ಶುಕ್ರವಾರ, ಜೂನ್ 18, 2021
24 °C

ಕೋವಿಡ್–19 ಭೀತಿಯಲ್ಲೇ ಬಣ್ಣದಾಟದ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನಗರದ ತುಂಬೆಲ್ಲಾ ಮಂಗಳವಾರ ಬಣ್ಣದೋಕುಳಿ. ಕೆಂಪು, ಗುಲಾಬಿ, ಹಸಿರು, ನೀಲಿ ಸೇರಿದಂತೆ ಬಗೆಬಗೆಯ ಬಣ್ಣಗಳ ಲೋಕದಲ್ಲಿ ನಗರ ಮಿಂದೆದ್ದಿತು. ಕೋವಿಡ್–19 ಭೀತಿಯಲ್ಲೂ ಬಣ್ಣದ ಮೇಲಾಟವೇ ಹೆಚ್ಚಾಗಿತ್ತು.

ಯುವಕ, ಯುವತಿಯರು, ಚಿಣ್ಣರು, ಮಹಿಳೆಯರು, ಹಿರಿಯರು ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಕೋವಿಡ್–19 ಭೀತಿ ಇದ್ದುದರಿಂದ ನಗರದ ಮುರುಘಾಮಠ ಬಳಿಯ ಮಟ್ಟಿಪ್ಲಾಟ್ ನಿವಾಸಿಗಳು ರಾಸಾಯನಿಕ ಬಣ್ಣಗಳನ್ನು ತ್ಯಜಿಸಿ, ನೈಸರ್ಗಿಕ ಅರಿಶಿಣ ಪುಡಿಯ ಮಿಶ್ರಣದಿಂದ ಹೋಳಿ ಆಡಿ ಸಂಭ್ರಮಿಸಿದರು. ಸಂಗೀತದ ಸದ್ದಿಗೆ ಹೆಜ್ಜೆ ಹಾಕಿದರು.

ಬೂಸಪ್ಪ ಓಣಿ, ರಾಮನಗೌಡರ ಓಣಿ ಮುಂತಾದ ಕಡೆ ಕಾಮದಹನದ ನಂತರ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಯುವಕರು ಸೇರಿ ಬಣ್ಣ ಎರಚಾಡಿ ಸಂಭ್ರಮಿಸಿದರು. ಹಲಿಗೆಯ ‘ನಾದ’ದ ಜತೆಗೆ ಪೀಪಿಗಳ ಶಬ್ದ ಜೋರಾಗಿತ್ತು. ಗುಲಗಂಜಿಕೊಪ್ಪ, ಟಿಕಾರೆ ರಸ್ತೆ, ಲೈನ್‌ ಬಜಾರ್‌, ಭೋವಿಗಲ್ಲಿ, ಸಪ್ತಾಪುರ, ಜಯನಗರ, ರಜತ್‌ಗಿರಿ, ರೋಟ್ಸನ್ ಅಪಾರ್ಟ್‌ಮೆಂಟ್‌ ಮುಂತಾದ ಕಡೆಗಳಲ್ಲಿ ನಾಗರಿಕರು ಹೋಳಿಯ ಸಡಗರದಲ್ಲಿ ಪಾಲ್ಗೊಂಡಿದ್ದರು. ಪಿಚಕಾರಿಗಳಲ್ಲಿ ಬಣ್ಣ ತುಂಬಿ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮತ್ತು ಜನರ ಮೇಲೆ ಬಣ್ಣ ಎರಚಿ ಮಕ್ಕಳು ಸಂಭ್ರಮಿಸಿದರು.

ನಗರದ ಸಂಗಮ್‌ ವೃತ್ತದಲ್ಲಿ ಡಿಜೆ ಸೌಂಡ್‌ ಸಿಸ್ಟಮ್‌ ಅಳವಡಿಸಲಾಗಿತ್ತು. ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಕರು ಡಿಜೆ ಅಬ್ಬರಕ್ಕೆ ಹೆಜ್ಜೆ ಹಾಕಿ ಸಂತಸಪಟ್ಟರು. ನಗರದ ಟಿಕಾರೆ ರಸ್ತೆಯಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಡಿಗೆ ಒಡೆಯುವಲ್ಲಿ ಯುವಕರ ದಂಡು ತಲ್ಲೀನವಾಗಿತ್ತು. ಗಡಿಗೆ ಒಡೆಯಲು ಮೇಲೆ ಹತ್ತುವವರಿಗೆ ಕೆಳಗೆ ನಿಂತವರು ಬಣ್ಣದ ನೀರು ಎರಚಿ ಒಡೆಯದಂತೆ ತಡೆಯುತ್ತಿದ್ದರು.

ಕಳೆದ ವರ್ಷ ಹೋಳಿ ಸಂದರ್ಭದಲ್ಲಿ ಕಟ್ಟಡ ಕುಸಿತ ಪ್ರಕರಣ ನಡೆದ ಕಾರಣ, ಇಡೀ ನಗರವೇ ಹೋಳಿ ಆಚರಿಸದೇ ಶೋಖದಲ್ಲಿ ಮುಳುಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮದ್ಯದ ಗುಂಗಿನಲ್ಲಿ ತೇಲಾಡಿದ ಯುವಕರು...

ಹೋಳಿ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮದ್ಯ ಮಾರಾಟ ಇಲ್ಲದಿದ್ದರೂ, ಮದ್ಯ ಸೇವನೆ ಅವ್ಯಾಹತವಾಗಿ ನಡೆಯಿತು. ಅಲ್ಲಲ್ಲಿ ಕೆಲ ಯುವಕರು ಮದ್ಯ ಸೇವಿಸಿ ಬಣ್ಣ ಆಡಿ ಸಂಭ್ರಮಿಸಿದರು. ನಗರದ ಹೊರ ವಲಯದ ಮಾವಿನ ತೋಟಗಳಲ್ಲಿನ ಮರಗಳ ನೆರಳಿನಲ್ಲಿ ಬಣ್ಣದ ಆಡಿ ಗುಂಡು–ತುಂಡಿನ ಔತಣ ಸವಿದರು.

ಹೋಳಿ ಹಬ್ಬದ ಸಂಭ್ರಮ ಜೋರಾಗಿದ್ದರಿಂದ ಅಂಗಡಿಗಳು ತೆರೆದಿರಲಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು