಪ್ಪು ಸುಲ್ತಾನ್‌ ನಂತರ ಬ್ರಿಟಿಷರ ಆಳ್ವಿಕೆಯನ್ನು ಇದು ಕಂಡಿದೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಸ್ಮಾರಕಗಳು, ದೇವಸ್ಥಾನಗಳು ನಮ್ಮ ಕಣ್ಮುಂದೆ ಇವೆ. ಇತಿಹಾಸ ಜ್ಞಾನದ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ಹಲವಾರು ಸ್ಮಾರಕಗಳು, ದೇವಸ್ಥಾನಗಳು ನಶಿಸಿಹೋಗುವ ಆತಂಕದಲ್ಲಿವೆ.

‘ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರರು’ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿರುವ ಮಾತುಗಳು ಇತಿಹಾಸದ ಮಹತ್ವವನ್ನು ಸಾರುವಂತಿದೆ. ಇತಿಹಾಸವನ್ನು ಸಂರಕ್ಷಿಸಬೇಕು ಹಾಗೂ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ತಲುಪಿಸಬೇಕೆನ್ನುವ ಉದ್ದೇಶದಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಇಲಾಖೆಯುಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ಅಮರಗೋಳದಲ್ಲಿರುವ ಬನಶಂಕರಿ ದೇವಸ್ಥಾನಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ.

ಧಾರವಾಡ ಕೋಟೆಯ ದೃಶ್ಯ
ಧಾರವಾಡ ಕೋಟೆಯ ದೃಶ್ಯ

ಚಂದ್ರಮೌಳೇಶ್ವರ ದೇವಸ್ಥಾನ

ಇದು 12ನೇ ಶತಮಾನದಲ್ಲಿ, ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಾಣವಾಗಿರುವಂತಹದ್ದು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿವೆ. ಒಟ್ಟು ಹನ್ನೆರಡು ಬಾಗಿಲುಗಳಿವೆ. ಎರಡು ಶಿವಲಿಂಗಗಳಿದ್ದು ದ್ವಾರದಲ್ಲಿ ಎಲ್ಲ ಶಿವ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ನಂದಿಯ ವಿಗ್ರಹ ಇದೆ. ಒಂದು ಶಿವಲಿಂಗವು ಚತುರ್ಮುಖ ಲಿಂಗವಾಗಿದ್ದು ಅದು ಈ ದೇವಾಲಯದ ವಿಶೇಷವಾಗಿದೆ. ಆದುದರಿಂದ ಇದನ್ನು ಚತುರ್ಲಿಂಗೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಒಳಗೆ ಹಾಗೂ ಹೊರಗೆ ಶಿಲ್ಪಕಲೆಯ ಸುಂದರ ಕೆತ್ತನೆಗಳಿದ್ದು, ಆಕರ್ಷಕವಾಗಿದೆ.

ಬನಶಂಕರಿ ದೇವಸ್ಥಾನ

ಈ ದೇವಾಲಯವನ್ನು ಕ್ರಿ.ಶ. 1120ರಲ್ಲಿ ಸೌಧೊರೆ ಜಕ್ಕರಸ ಎಂಬಾತ ನಿರ್ಮಿಸಿದರೆಂದು ಇಲ್ಲಿನ ಶಾಸನ ಹೇಳುತ್ತದೆ. ಕೇಶವ ಮತ್ತು ಭೈರವ ದೇವರ ದೇವಸ್ಥಾನಗಳು ಇಲ್ಲಿವೆ. ಮರಳುಗಲ್ಲಿನಿಂದ ನಿರ್ಮಿತವಾದ ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಎರಡು ಗರ್ಭಗುಡಿಗಳಿವೆ. ಒಂದರಲ್ಲಿ ಭೈರವಿಯ ಶಿಲ್ಪವಿದೆ. ಇನ್ನೊಂದರಲ್ಲಿ ಶಿವಲಿಂಗವಿದೆ.

ಇವೆರಡೂ ದೇವಸ್ಥಾನಗಳನ್ನುಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಇಲಾಖೆಯು ಅಚ್ಚುಕಟ್ಟಾಗಿ ಸಂರಕ್ಷಿಸಿದೆ. ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲಾಗಿದೆ. ಸುಂದರ ಉದ್ಯಾನ ನಿರ್ಮಿಸಲು ಸಸಿಗಳನ್ನು ನೆಡಲಾಗಿದೆ. ಭದ್ರತಾ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಇಲಾಖೆಯಿಂದ ಕೈಗೊಳ್ಳಬಹುದಾದ ಬಹುತೇಕ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ದೇವಸ್ಥಾನದ ಸುತ್ತಲೂ ವಾಸವಿರುವ ಹಾಗೂ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ.

ದೇವಸ್ಥಾನದ ಸುತ್ತಲೂ ವಾಸವಿರುವ ಹಲವು ಕುಟುಂಬಗಳ ಜನರು ದೇವಸ್ಥಾನದ ಆವರಣದ ಗೋಡೆಯ ಮೇಲೆ ಬಟ್ಟೆ ಒಣಗಿಸಲು ಹಾಕುವುದು ಕಂಡುಬರುತ್ತದೆ. ಆವರಣ ಗೋಡೆಗೆ ಹೊಂದಿಕೊಂಡಂತೆ ಬಣವೆ ಕಟ್ಟಿಕೊಂಡಿದ್ದಾರೆ. ಐತಿಹಾಸಿಕ ಮಹತ್ವದ ದೇವಸ್ಥಾನಗಳ ಸೌಂದರ್ಯಕ್ಕೆ ಧಕ್ಕೆ ತರುವಂತಿವೆ.ಜಿಲ್ಲೆಯ ವಿವಿಧೆಡೆ ಸಿಗುವ ಪ್ರಾಚ್ಯವಸ್ತುಗಳು, ವೀರಗಲ್ಲು, ದೇವರ ಮೂರ್ತಿಗಳನ್ನು ಅಲ್ಲಲ್ಲಿ ದೇವಸ್ಥಾನಗಳಲ್ಲಿ ಇಟ್ಟು ಪೂಜೆ ಸಲ್ಲಿಸುವುದು ಕಂಡುಬಂದಿದೆ. ಇವುಗಳನ್ನು ಪುರಾತತ್ವ ಸರ್ವೇಕ್ಷಣಾಲಯ ಇಲಾಖೆಗೆ ಹಸ್ತಾಂತರಿಸಬೇಕು ಎನ್ನುವ ಮಾಹಿತಿ ಇವರಲ್ಲಿ ಇಲ್ಲದಿರುವುದು ಕಂಡುಬಂದಿದೆ.

ಪ್ರಚಾರದ ಕೊರತೆ

ಇತಿಹಾಸದ ಮಹತ್ವ ಸಾರುವ ಚಂದ್ರಮೌಳೇಶ್ವರ ಹಾಗೂ ಬನಶಂಕರಿ ದೇವಸ್ಥಾನಗಳ ಇರುವಿಕೆಯ ಬಗ್ಗೆ ಸುತ್ತಮುತ್ತಲಿನ ಜನರಿಗೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಇನ್ನಷ್ಟು ಪ್ರಚಾರ ಕೈಗೊಳ್ಳಬೇಕಾಗಿದೆ. ದೇವಸ್ಥಾನದ ಮಹತ್ವ ಸಾರುವ ಹಾಗೂ ಇಲ್ಲಿಗೆ ತೆರಳುವ ಮಾರ್ಗ ಸೂಚಿ ಫಲಕಗಳನ್ನು ಹಾಕಬೇಕು. ಬೇಲೂರು– ಹಳೇಬೀಡು ರೀತಿಯಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವನ್ನಾಗಿ ಇದನ್ನು ರೂಪಿಸಬಹುದು ಎನ್ನುತ್ತಾರೆ ಅಮರಗೋಳದ ನಿವಾಸಿ ಬಸವರಾಜ ಪಾಟೀಲ.

ದೇವಸ್ಥಾನಗಳ ಸುತ್ತಲಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ, ಬೇರೆಡೆ ಸ್ಥಳಾಂತರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಈ ದೇವಸ್ಥಾನಗಳಿಗೆ ತೆರಳುವ ಮಾರ್ಗ ಅತ್ಯಂತ ಚಿಕ್ಕದಾಗಿ, ವಾಹನಗಳಿಗೆ ಬರಲು ಹಾಗೂ ನಿಲ್ಲಿಸಲು ಜಾಗದ ಕೊರತೆ ಇದೆ. ಇದರ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಗ್ರಾಮಸ್ಥರಿಂದಲೇ ಜೀರ್ಣೋದ್ಧಾರ

ಗುಡಗೇರಿ: ಇಲ್ಲಿಗೆ ಸಮೀಪದ ಸಂಶಿ ಗ್ರಾಮದಲ್ಲಿ 12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅರಸರ ಕಾಲದಲ್ಲಿ ನಿರ್ಮಾಣವಾದ ಶಂಕರಲಿಂಗ ದೇವಸ್ಥಾನವಿದೆ. ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗಿದ್ದ ಈ ದೇವಸ್ಥಾನವನ್ನು ಗ್ರಾಮಸ್ಥರೇ ಸೇರಿಕೊಂಡು ಜೀರ್ಣೋದ್ಧಾರ ಮಾಡಿದ್ದಾರೆ. 2015ರಲ್ಲಿಯೇ ಇದಕ್ಕಾಗಿ ಸಮಿತಿ ರಚಿಸಿ, 2017ರಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜೀರ್ಣೋದ್ಧಾರಗೊಳಿಸಿದ್ದಾರೆ. ಇದರಲ್ಲಿರುವ ಶಂಕರಲಿಂಗಕ್ಕೆ ಬಸವರಾಜ ಹಿರೇಮಠ ಅವರು ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ.

ಪೂರ್ವಾಭಿಮುಖವಾಗಿ ಈ ದೇವಾಲಯ ಇದ್ದು ಅಂತರಾಳ, ನವರಂಗ, ಸಭಾ ಮಂಟಪ, ಮುಖ್ಯ ಮಂಟಪಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಗಜಲಕ್ಷ್ಮೀ ಕೆತ್ತನೆ ಇದ್ದು ಒಳಭಾಗದಲ್ಲಿ 12 ರಾಶಿಗಳ ಕೆತ್ತನೆಯ ಇದೆ. 4 ಅಂತರಾಳ ಕಲ್ಲಿನ ಕಂಬಗಳು, 12 ಗೋಡೆ ಕಂಬಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಶಿವ ದೇವಾಲಯದ ಬಳಿಯಿರುವ ಪುರಾತನ ಸ್ಮಾರಕ
ಶಿವ ದೇವಾಲಯದ ಬಳಿಯಿರುವ ಪುರಾತನ ಸ್ಮಾರಕ

ಕೋಟೆ ಗೋಡೆಗಿಲ್ಲ ರಕ್ಷಣೆ

ಧಾರವಾಡ: ಶೈಕ್ಷಣಿಕ ಕೇಂದ್ರ, ಸಾಂಸ್ಕೃತಿಕ ರಾಜಧಾನಿ ಎನ್ನುವ ಹೆಸರುಗಳಿಂದ ಗುರುತಿಸಿಕೊಂಡಿರುವ ಧಾರವಾಡದ ಹೆಜ್ಜೆ ಗುರುತುಗಳು ಇತಿಹಾಸದಲ್ಲಿಯೂ ಇವೆ. ಇಲ್ಲಿರುವ ಮಣಕಿಲ್ಲಾ ಕೋಟೆಯ ಬಾಗಿಲುಗಳೇ ಇದಕ್ಕೆ ಸಾಕ್ಷಿ. ಆದರೆ, ಸೂಕ್ತ ನಿರ್ವಹಣೆ ಕಾಣದೆ ಕೇವಲ ಎರಡು ಬಾಗಿಲುಗಳು ಮಾತ್ರ ಪಳಿಯುಳಿಕೆಯಂತೆ ಉಳಿದಿವೆ.

‘ಧಾರವಾಡ ಕೋಟೆ ಎಂಬುದು ಸಾಂಕೇತಿಕವಾಗಿ ಉಳಿದಿದೆಯಷ್ಟೇ. ನಿರ್ವಹಣೆ ಇಲ್ಲದೆ ಒಂದು ಸುಂದರ ಐತಿಹಾಸಿಕ ತಾಣ ನಾಶವಾಗುತ್ತಿದೆ. ಅತ್ತ ಕೋಟೆ ವ್ಯಾಪ್ತಿಯನ್ನು ಖಾಲಿ ಮಾಡಿಸಿ ಪುರಾತತ್ವ ಇಲಾಖೆ ನಿರ್ವಹಣೆಯನ್ನೂ ಮಾಡುತ್ತಿಲ್ಲ. ಇತ್ತ ಜನರಿಗೆ ತೊಂದರೆಯೂ ತಪ್ಪಿಲ್ಲ. ಕೋಟೆ ಪ್ರದೇಶ ಕೊಳಚೆಯಿಂದ ಕೂಡಿದೆ. ಅತ್ತ ಬ್ರಿಟಿಷ್ ಅಧಿಕಾರ ಥ್ಯಾಕ್ರೆ ಸಮಾಧಿಯೂ ಗಲೀಜಿನಲ್ಲಿದೆ. ಅದರ ನಿರ್ವಹಣೆಯನ್ನೂ ಇಲಾಖೆ ಮಾಡುತ್ತಿಲ್ಲ‘ ಎಂದು ಈ ಪ್ರದೇಶದ ನಿವಾಸಿ ಪಿ.ಎಚ್. ನೀರಲಕೇರಿ ಹೇಳಿದರು.

ಧಾರವಾಡ ಕಿಲ್ಲಾ ಇತಿಹಾಸ: ಇತಿಹಾಸದ ಪ್ರಕಾರ ಕ್ರಿ.ಶ. 1403ರಲ್ಲಿ ಧಾರಾರಾವ್ ಎಂಬುವವರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರು. ಎರಡು ಪ್ರವೇಶ ದ್ವಾರಗಳಿವೆ. ಎರಡಕ್ಕೂ ಮರದಿಂದ ಮಾಡಿದ ಬೃಹತ್ ಬಾಗಿಲುಗಳು ಇಂದಿಗೂ ಹಾಗೇ ಇವೆ. ಕೋಟೆಯು ಮಣ್ಣು ಹಾಗೂ ಗಚ್ಚಿನಿಂದ ನಿರ್ಮಿಸಲಾಗಿದೆ.

ನಿರ್ಲಕ್ಷ್ಯಕ್ಕೊಳಗಾದ ಬಸವಣ್ಣ ದೇಗುಲ

ಕಲಘಟಗಿ: 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ತಾಲ್ಲೂಕಿನ ತಂಬೂರದಲ್ಲಿರುವ ಬಸವಣ್ಣ ದೇವಸ್ಥಾನ ಅಭಿವೃದ್ಧಿಯಿಂದ ಮರೀಚಿಕೆಯಾಗಿದೆ. ಪ್ರತಿವರ್ಷ ಜಾತ್ರೆ ಸಭೆ ಸಮಾರಂಭಗಳು ನಡೆಯುತ್ತವೆ. ಕರ್ನಾಟಕದಾದ್ಯಂತ ಯಾತ್ರಾರ್ಥಿಗಳ ಆಕರ್ಷಿಸುವ ಪ್ರಮುಖ ದೇವಸ್ಥಾನಗಳಲ್ಲಿ ಇದು ಒಂದು. ದೇವಸ್ಥಾನದ ಆವರಣದಲ್ಲಿ ಚಾಲುಕ್ಯರ ಕಾಲದ ಶಾಸನಗಳು ಮತ್ತು ಅದರ ಕಲ್ಲುಗಳು, ಕುರುಹುಗಳು ಇದ್ದರೂ ಇವುಗಳ ಕಡೆ ಗಮನಹರಿಸಿದೆ ಹಾಗೆ ಬಿಟ್ಟಿದ್ದಾರೆ.

ಪ್ರಜಾವಾಣಿ ತಂಡ: ಶ್ರೀಕಾಂತ ಕಲ್ಲಮ್ಮನವರ, ಇ.ಎಸ್‌. ಸುಧೀಂದ್ರಪ್ರಸಾದ್‌, ವಾಸುದೇವ ಮುರಗಿ, ಕಲ್ಲಪ್ಪ ಮಿರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT